Advertisement

ಶಾಲಾ ಕಟ್ಟಡಗಳಿಗೆ ರೈಲು ಬೋಗಿಯ ಲುಕ್‌!

06:00 AM Jul 06, 2018 | Team Udayavani |

ಕುಂಬಳೆ: ವಿದ್ಯಾಲಯಗಳಲ್ಲಿ ಮಕ್ಕಳ ಕೊರತೆ ಕಾಡುತ್ತಿರುವ ಇಂದಿನ ದಿನಗಳ‌ಲ್ಲಿ ಸರಕಾರಿ ಮತ್ತು ಅನುದಾನಿತ ಖಾಸಗಿ ವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಸರಕಾರ ಮತ್ತು ಶಾಲೆಯ ಪ್ರಬಂಧಕರು, ಶಿಕ್ಷಕ ರಕ್ಷಕ ಸಂಘದ ವತಿಯಿಂದ ಉಚಿತ ಪಾಠ ಪುಸ್ತಕ, ಸಮವಸ್ತ್ರ, ಕಲಿಕೋಪಕರಣಗಳ ಸಹಿತ ಅನೇಕ ಕೊಡುಗೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಅಂತೆಯೇ ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಯೋಜನೆಯಲ್ಲಿ ಸುಮಾರು ಒಂದೂವರೆ ಲಕ್ಷ ನಿಧಿಯ ಮೂಲಕ ರಾಜ್ಯದ ವಿವಿಧ ಸರಕಾರಿ ಮತ್ತು ಖಾಸಗಿ ಹೈಸ್ಕೂಲ್‌ಗ‌ಳಲ್ಲಿ 23 ಸಹಸ್ರ ತರಗತಿಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್‌ ತರಗತಿಗಳಾಗಿ ಮಾಡಲಾಗಿದೆ.
 
ಸರಕಾರವು  2016-17 ರಲ್ಲಿ ಆರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆಗೆ ಮಕ್ಕಳು ಆಕರ್ಷಿತರಾಗಿ 2017-18ರ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಒಟ್ಟು ವಿದ್ಯಾಲಯಗಳಲ್ಲಿ 1.35  ಸಹಸ್ರದಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹಾಲಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ 1.85 ಸಹಸ್ರಕ್ಕೆ ಏರಿದೆ. ಹವಾ ನಿಯಂತ್ರಿತ ತರಗತಿ ಕೊಠಡಿಯೊಳಗೆ ಎಲ್‌.ಸಿ.ಡಿ.ಪ್ರೊಜೆಕ್ಟರ್‌ ಮತ್ತು ಪರದೆ, ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಸಿನೆಮಾ ಥಿಯೇಟರ್‌ ಮಾದರಿ ತರಗತಿಯನ್ನು ತಂತ್ರಜ್ಞಾನದ ಮೂಲಕ  ಮಾಡಲಾಗಿದೆ. 

Advertisement

ಕೆಲವು ಶಾಲೆಗಳಲ್ಲಿ ಎಲ್ಲ ತರಗತಿಯ ಚಟುವಟಿಕೆಯನ್ನು ಶಾಲೆಯ ಮುಖ್ಯಶಿಕ್ಷಕರಿಗೆ ವೀಕ್ಷಿಸಲು ತರಗತಿಯಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ.ಕೆಲವು ಶಾಲೆಗಳಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಇನ್ನಿತರ  ಆಕರ್ಷಣೆಯನ್ನು ಅಳವಡಿಸಲಾಗಿದೆ.ಸರಕಾರವು ವಿದ್ಯಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞದಲ್ಲಿ ಶಾಲೆಗಳಿಗೆ ವಿಜ್ಞಾನ ಪಾರ್ಕ್‌, ಗಣಿತ ಪಾರ್ಕ್‌, ಹಸಿರು ವಲಯ ಯೋಜನೆಯಲ್ಲಿ ಜೈವಿಕ ಪಾರ್ಕ್‌ ನಿರ್ಮಿಸಲು ಆನುದಾನ ನೀಡುತ್ತಿದೆ.

ರೈಲು ಬೋಗಿಯಂತಾದ ಕಟ್ಟಡ 
ಕಾಸರಗೋಡು ಜಿಲ್ಲೆಯ ಬೇಕಲ ವಿದ್ಯಾಭ್ಯಾಸ ಉಪಜಿಲ್ಲೆಯ ಬಾರ ಸರಕಾರಿ ವಿದ್ಯಾಲಯವೊಂದು ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮವಾಗಿ ಶಾಲೆಯ ತರಗತಿ ಕೋಣೆಗಳನ್ನು ನೀಲಿ ಬಿಳಿ ಬಣ್ಣದ ಮೂಲಕ ರೈಲು ಬೋಗಿಯನ್ನಾಗಿ ಮಾರ್ಪಡಿಸಿ  ರಾಜ್ಯದ ಗಮನ ಸೆಳೆದಿತ್ತು.

ಈಗ ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಕುಬಣೂರು ಶ್ರೀರಾಮ ಎ.ಯು.ಪಿ. ಅನುದಾನಿತ ಶಾಲೆಯ ತರಗತಿಗಳಿಗೂ ರೈಲು ಬೋಗಿಯ ಲುಕ್‌ ನೀಡಲಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸುವಾಗ ರೈಲು ಬಂಡಿ ಏರಿದಂತಾಗುವುದು. ಇದರಿಂದ ವಿದ್ಯಾರ್ಥಿಗಳು ಖುಷಿಪಡುವಂತಾಗಿದೆ.ಮಕ್ಕಳಿಗೆ ಶಾಲೆಗೆ ಆಗಮಿಸಿದಾಗ ರೈಲು ನಿಂತಿರುವಂತೆ ಕಾಣುವುದು.

ರೈಲು ಗಾಡಿಯ ಆಕರ್ಷಕ ಚಿತ್ರವನ್ನು ಮಂಗಲ್ಪಾಡಿ ಪ್ರತಾಪ ನಗರದ ಲೀಲಾಧರ ಆಚಾರ್ಯ ತಂಡ ರಚಿಸಿದೆ.ಸರಕಾರದ ಕೊಡುಗೆ, ಆಧುನಿಕ ತಂತ್ರಜ್ಞಾನ ಇತ್ಯಾದಿಗಳೆಲ್ಲವೂ ವಿದ್ಯಾಲಯಗಳಲ್ಲಿ ಅಳವಡಿಸಿದರೂ ಶಿಕ್ಷಣದ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ದೇವಾಲಯದಂತೆ ಪಾವಿತ್ರ್ಯವಿರುವ ವಿದ್ಯಾಲಯಗಳಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ದೇಶಪ್ರೇಮ ಸಹಿತ ಶಿಕ್ಷಣ ಬೇಕೆಂಬ ಆಗ್ರಹ ರಕ್ಷಕರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next