ರಾಯಚೂರು: ನಗರವನ್ನು ಟ್ರಾಫಿಕ್ ಫ್ರೀ ಮಾಡಬೇಕು ಎಂದು ಹಿಂದೆಯೇ ಯೋಜನೆ ರೂಪಿಸಿದ್ದ ನೀಲನಕ್ಷೆ ಜಾರಿಯಾಗದೆ ಧೂಳು ತಿನ್ನುತ್ತಿದೆ. ಇತ್ತ ಪ್ರಯಾಣಿಕರು ಕೂಡ ಟ್ರಾಫಿಕ್ ಸಮಸ್ಯೆಯಿಂದ ಯಾತನೆ ಅನುಭವಿಸುವುದು ತಪ್ಪುತ್ತಿಲ್ಲ.
ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಒನ್ ಸೈಡ್ ಪಾರ್ಕಿಂಗ್ ಪದ್ಧತಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಲೇ ಇಲ್ಲ. ಜನ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುತ್ತಿದ್ದು, ಓಡಾಡುವುದೇ ದುಸ್ಸಾಹಸ ಎನ್ನುವಂತಾಗಿದೆ.
ನಗರದ ಹೃದಯ ಭಾಗವಾದ ತಹಸೀಲ್ ಕಚೇರಿ ಬಳಿಯೇ ಬೇಕಾಬಿಟ್ಟಿ ಪಾರ್ಕಿಂಗ್ ಆಗುತ್ತಿದೆ. ನಗರಸಭೆ ಕಚೇರಿ, ತಹಸೀಲ್ ಕಚೇರಿ, ತಾಲೂಕು ಪಂಚಾಯಿತಿ, ಡಿಡಿಪಿಐ ಕಚೇರಿ, ಕರ್ನಾಟಕ ಒನ್ ಕಚೇರಿ, ಕೇಂದ್ರ ಅಂಚೆ ಕಚೇರಿ, ಸರ್ಕಾರಿ ಕಾಲೇಜ್ ಇಲ್ಲೇ ಇರುವುದರಿಂದ ನಿತ್ಯ ಜನ ಸಂಚಾರ ಹೆಚ್ಚಾಗಿರುತ್ತದೆ. ಅದರ ಜತೆಗೆ ಡಿಸಿ ಕಚೇರಿಗೆ ತೆರಳುವ ರಸ್ತೆ ಕಾಮಗಾರಿ ನಡೆದ ಕಾರಣ ಆ ಮಾರ್ಗವನ್ನು ಬಂದ್ ಮಾಡಿರುವುದು ವಾಹನ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಇಲ್ಲಿ ಒನ್ ಸೈಡ್ ಪಾರ್ಕಿಂಗ್ ಮಾಡಬೇಕು ಎಂಬ ನಿಯಮ ಜಾರಿ ಮಾಡಿದರೂ ಜನ ಮಾತ್ರ ಕ್ಯಾರೇ ಎನ್ನದೆ ಎರಡು ಕಡೆ ವಾಹನ ನಿಲ್ಲಿಸುತ್ತಾರೆ. ಇದನ್ನು ಕೇಳಬೇಕಾದ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಕಚೇರಿ ಕೆಲಸಕ್ಕೆ ಹೋದವರು ಗಂಟೆಗಟ್ಟಲೇ ಕಚೇರಿಯಲ್ಲೇ ಉಳಿಯಬೇಕಾಗುತ್ತದೆ. ಇದರಿಂದ ಮುಂಚೆ ನಿಲ್ಲಿಸಿದ ವಾಹನಗಳ ಹಿಂದೆಯೇ ಮತ್ತೆ ವಾಹನ ನಿಲ್ಲಿಸುತ್ತಾರೆ. ಅವೈಜ್ಞಾನಿ ನಡೆಯಿಂದ ಜನರಿಗೆ ಮಾತ್ರ ತಾಪತ್ರಯ ತಪ್ಪುತ್ತಿಲ್ಲ.
ನನೆಗುದಿಗೆ ಬಿದ್ದ ಯೋಜನೆ: ನಗರದಲ್ಲಿ ವ್ಯವಸ್ಥಿತವಾದ ಟ್ರಾಫಿಕ್ ಪದ್ಧತಿ ಜಾರಿಗೊಳಿಸಲು ವಿಶೇಷ ಯೋಜನೆ ರೂಪಿಸಲಾಗಿತ್ತು. ಪಾರ್ಕಿಂಗ್, ಒನ್ ವೇ ಪದ್ಧತಿ, ಭಾರಿ ವಾಹನ ನಿಷೇಧ ಸೇರಿದಂತೆ ಕೆಲವೊಂದು ನಿಯಮಗಳು ಒಳಗೊಂಡ ವಿಸ್ತೃತ ವರದಿ ತಯಾರಿಸಲಾಗಿತ್ತು. ಆದರೆ, ಅದನ್ನು ಜಾರಿ ಮಾಡುವುದಾಗಿ ಹಿಂದಿನ ಎಸ್‌ಪಿ ತಿಳಿಸಿದ್ದರೂ ಈವರೆಗೂ ಜಾರಿಯಾಗಿಲ್ಲ. ನಗರದಲ್ಲಿ ದಿನೇದಿನೇ ವಾಹನ ದಟ್ಟಣೆ ಹೆಚ್ಚುತ್ತಿದ್ದರೂ ಇನ್ನೂ ಹಳೇ ಪದ್ಧತಿಯಲ್ಲೇ ಟ್ರಾಫಿಕ್ ನಿಯಮಗಳ ಜಾರಿ ಮಾಡುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದು ಜನರ ಆರೋಪ.
ಸೂಚನಾ ಫಲಕಗಳೇ ಇಲ್ಲ: ಒನ್ ಸೈಡ್ ಪಾರ್ಕಿಂಗ್ ಜಾರಿ ಮಾಡಿದ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಸೂಕ್ತ ಸೂಚನಾ ಫಲಕಗಳನ್ನು ಹಾಕಿಲ್ಲ. ಜನ ಗೊತ್ತಿಲ್ಲದೇ ವಾಹನ ನಿಲ್ಲಿಸಿ ಹೋದಲ್ಲಿ ಪೊಲೀಸರು ಆಕ್ಷೇಪಣೆ ಮಾಡುತ್ತಾರೆ ಎಂದು ಜನ ದೂರುತ್ತಾರೆ. ಈ ರೀತಿ ಗೊತ್ತಿಲ್ಲದೇ ಸಾಕಷ್ಟು ಜನ ಬಂದು ದಂಡ ಕಟ್ಟಿದ ನಿದರ್ಶನಗಳಿವೆ. ಎರಡು ಬದಿ ಸಾಕಷ್ಟು ವಾಹನಗಳು ನಿಂತಾಗ ಜನರಿಗೂ ಗೊಂದಲವಾಗುತ್ತಿದೆ. ಯಾವ ಕಡೆ ನಿಲ್ಲಿಸಬೇಕು ಎಂಬುದು ಗೊತ್ತಾಗದಂತಾಗಿದೆ.