Advertisement

ಸಂಚಾರ ನಿಯಮ ಉಲ್ಲಂಘನೆ-ದಂಡ ವಸೂಲಿ

05:04 PM May 27, 2022 | Team Udayavani |

ಹೊನ್ನಾವರ: ತಿಂಗಳ ಕೊನೆಗೊಮ್ಮೆ ಇಲಾಖೆಗೆ ಲೆಕ್ಕಕೊಡಲು ಪೊಲೀಸ್‌ ಠಾಣೆ ಎದುರು ನಿಂತು ಪೊಲೀಸರು ಬೈಕ್‌ ಸವಾರರ ಮೇಲೆ ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಡುವುದನ್ನು ಬಿಟ್ಟರೆ ಉಳಿದ ಎಲ್ಲ ದಿನಗಳಲ್ಲಿ ಹೊನ್ನಾವರ ಸಂಚಾರ ಕಿಷ್ಕಿಂದೆ.

Advertisement

ಸ್ಟ್ಯಾಂಡ್‌ಗೆ ಬಸ್‌ ಬಂದು-ಹೋಗುವ ಮಾರ್ಗ ಒಂದೇ ಆಗಿದ್ದು ಗೂಡಂಗಡಿ ತೆಗೆದ ಸ್ಥಳದಲ್ಲಿ ಜನ ಬೈಕ್‌ ನಿಲ್ಲಿಸುತ್ತಿದ್ದು ಪ್ರತಿ ಬಸ್‌ ಬಂದು ಹೋಗುವಾಗಲೂ ನಿಂತು ಎದುರು ಬಂದ ವಾಹನ ದಾಟಿದ ಮೇಲೆ ಹೋಗಬೇಕಾಗುತ್ತದೆ.

ಈ ರಸ್ತೆಯನ್ನು ವಿಸ್ತರಿಸುವುದಾಗಿ ಹೇಳಲಾಗಿತ್ತು. ಪಪಂ ಪಕ್ಕದ ಕಟ್ಟಡದಲ್ಲಿರುವ ಅಂಗಡಿಯಲ್ಲದೆ ರಸ್ತೆ ಮಧ್ಯೆ ತರಕಾರಿ ಹಾಕಿಕೊಂಡಿದೆ. ಎರಡು ವಾಹನ ಓಡಾಡುವ ಸ್ಥಳದಲ್ಲಿ ಒಂದು ವಾಹನಕ್ಕೂ ದಾಟಲು ಸಾಧ್ಯವಾಗುವುದಿಲ್ಲ. ನಿತ್ಯ ಇದೇ ಗೋಳು.

ಸ್ವಲ್ಪ ಮುಂದೆ ಟಪ್ಪರ್‌ ಹಾಲ್‌ ಸರ್ಕಲ್‌ಗೆ ಹೋದರೆ ಅಲ್ಲಿ ಕುಮಟಾ, ಗೇರಸೊಪ್ಪಾ ಟೊಂಪೋಗಳು ಬಸ್‌ನ್ನು ಅಡ್ಡಗಟ್ಟುತ್ತವೆ. ಭಟ್ಕಳ ಕಡೆಯಿಂದ ಬರುವ ಟೆಂಪೋಗಳು ಬದಿಯಲ್ಲಿ ನಿಲ್ಲದೆ ಸರ್ಕಲ್‌ನಲ್ಲೇ ಪ್ರಯಾಣಿಕರನ್ನು ಇಳಿಸುತ್ತದೆ. ಎರಡು ಶಾಲೆ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ ರಸ್ತೆಗಳು ಸೇರುವ ಈ ಸರ್ಕಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಸಂಚಾರ ಕಿಷ್ಕಿಂದೆಯಾಗುತ್ತದೆ.

ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಕಾಲೇಜು ಸರ್ಕಲ್‌ ಇನ್ನೊಂದು ಅದ್ವಾನ. ರಾಷ್ಟ್ರೀಯ ಹೆದ್ದಾರಿಗಳು ಸೇರುವುದರಿಂದ ವಾಹನದಟ್ಟಣೆಯ ಜೊತೆ ಎರಡು ಕಾಲೇಜು, ಎರಡು ಮಾಧ್ಯಮಿಕ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಹೋಗಿ ಬರುವ ಜನರ ದಟ್ಟಣೆ. ಎಡ-ಬಲ ಎನ್ನದೆ ನುಗ್ಗಿ ಬರುವ ಬೈಕ್‌ಗಳು, ಧಾವಿಸಿ ಬರುವ 20-30 ಚಕ್ರಗಳ ಲಾರಿಗಳು ಓಡಾಡುವವರನ್ನು ಗಾಬರಿಗೊಳಿಸುತ್ತವೆ. ಇನ್ನು ಶನಿವಾರ ಬಂದರದಲ್ಲಿ ವಾರದ ಸಂತೆ.

Advertisement

ಪಾದಾಚಾರಿಗಳಿಗೂ ಓಡಾಡುವುದು ಕಷ್ಟ. ಅಲ್ಲೂ ವಾಹನಗಳು ನುಗ್ಗುತ್ತವೆ. ಪೇಟೆಯಲ್ಲಂತೂ ಬೈಕ್‌ ಗಳನ್ನು ಓಡಾಡಿಸುವುದು ಕಷ್ಟ, ಅಲ್ಲಿ ಕಾರುಗಳನ್ನು ನಿಲ್ಲಿಸಿ ಎಲ್ಲೆಲ್ಲೋ ವ್ಯಾಪಾರಕ್ಕೆ ಹೋಗುವವರು. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ. ಪೇಟೆ, ಬಂದರು, ಪ್ರಭಾತನಗರ ಎಲ್ಲಿ ಹುಡುಕಿದರೂ ಒಬ್ಬ ಸಂಚಾರಿ ಪೊಲೀಸರೂ ಸಿಗುವುದಿಲ್ಲ.

ಸಿಬ್ಬಂದಿ ಕಡಿಮೆ, ಅಧಿಕಾರಿಗಳು ಹೆಚ್ಚು. ಮಂತ್ರಿಗಳ ಎಸ್ಕಾರ್ಟ್‌, ಕೋರ್ಟ್‌ ಸಮನ್ಸ್‌ ಡ್ನೂಟಿಗಳು, ಸಭೆ-ಸಮಾರಂಭಗಳು ಹೀಗೆ ಇರುವ 50 ಪೊಲೀಸರು ಹಂಚಿಹೋಗುತ್ತಾರೆ. ಸಂಚಾರಿ ಪೊಲೀಸರಿಲ್ಲ. ಇರುವವರಿಗೆ ಬಿಡುವಿಲ್ಲ. ಪೊಲೀಸರಿಗೂ ಕಷ್ಟ, ಜನಕ್ಕೆ ನಷ್ಟ.

ಇದೆಲ್ಲವನ್ನೂ ನೋಡುತ್ತ ಆಗೀಗ ಪೊಲೀಸ್‌ ಅಧಿಕಾರಿಗಳು ತಮ್ಮ ಜೀಪಿನಲ್ಲಿ ಪೇಟೆ ಹಾದು ಹೋಗುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬಂದು ಏಕಮುಖ ರಸ್ತೆ ಸಂಚಾರ ಮಾಡಲಾಗುವುದು, ಎರಡು ವಾರದಲ್ಲಿ ಸಂಚಾರ ಸುಗಮಗೊಳಿಸಲಾಗುವುದು ಎಂದು ಹೇಳಿ ಹೋಗಿ 6 ತಿಂಗಳಾಯಿತು.

ಪೊಲೀಸರು ಆಸಕ್ತಿ ವಹಿಸುವುದಿಲ್ಲ, ಪಪಂ ಸಂಬಂಧವಿಲ್ಲದಂತಿದೆ. ಎರಡ್ಮೂರು ಜನರನ್ನು ಕೂರಿಸಿಕೊಂಡು, ಒಂದು ಕೈಲಿ ಮೊಬೈಲ್‌ ಹಿಡಿದು ಮಾತನಾಡುತ್ತ ಪೊಲೀಸರೆದುರೇ ಹೋಗುವ ಬೈಕ್‌, ಸ್ಕೂಟರ್‌ ಸವಾರರನ್ನು ದೇವರೇ ಕಾಪಾಡಬೇಕು. ಕಾಲೇಜು ಸರ್ಕಲ್‌, ಟಪ್ಪರ್‌ ಹಾಲ್‌ ಸರ್ಕಲ್‌, ಬಸ್‌ ಸ್ಟ್ಯಾಂಡ್‌ ಮತ್ತು ಬಂದರದಲ್ಲಿ ಕನಿಷ್ಠ ಒಬ್ಬ ಪೊಲೀಸರನ್ನಾದರೂ ಇಟ್ಟು ಒಬ್ಬ ಎಎಸ್‌ಐ ಅನ್ನು ಇವರ ಉಸ್ತುವಾರಿಗೆ ಇಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next