Advertisement

2 ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇಳಿಕೆ!

05:18 PM Jan 12, 2022 | Team Udayavani |

ಮಹಾನಗರ: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ!

Advertisement

2020 ರಲ್ಲಿ 94,510 ಪ್ರಕರಣಗಳು ದಾಖಲಾಗಿದ್ದರೆ 2021ರಲ್ಲಿ 1,27,273 ಪ್ರಕರಣಗಳು ದಾಖಲಾಗಿವೆ. 2019ಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ. 2019ರಲ್ಲಿ ಒಟ್ಟು 2,85,025 ಪ್ರಕರಣಗಳು ದಾಖಲಾಗಿದ್ದವು.

ದಂಡ ಸಂಗ್ರಹ ಹೆಚ್ಚಳ
ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಒಟ್ಟು ದಂಡ ಸಂಗ್ರಹದ ಮೊತ್ತ ಹೆಚ್ಚಳವಾಗಿದೆ. 2019ರಲ್ಲಿ 4.47 ಕೋ.ರೂ. ದಂಡ ಸಂಗ್ರಹವಾಗಿದ್ದರೆ 2020ರಲ್ಲಿ 4.20 ಕೋ.ರೂ. ದಂಡ ವಸೂಲಾಗಿತ್ತು. ಕಳೆದ ವರ್ಷ 5.86 ಕೋ.ರೂ. ದಂಡ ವಸೂಲಾಗಿದೆ. 2019ರ ಸೆಪ್ಟೆಂಬರ್‌ ವೇಳೆಗೆ ದಂಡದ ಪ್ರಮಾಣ ಹೆಚ್ಚಳವಾಗಿರುವುದು ಒಟ್ಟು ದಂಡದ ಸಂಗ್ರಹ ಅಧಿಕವಾಗಲು ಕಾರಣ.

ಹೆಲ್ಮೆಟ್‌ ಧರಿಸದ ಪ್ರಕರಣಗಳೇ ಅಧಿಕ
ಕಳೆದ ವರ್ಷ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಹೆಲ್ಮೆಟ್‌ ಧರಿಸದ ಪ್ರಕರಣಗಳ ಸಂಖ್ಯೆಯೇ ಅಧಿಕ. ಹೆಲ್ಮೆಟ್‌ ಧರಿಸದ 28,381 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇತರ 81,528 ಪ್ರಕರಣಗಳು, ಬಸ್‌ನಲ್ಲಿ ಮಿತಿಮೀರಿದ ಪ್ರಯಾಣಿಕರನ್ನು ತುಂಬಿಸಿರುವುದಕ್ಕೆ 5,104 ಪ್ರಕರಣ, ಅತೀ ವೇಗದ ಚಾಲನೆಗೆ 19, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡಿರುವುದಕ್ಕೆ 686, ಕರ್ಕಶ ಹಾರನ್‌ ಬಳಕೆ ಮಾಡಿರುವುದಕ್ಕೆ 787 ಪ್ರಕರಣ ದಾಖಲಿಸಲಾಗಿವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 36 ಮಂದಿ ವಿರುದ್ಧ, ಟಿಂಟ್‌ ಗ್ಲಾಸ್‌ ಅಳವಡಿಸಿರುವುದಕ್ಕೆ 9,374 ಪ್ರಕರಣ, ಲೈಸನ್ಸ್‌ ಇಲ್ಲದೆ ಚಾಲನೆ ಮಾಡಿರುವುದಕ್ಕೆ 208, ವಾಯುಮಾಲಿನ್ಯಕ್ಕೆ ಸಂಬಂಧಿಸಿ 116 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೆಮರಾ ಆಧಾರಿತ ಪ್ರಕರಣ ಹೆಚ್ಚಳ
ಪೊಲೀಸರೇ ಖುದ್ದಾಗಿ ಪರಿಶೀಲನೆ ನಡೆಸಿ ನೇರವಾಗಿ ಪ್ರಕರಣ ದಾಖಲಿಸಿಕೊಂಡಿರುವ ಜತೆಗೆ ಅವರ ಬಳಿ ಇರುವ ಮೊಬೈಲ್‌ ಕೆಮರಾ, ವಿವಿಧೆಡೆ ಅಳವಡಿಸಿರುವ ಸಿಸಿ ಕೆಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಅನುಸರಿಸಿ ವಾಹನದ ಮಾಲಕರ ವಿಳಾಸಕ್ಕೆ ನೋಟಿಸ್‌ ಕಳುಹಿಸಿರುವ ಪ್ರಕರಣಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ. ಇತ್ತೀಚಿನ ದಿನಗಳಲ್ಲಿ ಕೆಮರಾ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿ ದಂಡ ವಸೂಲಾತಿ ಹೆಚ್ಚಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

19 ಠಾಣೆಗಳ ವ್ಯಾಪ್ತಿ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ಸಹಿತ 15 ಕಾನೂನು ಸುವ್ಯವಸ್ಥೆಯ ಹಾಗೂ 4 ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯನ್ನು ಹೊಂದಿದೆ.

ದಂಡದ ಹೆಚ್ಚಳವೂ ಪ್ರಕರಣ ಇಳಿಕೆಗೆ ಕಾರಣ
ಲಾಕ್‌ಡೌನ್‌, ಕರ್ಫ್ಯೂ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದೆರಡು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ 2019ರ ಸೆಪ್ಟೆಂಬರ್‌ ಅನಂತರ ಕೆಲವು ಪ್ರಕರಣಗಳಲ್ಲಿ 3ರಿಂದ 5 ಪಟ್ಟು ದಂಡ ಹೆಚ್ಚಳ ಮಾಡಿರುವುದರಿಂದ ಅನೇಕ ಮಂದಿ ಸಂಚಾರ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದ್ದಾರೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಇದು ಕೂಡ ಪ್ರಮುಖ ಕಾರಣ ಎನ್ನುತ್ತಾರೆ ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಗಳು.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next