ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಢಿಕ್ಕಿಯಾದ ರಭಸಕ್ಕೆ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ರಾಣೇಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್(48) ಹಾಗೂ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಶಾಲಿನಿ(8) ಮತ್ತು ಯಶೋದಾ(8) ಮೃತ ದುರ್ದೈವಿಗಳು.
ಜಯಪ್ರಕಾಶ್ ಕಾರು ಚಲಾಯಿಸಿಕೊಂಡು ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಮಕ್ಕಳಾದ ಶಾಲಿನಿ (9 ವರ್ಷ)ಮತ್ತು ಯಶೋದಾ (10) ಇಬ್ಬರೂ ಸುತ್ತಕೋಟಿ ಗ್ರಾಮದ ರಸ್ತೆಬದಿಯ ತಮ್ಮ ಜಮೀನಿನಲ್ಲಿ ಆಟವಾಡುತ್ತಾ ಕೂತಿದ್ದರು. ಜವರಾಯನಂತೆ ಬಂದ ಕಾರು, ಮಕ್ಕಳ ಮೇಲೆ ಹರಿದು ಪ್ರಾಣ ತೆಗೆದಿದೆ. ಕಾರಿನಲ್ಲಿದ್ದ ಶಿಕ್ಷಕ ಕೂಡ ದುರಂತ ಅಂತ್ಯ ಕಂಡಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುತ್ತಕೋಟಿ ಗ್ರಾಮದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಜಮೀನಿನತ್ತ ನುಗ್ಗಿದೆ, ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು, ಮರಕ್ಕೆ ಹೋಗಿ ಢಿಕ್ಕಿ ಹೊಡೆದಿದೆ. ಮರಕ್ಕೆ ಕಾರು ಢಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತ್ತ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಮಕ್ಕಳನ್ನು ಗ್ರಾಮಸ್ಥರು ತಕ್ಷಣ ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಮಕ್ಕಳು ಬದುಕಲಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಹಂಸಭಾವಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.