ಬೆಂಗಳೂರು: ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆಗಳನ್ನು ಮುಗಿಸಿಕೊಂಡು ಸಿಲಿಕಾನ್ ಸಿಟಿ ಕಡೆ ಜನ ಹಿಂದುರಿಗಿದ ಕಾರಣ, ನಗರದ ನಾಲ್ಕು ದಿಕ್ಕುಗಳಲ್ಲೂ ಭಾನುವಾರ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಕಳೆದ ಗುರುವಾರದಿಂದ ಭಾನುವಾರದವರೆಗೂ ಸರಣಿ ರಜೆ ಇತ್ತು. ಹೀಗಾಗಿ ಸೋಮವಾರದಿಂದ ಕೆಲಸಕ್ಕೆ ಹೋಗುವವರು ಭಾನುವಾರವೇ ವಾಪಸ್ ಬೆಂಗಳೂರಿಗೆ ಬಂದರು. ಅದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಮಧ್ಯಾಹ್ನ 2 ಗಂಟೆ ಬಳಿಕ ತುಮಕೂರು ರಸ್ತೆಯ ನೆಲಮಂಗಲ ಟೋಲ್‌ಗೇಟ್‌ನಿಂದ ಗೊರಗುಂಟೆಪಾಳ್ಯ ಸಿಗ್ನಲ್‌ವರೆಗೆ, ಮೈಸೂರು ರಸ್ತೆಯ ಕುಂಬಳ ಗೋಡಿನಿಂದ ಕೆಂಗೇರಿವರೆಗಿನ ಮೈಸೂರು- ಬೆಂಗಳೂರು ಹೆದ್ದಾರಿ, ಸರ್ವೀಸ್ ರಸ್ತೆಗಳು, ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಮೇಲು ಸೇತುವೆ ಮತ್ತು ಕೆಳಭಾಗ, ಬಳ್ಳಾರಿ ರಸ್ತೆಯ ಹೆಬ್ಟಾಳ ಮೇಲು ಸೇತುವೆ ಮತ್ತು ಕೆಳಭಾಗದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು. ಆದರೆ, ಸಂಜೆ 6.30ರಿಂದ ರಾತ್ರಿ 11 ಗಂಟೆವರೆಗೂ ನಗರಕ್ಕೆ ವಾಹನಗಳ ಪ್ರವೇಶ ಹೆಚ್ಚಾಗಿದ್ದರಿಂದ ಪ್ರತಿ ಸಿಗ್ನಲ್‌ಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಗಂಟೆಗಟ್ಟಲೇ ವಾಹನಗಳು ಸಿಗ್ನಲ್‌ಗಳಲ್ಲೇ ನಿಂತುಕೊಳ್ಳಬೇಕಾಯಿತು. ಹೀಗಾಗಿ ಮಂದಗತಿಯಲ್ಲಿ ವಾಹನ ಚಾಲನೆ ಇತ್ತು. ಅದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಜಂಕ್ಷನ್ ಹಾಗೂ ಸಿಗ್ನಲ್‌ಗಳಲ್ಲಿ ಖುದ್ದು ಕರ್ತವ್ಯ ನಿರ್ವಹಿಸಿದರೂ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರೇ ಹೈರಣಾದರು.
ನೆಲಮಂಗಲ ಬಳಿ ವಾಹನಗಳ ಸಾಲು: ಬೆಂಗಳೂರಿಗೆ ಹೆಬ್ಟಾಗಿಲಿನಂತಿರುವ ನೆಲಮಂಗಲ ಬಳಿಯ ಟೋಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಂಗಳೂರು ಮತ್ತು ಪೂನಾ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ಗಳ ಬಳಿ ಕಿ.ಮೀ.ಗಟ್ಟಲೆ ವಾಹನಗಳ ಸಾಲು ಕಂಡು ಬಂತು. ಸಂಜೆ ಮತ್ತು ರಾತ್ರಿ ಕಾರು, ಬಸ್, ಲಾರಿ, ಇತರೆ ವಾಹನಗಳು ಒಮ್ಮೆಲೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಮೈಸೂರು ರಸ್ತೆಯಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟು
ರಾಮನಗರ: ಬೆಂಗಳೂರು- ಮೈಸೂರು ದಶಪಥ ರಸ್ತೆಯಲ್ಲಿ ವಾಹನ ಸಂಚಾರ ಸಾಮಾನ್ಯ ದಿನಗಳಿಗಿಂತ ಭಾನುವಾರ ಸಂಜೆ ದುಪ್ಪಟ್ಟಾಗಿತ್ತು. ಎನ್‌ಎಚ್‌ಎಐ ಮೂಲಗಳ ಪ್ರಕಾರ 1.40 ಲಕ್ಷ ವಾಹನಗಳು ಬೆಂಗಳೂರಿನತ್ತ ಪ್ರಯಾಣಿಸಿವೆ.
ಬಿಡದಿಯ ಶೇಷಗಿರಿ ಟೋಲ್ ಬಳಿ 30 ನಿಮಿಷಕ್ಕೂ ಹೆಚ್ಚುಕಾಲ ವಾಹನಗಳು ಸಾಲುಗಟ್ಟಿ ನಿಲ್ಲುವಂತಾ ಗಿತ್ತು. ಎಕ್ಸ್ ಪ್ರಸ್ ವೇ ಕೊನೆಗೊಳ್ಳುತ್ತಿದ್ದಂತೆ ಬೆಂಗ ಳೂರಿಗೆ ಪ್ರವೇಶ ಪಡೆಯುವ ಕದಂಬ ಹೋಟೆಲ್ ಜಂಕ್ಷನ್ ಬಳಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರ್ವಿಸ್ ರಸ್ತೆಯಲ್ಲೂ ಜಾಮ್: ಎಕ್ಸ್‌ಪ್ರೆಸ್ ವೇ ಮಾತ್ರವಲ್ಲದೆ ಬೆಂಗಳೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಸಹ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿಡದಿಯಿಂದ ಕೆಲ ವಾಹನ ಸವಾರರು ಟೋಲ್ ಶುಲ್ಕ ತಪ್ಪಿಸಲು ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಿದ ಕಾರಣ, ಹೆಜ್ಜಾಲ, ಶೇಷಗಿರಿ ಹಳ್ಳಿ ಮೊದಲಾದ ಕಡೆ ಸರ್ವಿಸ್ ರಸ್ತೆಯಲ್ಲಿ ತಾಸುಗಟ್ಟಲೆ ವಾಹನಗಳು ಕಾಯ್ದು ನಿಲ್ಲುವಂತಾಗಿತ್ತು.