Advertisement

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

02:08 AM Jan 26, 2021 | Team Udayavani |

ಚಿತ್ತೂರು: ಮೌಡ್ಯದ ಬಲೆಯಲ್ಲಿ ಸಿಲುಕಿದ್ದ ಚಿತ್ತೂರಿನ ದಂಪತಿಯೊಂದು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನೇ ತ್ರಿಶೂಲದಿಂದ ಚುಚ್ಚಿ, ಡಂಬಲ್ಸ್‌ಗಳಿಂದ ಹೊಡೆದು ಕ್ರೂರವಾಗಿ ಕೊಂದು ಹಾಕಿದ ಭೀಕರ ಘಟನೆ ವರದಿಯಾಗಿದೆ. ಸತ್ತ ಮಕ್ಕಳು ಮತ್ತೆ ಜೀವತಾಳುತ್ತಾರೆ ಎಂಬ ಭ್ರಮೆಯಲ್ಲೇ ಈ ದಂಪತಿಯಿದ್ದಾರಂತೆ!

Advertisement

ಸರ್ಕಾರಿ ಪದವಿ ಕಾಲೇಜಿನ ಉಪ-ಪ್ರಿನ್ಸಿಪಾಲ್‌ ಆಗಿರುವ ಪುರುಷೋತ್ತಮ ನಾಯ್ಡು, ಎಂಎಸ್‌ಸಿ ಗಣಿತದಲ್ಲಿ ಚಿನ್ನದ ಪದಕ ವಿಜೇತೆಯಾಗಿ ಪ್ರಾಧ್ಯಾಪಕಿಯಾಗಿರುವ ಅವರ ಪತ್ನಿ ಪದ್ಮಜಾ ಈ ಕ್ರೌರ್ಯ ಮೆರೆದ ಪಾತಕಿಗಳು. ಸೋಮವಾರ ಸತ್ಯಯುಗ ಆರಂಭವಾಗುತ್ತದೆ. ಹೀಗಾಗಿ ಮಕ್ಕಳು ಹೊಸ ಯುಗದಲ್ಲಿ ಹುಟ್ಟಿಬರಲಿ ಎಂಬ ಭ್ರಮೆಯಲ್ಲಿದ್ದ ಈ ದಂಪತಿ ಭಾನುವಾರ ರಾತ್ರಿ ತಮ್ಮ ಮಕ್ಕಳಾದ ಅಲೇಖ್ಯ(27) ಹಾಗೂ ಸಾಯಿ ದಿವ್ಯಾ(22)ರನ್ನು ತ್ರಿಶೂಲದಿಂದ ಚುಚ್ಚಿ, ಜಿಮ್‌ಗಳಲ್ಲಿ ಬಳಸುವ ಡಂಬೆಲ್‌ಗಳಿಂದ ಹೊಡೆದು ಸಾಯಿಸಿದ್ದಾರೆ.

ಈ ದಂಪತಿಗೆ ಮೊದಲಿನಿಂದಲೂ ಮಾಟಮಂತ್ರದಲ್ಲಿ ನಂಬಿಕೆಯಿತ್ತಾದರೂ, ಲಾಕ್‌ಡೌನ್‌ ಸಮಯದಲ್ಲಿ ಇದು ಅತಿರೇಕಕ್ಕೆ ಹೋಯಿತು ಎಂದು ನೆರೆಹೊರೆಯವರು ಹೇಳುತ್ತಾರೆ. ಭಾನುವಾರ ರಾತ್ರಿ ಅವರ ಮನೆಯಿಂದ ಅರಚಾಟ, ವಿಚಿತ್ರ ಶಬ್ದಗಳು ಬರಲಾರಂಭಿಸಿದ್ದೇ, ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅವರ ಮನೆ ಪ್ರವೇಶಿಸಿದ ಪೊಲೀಸರಿಗೂ ಕೂಡ ಕೃತ್ಯದ ಭೀಭತ್ಸತೆ, ದಂಪತಿಗಳ ಹುಚ್ಚಾಟ ನೋಡಿ ಆಘಾತವಾಗಿದೆ. ರಕ್ತದ ಮಡುವಿನಲ್ಲಿ ಒಬ್ಬ ಮಗಳ ಶವ ದೇವರ ಮನೆಯಲ್ಲಿ ಬಿದ್ದಿದ್ದರೆ, ಇನ್ನೊಬ್ಬ ಮಗಳ ಶವ ಹಾಲ್‌ನಲ್ಲಿ ಇತ್ತಂತೆ. ನಾವು ಶವಗಳನ್ನು ಪಂಚನಾಮೆಗೆ ಕಳುಹಿಸುತ್ತೇವೆಂದು ತಿಳಿದು ಈ ದಂಪತಿ “ಸೋಮವಾರ ರಾತ್ರಿಯವರೆಗೆ ತಡೆಯಿರಿ, ಮಕ್ಕಳಿಬ್ಬರೂ ಜೀವ ಪಡೆಯಲಿದ್ದಾರೆ’ ಎಂದು ಬಡಬಡಿಸುತ್ತಿದ್ದರು ಎನ್ನುತ್ತಾರೆ ಪೊಲೀಸರು. ಒಟ್ಟಲ್ಲಿ, ನಾಯ್ಡು ದಂಪತಿಯ ಮೌಡ್ಯದಿಂದಾಗಿ, ಮುಂಬೈನಲ್ಲಿ ಎ.ಆರ್‌.ರೆಹಮಾನ್‌ ಮ್ಯೂಸಿಕ್‌ ಕ್ಲಾಸ್‌ನಲ್ಲಿ ತರಬೇತಿ ಪಡೆದು ಈಗಷ್ಟೇ ಊರಿಗೆ ಹಿಂದಿರುಗಿದ್ದ ಅಲೇಖ್ಯ, ಬಿಬಿಎ ಪದವೀಧರಳಾಗಿ ಉದ್ಯೋಗ ಹುಡುಕಾಟ ನಡೆಸುತ್ತಿದ್ದ ದಿವ್ಯಾ ಎಂಬ ಅಮಾಯಕ ಜೀವಗಳು ಬಲಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next