ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ಮಹಿಳೆ ಸೇರಿ ಇಬ್ಬರ ಕೊಲೆ ಪ್ರಕರಣಗಳು ನಡೆದಿವೆ. ಮೊಬೈಲ್ ಚಾರ್ಜರ್ ವಿಚಾರಕ್ಕೆ ಇಬ್ಬರು ಗಾರೆ ಕಾರ್ಮಿಕರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟ ಪುರದ ಮಲ್ಲಸಂದ್ರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಮಲ್ಲಸಂದ್ರದ ವೈಭವ್ ಸುಮುಖ್ ಲೇಔಟ್‌ನ ಪಳನಿ(35) ಮೃತವ್ಯಕ್ತಿ. ಕೃತ್ಯ ಎಸಗಿದ ಹುಸೇನಪ್ಪ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮಲ್ಲಸಂದ್ರದ ವೈಭವ್ ಸುಮುಖ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ತಮಿಳುನಾಡಿನಿಂದ ನೂರಾರು ಕಾರ್ಮಿಕರರು ಬಂದಿದ್ದರು. ಎಲ್ಲ ಕಾರ್ಮಿಕರು ಕೆಲಸ ಮಾಡಿ ನಿರ್ಮಾಣ ಹಂತದ ಕಟ್ಟಡದಲ್ಲೇ ಉಳಿದುಕೊಂಡಿದ್ದರು. ಗಾರೆಕೆಲಸ ಮಾಡಿಕೊಂಡಿದ್ದ ಪಳನಿ ಹಾಗೂ ಹುಸೇನಪ್ಪ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಒಂದೇ ಮೊಬೈಲ್ ಚಾರ್ಜರ್ ಬಳಸುತ್ತಿದ್ದರು. ಭಾನುವಾರ ರಜೆಯಿದ್ದರಿಂದ ರಾತ್ರಿ ಎಂಟು ಗಂಟೆ ಸುಮಾರಿಗೆ ಮೊದಲು ನಾನು ಫೋನ್‌ಗೆ ಚಾರ್ಜ್ ಹಾಕಬೇಕು ಎಂಬ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆ ಹಂತಕ್ಕೆ ತಿರುಗಿದೆ.
ಕೋಪಗೊಂಡ ಹುಸೇನಪ್ಪ ದೊಣ್ಣೆಯಿಂದ ಪಳನಿ ತಲೆಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪಳನಿ ಸ್ಥಳದ್ಲಲೇ ಮೃತ ಪಟ್ಟಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕೊಲೆ: ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಕತ್ತರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಾಳಸಂದ್ರ ನಿವಾಸಿ ನಂದಿನಿ (24) ಮೃತ ಮಹಿಳೆ. ಕೃತ್ಯ ಎಸಗಿದ ಗಾರೆ ಕೆಲಸ ಮಾಡುವ ಜಾನ್ಸನ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಜಾನ್ಸನ್ ಮತ್ತು ನಂದಿನಿ ಮದುವೆಯಾಗಿದ್ದು, ಅಲ್ಲಾಳ ಸಂದ್ರದಲ್ಲಿ ದಂಪತಿ ವಾಸವಾಗಿದ್ದರು. ಜಾನ್ಸನ್ ಮದ್ಯ ಸೇವಿಸುತ್ತಿದ್ದು, ನಿತ್ಯ ಗಲಾಟೆ ಮಾಡುತ್ತಿದ್ದ. ಮತ್ತೂಂದೆಡೆ ಮನೆಗೆ ದಿನಸಿ ವಸ್ತುಗಳನ್ನು ತರುವುದಿಲ್ಲ ಎಂದು ಪತ್ನಿ ನಂದಿನಿ ಆರೋಪಿಸಿದ್ದರು. ಭಾನುವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಜಾನ್ಸನ್ ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜತೆ ಜಗಳ ತೆಗೆದಿದ್ದಾನೆ. ಅದರಿಂದ ಕುಪಿತಗೊಂಡ ಆರೋಪಿ ರಾತ್ರಿ ಎಂಟು ಗಂಟೆ ಸುಮಾರಿಗೆ ಕತ್ತರಿಯಿಂದ ಪತ್ನಿಯ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿದ್ದು, ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.