Advertisement

ಅರಮನೆ ಮೈದಾನದ ಸುತ್ತ ಸಂಚಾರ ದಟ್ಟಣೆ

12:27 PM Feb 05, 2018 | |

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ಲಕ್ಷಾಂತರ ಮಂದಿ ಕಾರ್ಯಕರ್ತರು ಪಾಲ್ಗೊಂಡ ಹಿನ್ನೆಲೆಯಲ್ಲಿ ಭಾನುವಾರ ನಗರದ ಅರಮನೆ ಮೈದಾನ ಸುತ್ತ-ಮುತ್ತ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

Advertisement

ರಾಜ್ಯ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಕಾರ್ಯಕರ್ತರು ಬಸ್‌, ಕಾರು, ಟೆಂಪೋ ಹಾಗೂ ರೈಲುಗಳಲ್ಲಿ ಆಗಮಿಸಿದ್ದರಿಂದ ಬೆಳಗ್ಗೆ 11 ಗಂಟೆಯಿಂದ ಯಶವಂತಪುರ, ಮೈಸೂರು ರಸ್ತೆ, ಮೆಜೆಸ್ಟಿಕ್‌ ಪ್ರಮುಖವಾಗಿ ಬಳ್ಳಾರಿ ರಸ್ತೆ, ಜಯಮಹಲ್‌ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಒಂದೆರಡು ಗಂಟೆ ಕಾಲ ಸಂಚಾರ  ಸುಗಮವಾದರೂ ಮಧ್ಯಾಹ್ನ 1 ಗಂಟೆಯಿಂದ ಮತ್ತೆ ಸಂಚಾರ ದಟ್ಟಣೆ ಅಧಿಕವಾಗಿತ್ತು.

ಪ್ರಧಾನಿ ಮೋದಿಯವರು  ಸಂಜೆ 5 ಗಂಟೆ ಸುಮಾರಿಗೆ ಭಾಷಣ ಮುಗಿಸಿ ಹೊರಡುತ್ತಿದ್ದಂತೆ ಮತ್ತೆ ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಅತ್ಯಧಿಕವಾಗಿತ್ತು. ವಾಹನ ಸವಾರರು ರಸ್ತೆಯಲ್ಲಿ ಗಂಟೆಗಟ್ಟಲೇ ನಿಲ್ಲಬೇಕಾಯಿತು. ಇನ್ನು  ಅಕ್ಕ-ಪಕ್ಕದ ಜಿಲ್ಲೆಗಳಿಂದ ಬಸ್‌ ಹಾಗೂ ಸ್ವಂತ ವಾಹನಗಳಲ್ಲಿ ಆಗಮಿಸಿದ್ದ ಕಾರ್ಯಕರ್ತರು ನಗರದಿಂದ ಹೊರಹೋಗಲು ರಾತ್ರಿ 11 ಗಂಟೆ ಆಯಿತು.

ಮೇಖೀ ವೃತ್ತದಿಂದ ಅರಮನೆ ಮೈದಾನದವರಿಗೆ ಹೋಗುವಂತಹ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಸಂಚಾರ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು ಪರ್ಯಾಯ ಮಾರ್ಗ ತೋರಿಸುತ್ತಿದ್ದರೂ ಸಂಚಾರ ದಟ್ಟಣೆ ಕಡಿಮೆ ಆಗಲೇ ಇಲ್ಲ.

ಹೆಬ್ಟಾಳದಿಂದ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೇಖೀ ವೃತ್ತ, ಜಯಮಹಲ್‌, ಅರಮನೆ ರಸ್ತೆ, ಬಸವೇಶ್ವರ ವೃತ್ತ, ಬಿಇಎಲ್‌ ರಸ್ತೆ, ಟಿವಿ ಟವರ್‌ ರಸ್ತೆಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಮೇಖೀ ವೃತ್ತದಿಂದ ಚಾಲುಕ್ಯ ಮತ್ತು ಶಿವಾನಂದ ಮಾರ್ಗದ ಕಡೆ ಬರುವಂತಹ ವಾಹನಗಳಿಗೆ ಅವಕಾಶ ಮಾಡಲಾಗಿತ್ತಾದರೂ,

Advertisement

ಕಾರ್ಯಕ್ರಮ ಮುಗಿದ ಬಳಿಕ ಸಾವಿರಾರು ವಾಹನಗಳು ಒಮ್ಮೆಲೆ ಹೊರಗಡೆ ಬಂದದ್ದರಿಂದ ಟ್ರಾಫಿಕ್‌ ಜಾಮ್‌ ಹೆಚ್ಚಾಗಿತ್ತು. ಒಂದೆರಡು ಕಡೆಗಳಲ್ಲಿ ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್‌ಗಳು ಸಿಲುಕಿದರೂ ಕೂಡಲೇ ಎಚ್ಚೆತ್ತ ಸಂಚಾರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಆ್ಯಂಬುಲೆನ್ಸ್‌ ಹೊರಡಲು ಅವಕಾಶ ಮಾಡಿಕೊಟ್ಟರು. 

ಸಂಚಾರ ಪೊಲೀಸರು ಹೈರಾಣು: ಬೆಳಗ್ಗೆ 6 ಗಂಟೆಯಿಂದಲೇ ಸಂಚಾರ ನಿಯಂತ್ರಣ ಉಸ್ತುವಾರಿ ವಹಿಸಿದ್ದ ಪೊಲೀಸರು  ರಾತ್ರಿ 12 ಗಂಟೆವರೆಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು. ಬೆಳಗ್ಗೆಯಿಂದಲೇ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರು, ಡಿಸಿಪಿಗಳು ಸ್ಥಳದಲ್ಲಿ ಸಂಚಾರ ನಿರ್ವಹಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next