Advertisement

ದುರಂತ ಸಾವು ಕಂಡ ಸ್ನೇಹಿತರ ಸಾಮೂಹಿಕ ಅಂತಿಮ ಸಂಸ್ಕಾರ

10:22 AM Nov 13, 2019 | Team Udayavani |

ಹುಬ್ಬಳ್ಳಿ: ದೇವರ ಗುಡಿಹಾಳದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ನಾಲ್ವರು ಸ್ನೇಹಿತರ ಸಾಮೂಹಿಕ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2:30ರ ಸುಮಾರಿಗೆ ಇಲ್ಲಿನ ತೊರವಿ ಹಕ್ಕಲದ ಖಬರ್‌ಸ್ಥಾನದಲ್ಲಿ ನೆರವೇರಿತು.

Advertisement

ಕಿಮ್ಸ್‌ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ನಂತರಮೃತದೇಹಗಳನ್ನು 2 ಆಂಬ್ಯುಲೆನ್ಸ್‌ ಗಳಲ್ಲಿ ಗೂಡ್ಸ್‌ಶೆಡ್‌ ರಸ್ತೆ ಗಣೇಶಪೇಟೆಯ ಕುಲಕರ್ಣಿ ಹಕ್ಕಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆ ಕುಟುಂಬಸ್ಥರ, ಸಂಬಂಧಿಕರ, ಹಿತೈಷಿಗಳ ಹಾಗೂ ಓಣಿಯ ನಿವಾಸಿಗಳ ಆಕ್ರಂದನ ಹೇಳತೀರದಾಗಿತ್ತು. ಗಣೇಶಪೇಟೆಯ ಬಡೇ ಮಸೀದಿ ಬಳಿ ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಸಾಮೂಹಿಕ ಪ್ರಾರ್ಥನೆ ನಂತರ ನಾಲ್ವರ ಶವಗಳನ್ನು ತೊರವಿ ಹಕ್ಕಲದ ಖಬರಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೃತರ ನಿವಾಸಕ್ಕೆ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅಂಜುಮನ್‌-ಎ-ಇಸ್ಲಾಂಸಂಸ್ಥೆ ಅಧ್ಯಕ್ಷ ಮಹಮ್ಮದಯುಸೂಫ ಸವಣೂರ, ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಖಜಾಂಚಿ ದಾದಾಹೈಯಾತ್‌ ಖೈರಾತಿ ಮೊದಲಾದವರು ಭೇಟಿಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಡುಗಟ್ಟಿದ ದುಃಖ: ಕುಲಕರ್ಣಿ ಹಕ್ಕಲದಲ್ಲಿ ಒಂದೇ ವಯೋಮಾನದ ಸ್ನೇಹಿತರು ನೀರಿನಲ್ಲಿ ಮುಳುಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಸಂಜೆಯಿಂದಲೇ ಓಣಿಯಲ್ಲಿ ನೀರವ ಮೌನ ಆವರಿಸಿತ್ತು. ಎಲ್ಲರಲ್ಲೂ ದುಃಖ ಮಡುಗಟ್ಟಿತ್ತು. ಮೃತರ ಕುಟುಂಬದವರು, ಸಂಬಂಧಿಕರು ಮಾತ್ರವಲ್ಲದೆ ಅಕ್ಕ-ಪಕ್ಕದ ನಿವಾಸಿಗಳು ಹಾಗೂ ಓಣಿಯಲ್ಲಿನ ಜನರೆಲ್ಲ ಅದರಲ್ಲೂ ಮಹಿಳೆಯರು ಮೃತರ ಬಗ್ಗೆ ನೆನೆದುಕೊಂಡು ಕಣ್ಣೀರಿಡುತ್ತಿದ್ದರು.

ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಬಿಟ್ಟು ಹೋದರಲ್ಲ ಎಂದು ರೋದಿಸುತ್ತಿದ್ದುದು ಮನಕಲಕುವಂತಿತ್ತು. ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಲಾಗಿತ್ತು.

ಘಟನೆ ನಡೆದಿದ್ದು ಹೇಗೆ?:  ಗಣೇಶಪೇಟೆ ಕುಲಕರ್ಣಿ ಹಕ್ಕಲದ ಏಳು ಸ್ನೇಹಿತರು ಈದ್‌ ಮಿಲಾದ್‌ ಮರುದಿನ ಸೋಮವಾರ ಮಧ್ಯಾಹ್ನ ದೇವರ ಗುಡಿಹಾಳಕ್ಕೆ ಊಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಸಯ್ಯದ ಸುಬಾನ್‌ ಬಿಲಾಲ ಬುರಬುರಿ (18) ಕೆರೆಗೆ ಇಳಿದಾಗ ಅಲ್ಲಿ ತೆಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಈಜುಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ನೋಡಿದ ಸ್ನೇಹಿತರಾದ ಸೊಹೆಲ್‌ಅಹ್ಮದ ಮುಸ್ತಾಕಅಲಿ ಸಯ್ಯದ (17), ಮಹ್ಮದಆಯನ್‌ ಮೌಲಾಸಾಬ ಉಣಕಲ್‌ (17), ಸುಬಾನ್‌ ಅಹ್ಮದ ಹೊನ್ಯಾಳ (18) ಒಬ್ಬರನ್ನೊಬ್ಬರು ರಕ್ಷಿಸಲು ನೀರಿಗೆ ಇಳಿದಾಗ ಅವರು ಸಹ ಗುಂಡಿಗೆ ಬಿದ್ದು ಈಜು ಬಾರದೆ ಮೃತಪಟ್ಟಿದ್ದಾರೆ.

Advertisement

ಇವರೆಲ್ಲರ ಮೃತದೇಹಗಳನ್ನು ಸಂಜೆ 6 ಗಂಟೆ ಸುಮಾರಿಗೆ ಗ್ರಾಮಸ್ಥರು, ಅಗ್ನಿಶಾಮಕ ದಳ ಸಿಬ್ಬಂದಿ, ಗ್ರಾಮೀಣ ಠಾಣೆ ಪೊಲೀಸರು ಹೊರಕ್ಕೆ ತೆಗೆದಿದ್ದರು. ಇವರೊಂದಿಗೆ ತೆರಳಿದ್ದ ಇನ್ನುಳಿದ ಮೂವರು ಸ್ನೇಹಿತರಾದ ಇಜಾಸ್‌ ಶೇಖ, ಜುನೇದ ಕದಂಪುರ, ಸೊಹೆಲ್‌ ಶಿಕಾರಿ ಬದುಕುಳಿದಿದ್ದಾರೆ.

 

13 ವರ್ಷಗಳ ಬಳಿಕ ಹುಟ್ಟಿದ್ದ: ಆಟೋ ರಿಕ್ಷಾ ಚಾಲಕರಾದ ಬಿಲಾಲ ಬುರಬುರಿ ದಂಪತಿಗೆ ಸಯ್ಯದ ಸುಬಾನ್‌ 13 ವರ್ಷಗಳ ನಂತರ ಹುಟ್ಟಿದ್ದ. ಈತ ಮಗು ಇದ್ದಾಗಲೇ ಡೆಂಘೀಯಿಂದ ಬಳಲುತ್ತಿದ್ದ. ಆಗ ಬಿಲಾಲ ದಂಪತಿಯು ಅವನ ಚಿಕಿತ್ಸೆಗೆ ಸಾಕಷ್ಟು ಖರ್ಚು ಮಾಡಿ ಉಳಿಸಿಕೊಂಡು ಮಗನ ಮರುಜನ್ಮ ಪಡೆದಿದ್ದರು. ನಂತರ ಅವನನ್ನು ಮುದ್ದಿನಿಂದ ಸಾಕಿದ್ದರು. ಮುಂದಿನ ವರ್ಷ ಡಿಪ್ಲೊಮಾ ಕಲಿಸಬೇಕೆಂಬ ವಿಚಾರದಲ್ಲಿದ್ದರು. ಅಷ್ಟರೊಳಗೆ ಇಹಲೋಕ ತ್ಯಜಿಸಿಬಿಟ್ಟ. ವೃದ್ಧ ಬಿಲಾಲ ದಂಪತಿಗೆ ಅವನೊಬ್ಬನೇ ಆಸರೆಯಾಗಿದ್ದ ಎಂದು ಆಸಿಫ್‌ ಬಳ್ಳಾರಿ ಖೇದ ವ್ಯಕ್ತಪಡಿಸಿದರು.

ಪಬ್ಜಿ ಆಡಲು ಹೇಗೆ ಸಾಧ್ಯ?: ದೇವರ ಗುಡಿಹಾಳ ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕರಿಗೆ ಈಜಲು ಬರುತ್ತಿರಲಿಲ್ಲ. ಅಂಥವರು ಪಬ್ಜಿ ಗೇಮ್‌ ಆಡಲು ಹೇಗೆ ಸಾಧ್ಯ? ಓರ್ವ ನೀರಿನಲ್ಲಿ ಮುಳುಗಿದ್ದನ್ನು ಕಂಡು ಇನ್ನುಳಿದ ಮೂವರು ರಕ್ಷಣೆಗೆ ಹೋದಾಗ ಮೃತಪಟ್ಟಿದ್ದಾರೆ. ಏಳು ಸ್ನೇಹಿತರು ಕೂಡಿ ಹೋದವರಲ್ಲಿ ಯಾರ ಜನ್ಮದಿನಾಚರಣೆಯೂ ಇರಲಿಲ್ಲ. ಓಣಿಯಲ್ಲಿ ಓರ್ವನ ಜನ್ಮದಿನ ಮುಗಿಸಿಕೊಂಡು, ಊಟ ಮಾಡಿಕೊಂಡು ಹೋಗಿದ್ದರು. ನಾಲ್ವರ ಶವಗಳು ಒಂದೇ ಬದಿ ಸಿಕ್ಕಿವೆ ಎಂದು ಗ್ರಾಮೀಣ ಠಾಣೆಯ ಇನ್‌ಚಾರ್ಜ್‌ ಇನ್‌ಸ್ಪೆಕ್ಟರ್‌ ಜಯಂತ ಗವಳಿ “ಉದಯವಾಣಿ’ಗೆ ತಿಳಿಸಿದರು.

10 ಲಕ್ಷ ಪರಿಹಾರ, ಮನೆ ಕೊಡಿ:  ನಾಲ್ವರು ಯುವಕರು ಮೃತಪಟ್ಟರೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಯಾರೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬರಲಿಲ್ಲ. ಅವರು ಅಲ್ಪಸಂಖ್ಯಾತರ ಕಡೆಗೂ ಗಮನ ಹರಿಸಲಿ. ಮೃತರ ಕುಟುಂಬದವರು ಕಡುಬಡವರಾಗಿದ್ದು, ಸರಿಯಾದ ಮನೆ ಸಹ ಇಲ್ಲ. ಸರಕಾರ ಮೃತರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಆಶ್ರಯ ಯೋಜನೆಯಡಿ ಮನೆ ಕೊಡಬೇಕು. ಅಂಜುಮನ್‌ ಸಂಸ್ಥೆಯಿಂದಲೂ ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಯೋಜಿಸಲಾಗುವುದು ಎಂದು ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹಮ್ಮದಯುಸುಫ್‌ ಸವಣೂರ ಆಗ್ರಹಿಸಿದರು.

ನೀರಿನಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಮೃತಪಡುವ ಮೂಲಕ ಕುಲಕರ್ಣಿ ಹಕ್ಕಲದಲ್ಲಿ ದೊಡ್ಡ ದುರಂತವಾಗಿದೆ. ಮೃತರ ಕುಟುಂಬದವರು ಕಡುಬಡವರಾಗಿದ್ದಾರೆ. ಅವರಿಗೆ ವಿಶೇಷ ಪರಿಹಾರ ನಿಧಿ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡುವೆ. ನನ್ನಿಂದಲೂ ಪರಿಹಾರ ನೀಡುವ ಕಾರ್ಯ ಮಾಡುವೆ. ಪ್ರಸಾದ ಅಬ್ಬಯ್ಯ, ಹು-ಧಾ ಪೂರ್ವ ಕ್ಷೇತ್ರದ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next