ಅಂದು ಮಂಗಳವಾರ. ಬೆಳಿಗ್ಗೆಯೇ ಟಿಟವಾಳದ ಗಣಪತಿಯ ದರ್ಶನ ಮಾಡಿ ನಂತರ ಕೆಲಸಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೆ. ಸ್ಟೇಶನ್ ತಲುಪಿ ಟಿಕೆಟಿಗಾಗಿ ಸಾಲಿನಲ್ಲಿ ನಿಂತಿದ್ದಾಗಲೇ ಏಳು ಗಂಟೆ ಮೂರು ನಿಮಿಷಕ್ಕೆ ಟಿಟವಾಳಕ್ಕೆ ಹೋಗುವ ಟ್ರೈನ್ ಪ್ಲಾಟ್‌ಫಾರಂ ಎರಡರಲ್ಲಿ ಬರುತ್ತಿದೆ ಎಂದು ಅನೌನ್ಸ್‌ಮೆಂಟ್ ಆಯಿತು. ಟಿಕೆಟ್‌ಗಾಗಿ ತೆರೆದಿದ್ದ ಒಂದೇ ಕೌಂಟರ್‌ನಲ್ಲಿ ನನ್ನ ಮುಂದೆ ಆರೇಳು ಜನರಿದ್ದರು. ಆ ಟ್ರೆçನ್ ತಪ್ಪಿ ಹೋದರೆ ಕೆಲಸಕ್ಕೆ ಹೋಗಲು ತಡವಾಗುತ್ತದೆ ಎನ್ನುವ ಯೋಚನೆಯಿಂದ ಟ್ರೈನ್ ಬರುತ್ತಿದ್ದಂತೆಯೇ ಓಡಿ ಹೋಗಿ ಟ್ರೈನ್ ಹತ್ತಿದೆ !
ಇಡೀ ಕಂಪಾರ್ಟ್‌ಮೆಂಟ್‌ನಲ್ಲಿ ಒಟ್ಟು ಇಪ್ಪತ್ತು -ಇಪ್ಪತ್ತೈದು ಹೆಂಗಸರಿದ್ದರು. ಟ್ರೈನ್ ಮುಂಬ್ರಾ ತಲುಪುತ್ತಿದ್ದಂತೆಯೇ, ಬಿಳಿ ಪ್ಯಾಂಟ್, ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿ ಟ್ರೈನ್ ಒಳಗೆ ಬಂದು ಟಿಕೆಟ್ ವಿಚಾರಿಸತೊಡಗಿದರು. ಆ ಚಳಿಗಾಲದಲ್ಲಿಯೂ ನನ್ನ ಮುಖದಿಂದ ಬೆವರಿಳಿಯಲು ಪ್ರಾರಂಭವಾಗಿತ್ತು.
ಆತ ವಿಚಾರಿಸುತ್ತ ಬರುತ್ತಿದ್ದಂತೆ ಹೆಚ್ಚಿನ ಹೆಂಗಸರು ತಮ್ಮ ಕೈಚೀಲದಿಂದ ನೂರು ರೂಪಾಯಿಯ ನೋಟನ್ನು ನೀಡುವುದು ಕಾಣಿಸಿತು. ನಾನೂ ಧೈರ್ಯ ಮಾಡಿ ಆತ ನನ್ನ ಬಳಿ ಬಂದಾಗ ನೂರು ರೂಪಾಯಿ ನೀಡಿ ಸಮಾಧಾನದ ನಿಟ್ಟುಸಿರೆಳೆದೆ. ಆತ ಕಲ್ಯಾಣ್ ಸ್ಟೇಶನ್‌ನಲ್ಲಿ ಇಳಿದು ಮಾಯವಾದ. ಸುಮಾರು ಇಪ್ಪತ್ತು ಜನ ಅವನ ಜೋಳಿಗೆ ತುಂಬಿದ್ದೆವು.
ಮನೆಗೆ ಬಂದ ಬಳಿಕ ಕೊಂಚ ಮುಜುಗರದಿಂದಲೇ ನಡೆದ ಘಟನೆ ವಿವರಿಸಿದೆ. “”ಆತ ಟಿ. ಸಿ.ಯೇ ಎಂದು ಏನು ಗ್ಯಾರಂಟಿ? ಅವನ ಐ.ಡಿ. ಕಾರ್ಡ್ ನೋಡಿದೆಯಾ?” ಎಂದು ಕೇಳಿದರು ಮನೆಯಲ್ಲಿ.
“ ಹೌದಲ್ಲ’ ಅನ್ನಿಸಿತು.
ಆದರೆ, ಇನ್ನೊಬ್ಬರ ತಪ್ಪಿನ ಕುರಿತು ವಿಚಾರಿಸುವ ನೈತಿಕ ಹಕ್ಕಾದರೂ ಇರುವುದು ಹೇಗೆ, ತಾನೇ ತಪ್ಪಿತಸ್ಥಳಾಗಿರುವಾಗ !
– ರಮಾ ಉಡುಪ