Advertisement

ಸುಸಜ್ಜಿತ ನಿಲ್ದಾಣದಲ್ಲಿ ನಿಲ್ಲದ ರೈಲು

04:47 PM Sep 30, 2019 | Suhan S |

ಕುದೂರು: ಮಾಗಡಿ ತಾಲೂಕಿನ ಸೋಲೂರು ಮತ್ತು ತಿಪ್ಪಸಂದ್ರದಲ್ಲಿ ಎರಡು ಸುಸಜ್ಜಿತ ರೈಲ್ವೆ ನಿಲ್ದಾಣವಿದೆ. ಆದರೆ, ಇದರಿಂದ ಸಾರ್ವಜನಿಕರು ಮತ್ತು ರೈತರಿಗೆ ಪ್ರಯೋಜವಿಲ್ಲದಂತಾಗಿದೆ. ಬೆಂಗಳೂರು -ಹಾಸನ ರೈಲು ಮಾರ್ಗ ಆರಂಭಗೊಂಡು ಸುಮಾರು ಎರಡು ವರ್ಷ ಕಳೆದರೂ ಸ್ಥಳೀಯ ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ. ಕೋಟ್ಯಂತರ ರೂ. ಹಣ ಖರ್ಚು ಮಾಡಿ ಸೋಲೂರು ಮತ್ತು ತಿಪ್ಪಸಂದ್ರದಲ್ಲಿ ಸುಸಜ್ಜಿತವಾಗಿ ರೈಲ್ವೆ ನಿಲ್ದಾಣ ಇದ್ದರೂ ಇದರಿಂದ ಯಾರಿಗೂ ಅನುಕೂಲವಾಗಿಲ್ಲ.

Advertisement

ವಿಧಿ ಇಲ್ಲದೇ ಬಸ್‌ನಲ್ಲಿ ಸಂಚಾರ: ತಿಪ್ಪಸಂದ್ರ, ಕುದೂರು ಮತ್ತು ಸೋಲೂರು ಹೋಬಳಿಯ ಜನರು ರೈಲಿನಲ್ಲಿ ಸಂಚಾರ ಮಾಡುವ ಮಾತು ಕೇವಲ ಕನಸಾಗಿಯೇ ಉಳಿದಿದೆ. ಇಲ್ಲಿಂದ ಸಾವಿರಕ್ಕೂ ಹೆಚ್ಚು ಜನರು ಪ್ರತಿ ನಿತ್ಯ ಬೆಂಗಳೂರಿನ ಕೆಲಸಗಳಿಗೆ ಹೋಗುತ್ತಾರೆ. ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಇಲ್ಲದಿರುವುದರಿಂದ ವಿಧಿ ಇಲ್ಲದೇ ಬಸ್‌ನಲ್ಲಿ ಸಂಚರಿಸುತ್ತಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಧಾನ ಮಂತ್ರಿಯಾಗಿದ್ದಾಗ ಬೆಂಗಳೂರು -ಹಾಸನಕ್ಕೆ ರೈಲು ಮಾರ್ಗ ಮಂಜೂರು ಮಾಡಿದ್ದರು. ರೈಲು ಹಳಿಗಳ ಕಾಮಗಾರಿ ಆರಂಭವಾಗಿ ಆಮೆಗತಿಯಲ್ಲಿ ಸಾಗಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗ ಸದಾನಂದಗೌಡ ರೈಲ್ವೆ ಸಚಿವರಾಗಿದ್ದಾಗ ಉದ್ಘಾಟನೆಗೊಂಡ ಮಾರ್ಗವಿದು.

ನಿತ್ಯ ಹತ್ತು ರೈಲುಗಳ ಸಂಚಾರ: ಪ್ರತಿ ದಿನವೂ ಹತ್ತು ರೈಲುಗಳು ಸಂಚರಿಸುತ್ತವೆ. ಆದರೆ, ನಿಲ್ಲಿಸುವುದು ಒಂದು ರೈಲನ್ನು ಮಾತ್ರ. ಬೆಂಗಳೂರು-ಹಾಸನ ವೈಯಾ ಮಂಗಳೂರು ಮಾರ್ಗವಾಗಿ ದಿನ ನಿತ್ಯ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ಸ್, ಕಾರವಾರ ಎಕ್ಸ್‌ಪ್ರೆಸ್ಸ್, ಬೆಂಗಳೂರು- ಮಂಗಳೂರು ಹೆಸರಿನ ಎರಡು ಎಕ್‌ ಪ್ರಸ್ಸ್ ಗಳು, ಕಣ್ಣೂರು ಎಕ್ಸ್‌ಪ್ರೆಸ್ಸ್, ಹಾಸನ ಇಂಟರ್‌ ಸಿಟಿ, ಮೈಸೂರು-ಸೊಲ್ಲಾಪುರ ಎಕ್ಸ್‌ಪ್ರೆಸ್ಸ್ ಹೀಗೆ ಹತ್ತಕ್ಕೂ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅವುಗಳಲ್ಲಿ ನಿಲುಗಡೆ ಮಾಡುವುದು ಕೇವಲ ಒಂದನ್ನು ಮಾತ್ರ. ಅದು ಮೈಸೂರು

ಪ್ಯಾಸೆಂಂಜರ್‌ ರೈಲು, ಅದೂ ಕೂಡ ಮಧ್ಯಾಹ್ನ 1 ಗಂಟೆಗೆ, ಇಲ್ಲಿನ ರೈಲು ಉದ್ಘಾಟನೆಗೊಂಡ ಹೊಸದರಲ್ಲಿ ಸ್ವಲ್ಪ ದಿನಗಳವರಗೆ ಸಂಜೆ ಮತ್ತು ಬೆಳಗಿನ ವೇಳೆಯಲ್ಲಿ ಬೆಂಗಳೂರು- ಹಾಸನ ರೈಲುಗಳು ನಿಲುಗಡೆ ಕೊಡುತ್ತಿದ್ದವು. ಆದರೆ, ಪ್ರಯಾಣಿಕರು ಯಾರು ಬರುತ್ತಿಲ್ಲ ಎಂದು ಈಗ ನಿಲುಗಡೆಯಾಗುತ್ತಿಲ್ಲ.

Advertisement

ವಾಹನ ಸೌಲಭ್ಯವಿಲ್ಲದ ಕಡೆ ರೈಲ್ವೆ ನಿಲ್ದಾಣ: ವಾಹನ ಸೌಲಭ್ಯವಿಲ್ಲದ ಕಡೆಗೆ ಸೋಲೂರು ಮತ್ತು ತಿಪ್ಪಸಂದ್ರದಲ್ಲಿ ರೈಲ್ವೆ ನಿಲ್ದಾಣ ಮಾಡಲಾಗಿದೆ. ಇದರಿಂದ ಜನರು ಪ್ರಯಾಣ ಮಾಡದೇ ಇರುವುದು ಇದು ಒಂದು ಕಾರಣ. ಮಾಗಡಿ ತಾಲೂಕಿನಲ್ಲಿಯೇ ಕುದೂರು ಗ್ರಾಮ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಮರೂರು ಸಮೀಪ ರೈಲು ನಿಲುಗಡೆ ಮಾಡಿಸಿದರೆ, ವ್ಯಾಪಾರ ಚಟುವಟಿಕೆಗಳು ಗ್ರಾಮದಲ್ಲಿ ಹೆಚ್ಚಾಗುತ್ತದೆ. ಈ ರೀತಿ ಹೆಚ್ಚುವರಿ ನಿಲ್ದಾಣಗಳನ್ನು ಮಾಡಲು ರೈಲ್ವೆ ನಿಯಮಗಳಲ್ಲಿ ಅವಕಾಶವಿದೆ.

ಈ ಹಿಂದೆ ತುಮಕೂರು- ಬೆಂಗಳೂರು ನಡುವೆ ಆರಂಭವಾಗಿದ್ದ ನಿಲ್ದಾಣಗಳ ಜತೆಗೆ ಜನರ ಆದ್ಯತೆ ಗಮನಿಸಿ, ಹೆಚ್ಚಿನ ನಿಲ್ದಾಣಗಳನ್ನು ಮಾಡಲಾಯಿತು. ಈ ಅಂಶವನ್ನು ಜನಪ್ರತಿನಿಧಿಗಳು ಕೇಂದ್ರ ರೈಲ್ವೆ ಸಚಿವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕು. ಈ ಮೂಲಕ ಹೆಚ್ಚುವರಿ ನಿಲ್ದಾಣ ಆಗಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಮುಂಗಡ ಬುಕ್ಕಿಂಗ್‌ ಅಸಾಧ್ಯ: ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿರಡಿ, ಮಂತ್ರಾಲಯ ಕ್ಷೇತ್ರಗಳಿಗೆ ಮಾಗಡಿ ತಾಲೂಕಿನಿಂದ ರೈಲುಗಳು ಹೋಗುತ್ತವೆ. ಅದರೆ, ಇಲ್ಲಿನ ಜನರು ಸಂಚಾರ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ. ರೈಲಿನಲ್ಲಿ ಇಲ್ಲಿನ ಜನರು ತೀರ್ಥಸ್ಥಳಗಳಿಗೆ ಮುಂಗಡ ಬುಕ್ಕಿಂಗ್‌ ಮಡಲು ಬೆಂಗಳೂರಿಗೆ ಹೋಗಬೇಕು.  ತಿಪ್ಪಸಂದ್ರ ಹಾಗೂ ಸೋಲೂರು ಗ್ರಾಮಗಳಲ್ಲಿ ರೈಲೇ ನಿಲ್ಲುವುದಿಲ್ಲ ಅಂದ ಮೇಲೆ ಬುಕ್ಕಿಂಗ್‌ ಅಸಾಧ್ಯ.

ರೈಲು ತಡೆ ಚಳವಳಿ ಅನಿವಾರ್ಯ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯಗಳಿಗೆ ಸ್ಪಂದಿಸುವುದಿಲ್ಲ. ಇವರನ್ನು ಚುರುಕಾಗಿಸಲು ಜನರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು. ಇನ್ನೊಂದು ತಿಂಗಳಲ್ಲಿ ಇಲ್ಲಿ ಸಂಚಾರಿಸುವ ರೈಲುಗಳು ನಿಲುಗಡೆಯಾಗಬೇಕು. ಮರೂರು ಗ್ರಾಮದ ಬಳಿ ಮತ್ತೂಂದು ರೈಲ್ವೆ ಉಪನಿಲ್ದಾಣ ಮಾಡಬೇಕು ಎಂದು ರೈಲ್ವೇ ಸಚಿವರಿಗೆ ರಾಜ್ಯ ಸಂಸದರು, ಮುಖ್ಯಮಂತ್ರಿಗಳು, ತಾಲೂಕು ಶಾಸಕರು ಒತ್ತಾಯ ತರಬೇಕು. ಇಲ್ಲದೇ ಹೋದರೆ ರೈಲು ತಡೆ ಚಳವಳಿಯನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ಸೋಲೂರು, ಕುದೂರು ಮತ್ತು ತಿಪ್ಪಸಂದ್ರ ಹೋಬಳಿಯ ಜನರು ಎಚ್ಚರಿಸಿದ್ದಾರೆ.

ಬಹುದಿನಗಳ ಆಸೆಯಂತೆ ಸೋಲೂರು ಮತ್ತು ತಿಪ್ಪಸಂದ್ರದಲ್ಲಿ ರೈಲು ನಿಲುಗಡೆಯಾದರೆ, ಜನರು ಸಹಜವಾಗಿ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ. ಕೇವಲ ಐದು ನಿಮಿಷ ನಿಲುಗಡೆ ಮಾಡಿದರೆ ಸಾಕು. ಕುದೂರು, ತಿಪ್ಪಸಂದ್ರ, ಸೋಲೂರು ಹೋಬಳಿಯ ಜನರಿಗೆ ಅನುಕೂಲವಾಗುತ್ತದೆ.●ಕೆ.ಆರ್‌.ಯತಿರಾಜು, ತಾಪಂ ಮಾಜಿ ಅಧ್ಯಕ್ಷ

 

-ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next