ಹುಣಸೂರು: ಪಶ್ಚಿಮ ಬಂಗಾಳದ ಕೊಲ್ಕತಾ ಹೌರಾ ರೈಲ್ವೆ ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ಆಟಗಾರರು ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ವಿಮಾನದಲ್ಲಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಕ್ರೀಡಾಪಟುಗಳು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ಸುರಕ್ಷಿತವಾಗಿ ವಾಪಸಾಗಲು ನೆರವಾದ ಮಾಜಿ ಶಾಸಕ ಎಚ್.ಪಿ.ಮಂಜುನಾಥರ ಮೈಸೂರಿನ ನಿವಾಸಕ್ಕೆ ಭಾನುವಾರ ಸಂಜೆ ತೆರಳಿ ಅಭಿನಂದನೆ ಸಲ್ಲಿಸಿದರು.
ನಮ್ಮ ತಾಲೂಕಿನ ಕ್ರೀಡಾಪಟುಗಳು ಸೇರಿದಂತೆ ರಾಜ್ಯದ ೩೮ ಆಟಗಾರರು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ್‌ಲಾಡ್‌ರೊಂದಿಗೆ ಚರ್ಚಿಸಿ ಸುರಕ್ಷಿತವಾಗಿ ಬರಲು ನೆರವಾಗಿದ ಎಚ್.ಪಿ.ಮಂಜುನಾಥ್‌ರಿಗೆ ಕೃತಜ್ಞತೆ ಸಲ್ಲಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ್‌ಲಾಡ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ರಿಸರ್ವೇಷನ್ ಸಿಗದೆ ಬದುಕುಳಿದೆವು
ದೇವರ ದಯೆಯಿಂದ ನಾವು ಬಚಾವಾಗಿದ್ದೇವೆ. ಚಾಂಪಿಯನ್ ಶಿಪ್ ಮುಗಿಸಿ ಬಾಲಕ ಹಾಗೂ ಬಾಲಕಿಯರ ಎರಡು ತಂಡಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಬಾಲಕರ ತಂಡಕ್ಕೆ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲಿಗೆ ಟಿಕೆಟ್ ಬುಕ್ ಆಗಿತ್ತು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇಷನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ಪ್ರೆಸ್‌ನಲ್ಲಿ ಚೆನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಬೇರೆ ಟ್ರೈನ್‌ಬೇಡ, ಎರಡು ತಂಡಗಳು ಒಂದೇ ಟ್ರೈನ್‌ನಲ್ಲಿ ಹೋಗುವ ನಿರ್ಧಾರ ಮಾಡಿ ಕೋರ್‌ಮಂಡಲ್ ಟ್ರೈನ್‌ನಲ್ಲಿ ಪ್ರಯಾಣ ಬೆಳಸದೆ ಇದ್ದುದ್ದರಿಂದಾಗಿ ನಾವು ಬದುಕಿ ಬಂದಿದ್ದೇವೆ ಎಂದು ಕೋಚ್‌ಗಳಾದ ಮಹದೇವಮೂರ್ತಿ, ಮಮತಾಶೆಟ್ಟಿ, ಹುಣಸೂರಿನ ಆಕಾಶ್, ಗೌತಮ್, ಅರುಣ್‌ಕುಮಾರ್.ಎಸ್, ರಾಮು.ಬಿ, ಮನೋರಂಜನ್.ಜೆ, ಪುಟ್ಟಸ್ವಾಮಿ(ರತ್ನಪುರಿ), ಮಂಜುನಾಥ್(ಪಿರಿಯಾಪಟ್ಟಣ), ದುಷ್ಯಂತ್(ಕೆ.ಆರ್.ನಗರ)ರವರು ಉದಯವಾಣಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.