ನವದೆಹಲಿ : ವರದಕ್ಷಿಣೆ ಕಿರುಕುಳದಿಂದ ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿಂದಂತೆ ಜೈಪುರ ಪೊಲೀಸರು ಮಹಿಳೆಯ ಪತಿ ಸೇರಿದಂತೆ ಐವರು ಕುಟುಂಬಸ್ಥರನ್ನು ವಶಕ್ಕೆ ಪಡೆದಿದ್ದಾರೆ.
ನವೆಂಬರ್ 20 ರಂದು ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಪತಿ ಮನೆಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಹೋಗಿದ್ದ ಪತ್ನಿ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ. ಪತ್ನಿ ಬೆಂಕಿ ಹಚ್ಚಿಕೊಂಡು ಒದ್ದಾಟ ನಡೆಸುತ್ತ ಇದ್ದಾಗ,ಆಕೆಯ ಪತಿ ಪತ್ನಿಯ ನರಳಾಟವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ, ಅದನ್ನು ಪತ್ನಿಯ ಪೋಷಕರಿಗೆ ಕಳುಹಿಸಿದ್ದಾನೆ.
ಇದನ್ನೂ ಓದಿ : ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ
ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿದ್ದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ,ಹೆಚ್ಚಿನ ಚಿಕಿತ್ಸೆಗೆ ಜೈಪುರ ನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಬಹುತೇಕ ಬೆಂಕಿಯಲ್ಲಿ ಬೆಂದು ಹೋಗಿದ್ದ ಮಹಿಳೆಯ ದೇಹ, ಚಿಕಿತ್ಸೆಗೆ ಸ್ಪಂದಿಸದೆ, ನವೆಂಬರ್ 22 ರಂದು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ, ಗುಧಗೋರ್ಜಿ ಪೊಲೀಸರು ಮಹಿಳೆಯ ಪತಿ ,ಪತಿಯ ಪೋಷಕರು ಹಾಗೂ ಸಂಬಂಧಿಕರ ವಿರುದ್ಧ ಐಪಿಸಿ ಸೆಕ್ಷನ್ 498 (A), ಸೆಕ್ಷನ್ 306ರ ಅಡಿಯಲ್ಲಿ, ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.