ಕೋಲಾರ: ಕೋವಿಡ್ ನಿಂದ ಮಹಿಳೆ ಮೃತಪಟ್ಟಿರಬಹುದು ಎನ್ನುವ ಶಂಕೆಯಿಂದಾಗಿ ಮೃತ ದೇಹವನ್ನು ನಾಲ್ಕು ಗಂಟೆಗಳ ಕಾಲ ಸತಾಯಿಸಿ ಅಂತ್ಯಕ್ರಿಯೆಗೆ ಸಾಗಿಸಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜರುಗಿದೆ.
ಬಂಗಾರಪೇಟೆ ಪಟ್ಟಣದ ಶಾಂತಿನಗರದ ಅರವತ್ತು ವರ್ಷದ ಲಕ್ಷ್ಮಿ ಎಂಬಾಕೆಯ ದೇಹ ಅವರ ಮನೆಯಲ್ಲಿಯೇ ನಾಲ್ಕು ಗಂಟೆಗಳ ಕಾಲ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಶಾಂತಿನಗರದಲ್ಲಿ ಲಕ್ಷ್ಮಿ ಇಡ್ಲಿ ಮಾರಾಟ ಮಾಡುತ್ತಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಸಹೋದರ ತುಮಕೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು ಕಳೆದವಾರ ಕೋವಿಡ್ ನಿಂದ ಮೃತಪಟ್ಟಿದ್ದರಂತೆ. ಇವರ ಅಂತ್ಯಕ್ರಿಯೆಗೆ ಲಕ್ಷ್ಮಿ ಹೋಗಿ ಬಂದಿದ್ದು ಕಳೆದ ಮೂರು ದಿನಗಳಿಂದಲೂ ಅಸ್ವಸ್ಥರಾಗಿದ್ದರು. ಕಳೆದ ರಾತ್ರಿ ಮನೆಯಲ್ಲಿ ನರಳಾಟ ನಡೆಸಿದ್ದ ಲಕ್ಷ್ಮಿಯ ನೆರವಿಗೆ ಯಾರೋ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮನೆಯಿಂದ ಯಾವುದೇ ಸದ್ದು ಕೇಳಿಬಂದಿಲ್ಲದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಮತ್ತು ತಹಸೀಲ್ದಾರ್ ದಯಾನಂದ್ ಭೇಟಿ ನೀಡಿ ಪರಿಶೀಲಿಸಿದ್ಧರು.
ಲಕ್ಷ್ಮಿಯ ಮೃತದೇಹ ಮನೆಯಲ್ಲಿ ಬಿದ್ದಿದ್ದು ಪತ್ತೆಯಾಗಿತ್ತು. ಮೃತರ ಬಂಧು-ಬಳಗ ಯಾರು ಇಲ್ಲದ ಕಾರಣ ಬೆಳಗ್ಗೆ ಒಂಬತ್ತುವರೆಗೆ ಹೀಗೆ ಪತ್ತೆಯಾದ ದೇಹವನ್ನು ಅಂತ್ಯಕ್ರಿಯೆಗೆ ಸಾಗಿಸುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ 3 ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡಿದ್ದಾರೆ.
ಸಾರ್ವಜನಿಕರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಎಚ್ಚೆತ್ತು ಕೊಂಡ ಆಡಳಿತವರ್ಗ ನಂತರ ಮಧ್ಯಾಹ್ನ ಒಂದೂವರೆಗೆ ಪುರಸಭೆ ಸಿಬ್ಬಂದಿಯೊಂದಿಗೆ ಆಗಮಿಸಿ ಲಕ್ಷ್ಮಿಯ ದೇಹವನ್ನು ಅಂತ್ಯಕ್ರಿಯೆ ನಡೆಸಲು ಸಾಗಿಸಿದ್ದಾರೆ. ಇದಾದ ನಂತರವಷ್ಟೇ ನೆರೆ ಹೊರೆಯವರು ನಿಟ್ಟುಸಿರು ಬಿಟ್ಟಿದ್ದಾರೆ.