ವಿಜಯಪುರ : ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲೆಡೆ ಜಾತ್ರೆ, ರಥೋತ್ಸವ ನಿಷೇಧಿಸಿದ್ದರೂ ನಿರ್ಬಂಧ ಉಲ್ಲಂಘಿಸಿ ರಥೋತ್ಸವ ನಡೆಸಿದ್ದು, ರಥದ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ದುರ್ಘಟನೆ ಮುದ್ದೇಬಿಹಾಳ ತಾಲೂಕಿನಲ್ಲಿ ಜರುಗಿದೆ.
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮಸ್ತರು ಸರ್ಕಾರದ ನಿರ್ಬಂಧದ ಮಧ್ಯೆಯೂ ನಿಯಮ ಮೀರಿ ಶ್ರೀ ಪವಾಡ ಬಸವೇಶ್ವರ ಜಾತ್ರೆ, ರಥೋತ್ಸವ ನಡೆಸಿದ್ದಾರೆ. ರಥೋತ್ಸವ ಸಂದರ್ಭದಲ್ಲಿ ರಥದ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಮೃತನನ್ನು ಬಸರಕೋಡ ಗ್ರಾಮದ ಕರಿಯಪ್ಪ ಕಿಲ್ಲೇದ (45) ಎಂದು ಗುರುತಿಸಲಾಗಿದೆ. ದೇವಸ್ಥಾನ ಸಮಿತಿ ಈ ಮೊದಲೇ ಜಾತ್ರೆ ರದ್ದು ಮಾಡಿ ಪ್ರಕಟಣೆ ಹೊರಡಿಸಿತ್ತು. ಸಾರ್ವಜನಿಕರು ಜಾತ್ರೆಗೆ ಬರಬಾರದೆಂದು ಮನವಿ ಮಾಡಿತ್ತು.
ಇದನ್ನೂ ಓದಿ :ಪೆರ್ಡೂರು ಮೇಳದ ಖ್ಯಾತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ನಾಪತ್ತೆ
ಅಲ್ಲದೇ ಜಾತ್ರೆ ನಡೆಸುವುದಿಲ್ಲ ಎಂದು ಪೊಲೀಸರಿಗೂ ಲಿಖಿತ ಭರವಸೆ ನೀಡಿದ್ದರು. ಆದರೆ ಬುಧವಾರ ಮದ್ಯಾಹ್ನ ಪೊಲೀಸರ ಕಣ್ತಪ್ಪಿಸಿ ದೇವಸ್ಥಾನ ಸಮೀತಿಯವರು ರಥೋತ್ಸವ ನಡೆಸಿದಾಗ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಡಿಎಸ್ಪಿ ಅರುಣಕುಮಾರ ಕೋಳೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಹಿನ್ನೆಲೆ ನಿಯಮ ಉಲ್ಲಂಘಿಸಿ ಜಾತ್ರೆ ನಡೆಸಿದ ದೇವಸ್ಥಾನ ಹಾಗೂ ಜಾತ್ರಾ ಸಮೀತಿ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಮುದ್ದೇಬಿಹಾಳ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.