ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್ ಊಹೆಗೂ ನಿಲುಕದಂತೆ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್-4.0 ಜಾರಿಯಲ್ಲಿದೆ. ಈ ನಡುವೆ ಹಲವಾರು ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ದಾವಣಗೆರೆಯಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ 56 ದಿನಗಳ ಕಾಲ ರಸ್ತೆಗೆ ಇಳಿಯದ ಸಾರಿಗೆ ಸಂಸ್ಥೆ ಬಸ್ ಸಂಚರಿಸಿದವು. ನಗರ ಸಾರಿಗೆ ಬಸ್‌ಗಳಿಗೆ ಅನುಮತಿ ನೀಡಲಾಗಿದ್ದು ವಿದ್ಯಾನಗರ- ವಿಶ್ವವಿದ್ಯಾಲಯ ಮಾರ್ಗದ ಬಸ್ ಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರೆ, ಇನ್ನುಳಿದ ಮಾರ್ಗಗಳ ಬಸ್‌ಗಳಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರು. ಸರ್ಕಾರದ ಅನುಮತಿ ಹೊರತಾಗಿಯೂ ಖಾಸಗಿ ಬಸ್ ಸಂಚಾರ ಇರಲಿಲ್ಲ. ಹಾಗಾಗಿ ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ ಸಂಚಾರ ಪ್ರಾರಂಭದ ಕುರಿತಂತೆ ಬುಧವಾರ ದಾವಣಗೆರೆಯಲ್ಲಿ ಸಭೆ ಕರೆಯಲಾಗಿದೆ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಜಿಲ್ಲಾ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ಹೇರ್ ಕಟಿಂಗ್ ಸಲೂನ್, ಬ್ಯೂಟಿಪಾರ್ಲರ್, ಸ್ಪಾ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಾಹಿತಿ ಕೊರತೆ, ವಾರದ ರಜೆ (ಮಂಗಳವಾರ ಹೇರ್‌ಕಟಿಂಗ್ ಸಲೂನ್ ಗೆ ರಜೆ) ಇರುವ ಕಾರಣಕ್ಕೆ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದಾರೆ. ಬುಧವಾರದಿಂದ ಹೆಚ್ಚಾಗಬಹುದು ಎಂದು ಸಲೂನ್‌ನರುತಿಳಿಸಿದರು. ಆಟೋರಿಕ್ಷಾಗಳು ಸಹ ರಸ್ತೆಗೆ ಇಳಿದವು. ಚಾಲಕ ಸೇರಿದಂತೆ ಇಬ್ಬರಿಗೆ ಮಾತ್ರ ಅನುಮತಿ ಇರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು. ಗಂಡ-ಹೆಂಡತಿ ಜೊತೆಗ ಒಂದು ಮಗು ಇದ್ದರೆ ರೂಲ್ಸ್ ಪ್ರಕಾರ ಹೇಗೆ ನಡೆದುಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ. ಯಾವುದೇ ತಂದೆ-ತಾಯಿ ಮಗುವನ್ನು ಬಿಟ್ಟು ಆಟೋಗಳಿಗೆ ಬರುತ್ತಾರಾ, ಇಬ್ಬರಿಗೆ ಒಂದು ಆಟೋ, ಮಗುವಿಗೆ ಇನ್ನೊಂದು ಆಟೋ ಮಾಡಲಿಕ್ಕಾಗುತ್ತದೆಯೇ, ಹಾಗಾಗಿ 10 ವರ್ಷದ ಮೇಲ್ಪಟ್ಟಂತಹವರು ಏನಾದರೂ ಇದ್ದರೆ ಮೂವರಿಗೆ ಅನುಮತಿ ನೀಡಬೇಕು ಎಂದು ಆಟೋರಿಕ್ಷಾ ಚಾಲಕ ಎಚ್. ವೆಂಕಟೇಶ್ ಮನವಿ ಮಾಡಿದ್ದಾರೆ.
ಕಳೆದ 20 ವರ್ಷದಿಂದ ಆಟೋರಿಕ್ಷಾ ಚಾಲನೆ ಮಾಡುತ್ತಾ ಇದ್ದೇನೆ. ಇಷ್ಟು ದಿನಗಳ ಕಾಲ ಆಟೋ ನಿಂತಿದ್ದ ಉದಾಹರಣೆ ಇಲ್ಲ. ನಮ್ಮ ಜೀವಕ್ಕಾಗಿ ಲಾಕ್‌ಡೌನ್ ಮಾಡಿರುವುದು ಒಳ್ಳೆಯದು. ಆದರೆ ಬಡವರು, ನಿರ್ಗತಿಕರ ಜೀವನ ನಡೆಸುವ ಬಗ್ಗೆಯೂ ಮುಂದಾಲೋಚನೆ ಮಾಡಬೇಕಿತ್ತು. ಈಗಲಾದರೂ ಸರಿಯಾಗಿ ಆರ್ಡರ್ ಮಾಡಿ ಅನುಕೂಲ ಮಾಡಿಕೊಡಬೇಕು ಎಂದರು. ಬ್ಯೂಟಿಪಾರ್ಲರ್‌ಗಳಿಗೆ ಅನುಮತಿ ನೀಡಿದ್ದರೂ ಅನೇಕ ಕಡೆ ಗ್ರಾಹಕರೇಇರಲಿಲ್ಲ. ಬಹಳ ದಿನಗಳ ನಂತರ ಪಾರ್ಲರ್ ತೆರೆದವರು ನಿರಾಸೆ ಅನುಭವಿಸಿದರು. ಗ್ರಾಹಕರಿಗಾಗಿ ಕಾಯುತ್ತಿರುವುದು ಕಂಡು ಬಂದಿತು. ಒಟ್ಟಾರೆ ದಾವಣಗೆರೆಯಲ್ಲಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.