Advertisement
ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದವರು ನಂತರ ಹೇಳ ಹೆಸರಿಲ್ಲದಂತೆ ನೆಲಕಚ್ಚಿದ್ದನ್ನು ನಾವು ಕಂಡಿದ್ದೇವೆ. ಅದು ಉದ್ಯಮಿಗಳು ಇರಬಹುದು, ಕಲಾವಿದರು ಇರಬಹುದು ಅಥವಾ ಕ್ರೀಡಾಪಟುಗಳೇ ಆಗಿರಬಹುದು. ಇದು ಅಂತಹದೇ ಒಂದು ಕಥೆ.
Advertisement
ಭಾರತದ ವಿರುದ್ಧ ಸರಣಿಯಲ್ಲಿ ಅರ್ಶದ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೆಂದ್ರ ಸೆಹವಾಗ್ ಮುಂತಾದ ದಿಗ್ಗಜರ ವಿಕೆಟ್ ಪಡೆದು ಅರ್ಶದ್ ಮಿಂಚಿದ್ದರು. ಅದರಲ್ಲೂ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಸೋಲಿನಿಂದ ತಪ್ಪಿಸಿಕೊಳ್ಳಲು ಅರ್ಶದ್ ಕೊಡುಗೆ ನೀಡಿದ್ದರು. ಆದರೆ ವಿಪರ್ಯಾಸವೆಂದರೆ ಅದೇ ಬೆಂಗಳೂರು ಟೆಸ್ಟ್ ಪಂದ್ಯ ಅರ್ಶದ್ ಖಾನ್ ಜೀವನದ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.
ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಅರ್ಶದ್ ಖಾನ್ 58 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಇದರಲ್ಲಿ 56 ವಿಕೆಟ್ ಪಡೆದಿದ್ದಾರೆ. 9 ಟೆಸ್ಟ್ ಪಂದ್ಯ ಆಡಿದ್ದ ಅರ್ಶದ್ ಖಾನ್ 32 ವಿಕೆಟ್ ಪಡೆದಿದ್ದರು.
2007ರಲ್ಲಿ ಆರಂಭವಾದ ಐಸಿಎಲ್ (ಇಂಡಿಯನ್ ಕ್ರಿಕೆಟ್ ಲೀಗ್) ಎಂಬ ಬಂಡಾಯ ಟಿ20 ಲೀಗ್ ನಲ್ಲಿ ಆಡಲು ಮುಂದಾಗಿದ್ದು ಅರ್ಶದ್ ಖಾನ್ ಎಂಬ 6.4 ಅಡಿ ಉದ್ದ ಎತ್ತರದ ಸ್ಪಿನ್ನರ್ ಗೆ ಮುಳುವಾಯಿತು. ಐಸಿಸಿ ಮತ್ತು ಬಿಸಿಸಿಐ ಗೆ ವಿರುದ್ಧವಾಗಿ ಆರಂಭವಾದ ಐಸಿಎಲ್ ಕೂಟ ಎರಡು ಮಂಡಳಿಯ ಕೋಪಕ್ಕೆ ಗುರಿಯಾಗಿತ್ತು.
ಐಸಿಎಲ್ ನ ಲಾಹೋರ್ ಬಾದ್ ಶಾಹ ತಂಡದಲ್ಲಿ ಆಡಿದ್ದ ಅರ್ಶದ್ ಖಾನ್ ರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಕೊನೆಗೊಂಡಿತು. ಐಸಿಎಲ್ ನಲ್ಲಿ ಆಡಿದ್ದ ಭಾರತೀಯ ಆಟಗಾರರನ್ನು ಬಿಸಿಸಿಐ ಬ್ಯಾನ್ ಮಾಡಿತ್ತು. ಪಾಕಿಸ್ಥಾನ ಕೂಡಾ ಇದೇ ರೀತಿಯ ನಿರ್ಣಯ ಕೈಗೊಂಡಿತ್ತು. 2009ರಲ್ಲಿ ಐಪಿಎಲ್ ನ ಹೊಡೆತಕ್ಕೆ ಸಿಲುಕಿದ ಐಸಿಎಲ್ ಕೊನೆಯಾಯಿತು. ಬಂಡಾಯ ಕೂಟದಲ್ಲಿ ಆಡಿದ್ದ ಆಟಗಾರರಿಗೂ ಸಂಕಷ್ಟ ಉಂಟಾಯಿತು.
ಕ್ರಿಕೆಟ್ ನಿಂದ ದೂರವಾದ ಅರ್ಶದ್ ಖಾನ್ 2015ರಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲಿ ಸಿಡ್ನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಅರ್ಶದ್ ಖಾನ್ ರ ಈ ಸ್ಥಿತಿಯನ್ನು ತೆರದಿಟ್ಟಿತ್ತು.
ಅರ್ಶದ್ ಖಾನ್ ರ ಕ್ಯಾಬ್ ಏರಿದ್ದ ಯುವಕನೋರ್ವನಿಗೆ ಕ್ಯಾಬ್ ಚಾಲಕನನ್ನು ಮಾತಿಗೆಳೆದಿದ್ದ. “ತಾನು ಪಾಕಿಸ್ಥಾನದವನು, ಸದ್ಯ ಸಿಡ್ನಿಯಲ್ಲಿ ನೆಲೆಸಿದ್ದೇನೆ. ಐಸಿಎಲ್ ನಲ್ಲಿ ಅಡುತ್ತಿದ್ದಾಗ ಹೈದರಾಬಾದ್ ಗೆ ಹೋಗಿದ್ದೆ” ಎಂದು ಅರ್ಶದ್ ಹೇಳಿಕೊಂಡಿದ್ದ ಎಂದು ಆತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.
ಸದ್ಯ ಅರ್ಶದ್ ಖಾನ್ ಪಾಕಿಸ್ಥಾನಕ್ಕೆ ಮರಳಿದ್ದಾರೆ. ಪಾಕಿಸ್ಥಾನ ಮಹಿಳಾ ಕ್ರಿಕೆಟ್ ತಂಡ ಕೋಚ್ ಆಗಿ ಅರ್ಶದ್ ಖಾನ್ ಕೆಲಸ ಮಾಡುತ್ತಿದ್ದಾರೆ.
– ಕೀರ್ತನ್ ಶೆಟ್ಟಿ ಬೋಳ