Advertisement

Traffic Signal: ಬದುಕು ರೂಪಿಸಿದ ಟ್ರಾಫಿಕ್‌ ಸಿಗ್ನಲ್‌ಗ‌ಳು

03:57 PM May 25, 2024 | Team Udayavani |

ಮಾನವ ಕುಲದಲ್ಲಿ ಈ ಟ್ರಾಫಿಕ್‌ ಸಿಗ್ನಲ್‌ ಎಂಬುದು ಬದುಕಿನ ದಿಕ್ಕನ್ನೇ ಬದಲಿಸಿದ ಅನೇಕ ಉದಾಹರಣೆಗಳಿವೆ  ಹಳ್ಳಿಗರಿಗೆ ಈ ಟ್ರಾಫಿಕ್‌ ಸಿಗ್ನಲ್‌ ಬಗ್ಗೆ ಅಷ್ಟಾಗಿ ತಿಳಿದಿರಲಿಕ್ಕಿಲ್ಲ ಆದರೆ ಬೃಹತ್‌ ನಗರಗಳಲ್ಲಿರುವವರು ಈ ಟ್ರಾಫಿಕ್‌ ಸುಳಿಗೆ ಒಮ್ಮೆಯಾದರೂ ಸಿಕ್ಕಿಯೇ ಇರುತ್ತಾರೆ.

Advertisement

ಈ ಟ್ರಾಫಿಕ್‌ ಸಿಗ್ನಲ್ಲುಗಳಲ್ಲಿ ಮುಖ್ಯವಾಗಿ ಮೂರು ಬಣ್ಣಗಳಿರುತ್ತವೆ. ಹೆಚ್ಚಿನ ಜನನಿಬಿಡ ಹಾಗೂ ವಾಹನಗಳ ಸಂಖ್ಯೆ ಅಧಿಕವಿರುವ ರಸ್ತೆಗಳಲ್ಲಿ ಇಂತಹ ಟ್ರಾಫಿಕ್‌ ಲೈಟುಗಳನ್ನು ಬಳಸುತ್ತಾರೆ.

ನಗರದ ವಾಹನ ಸವಾರರು ಈ ಕೆಂಪು ಬಣ್ಣ ಅಷ್ಟಾಗಿ ಇಷ್ಟ ಪಡುವುದಿಲ್ಲ ಟ್ರಾಫಿಕ್‌ ಲೈಟ್‌ ಕೆಂಬಣ್ಣಕ್ಕೆ ತಿರುಗುವ ಮೊದಲೇ ಅಲ್ಲಿಂದ ಮುಂದೆ ಸಾಗಬೇಕೆಂದು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಕೆಲವೊಮ್ಮೆ ಈ ರೀತಿಯ ಚಾಲನೆ  ಅಪಘಾತಕ್ಕೂ ಕಾರಣವಾಗುವುದು. ಟ್ರಾಫಿಕ್ಕಿನಲ್ಲಿ ಸಿಕ್ಕವರು ಹಸಿರು ಬಣ್ಣವೆಂದು ಬರುವುದೋ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ.

ಆದರೆ ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಕೆಂಪು ಬಣ್ಣವನ್ನು ಇಷ್ಟಪಡುವ ಒಂದು ದೊಡ್ಡ ಸಮೂಹವೇ ಇದೆ ಎಂದರೆ ನೀವು ನಂಬಲೇಬೇಕು. ಈ ಕೆಂಪು ಬಣ್ಣ ಅವರ ಜೀವನವನ್ನೇ ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಮ್ಮೆ ದೂರದ ಮಹಾನಗರದಲ್ಲಿನ ಟ್ರಾಫಿಕ್‌ನಲ್ಲಿ ನಮ್ಮ ವಾಹನ ಬಂದಿಯಾಗಿತ್ತು. ಅತ್ತಿತ್ತ ಕಣ್ಣು ಹಾಯಿಸಿದಷ್ಟು ದೂರಕ್ಕೆ ವಾಹನಗಳ ದಟ್ಟನೆ ಮತ್ತು ಕರ್ಕಶ ಶಬ್ದ. ಈ ಜರ್ಜರಿತ ವಾಹನಗಳ ನಡುವೆಯೂ ಮೈ ಸುಡುವ ಬಿಸಿಲಿಗೆ ಸೆಡ್ಡು ಹೊಡೆದು ಭಾರದ ವಸ್ತುಗಳನ್ನೆಲ್ಲ ಹೆಗಲ ಮೇಲಿಟ್ಟುಕೊಂಡು ಪೆನ್ನು ಪೆನ್ಸಿಲ್ಲುಗಳನ್ನು ಮಾರುತ್ತ ಬರುತ್ತಿದ್ದ ಪುಟ್ಟ ಹುಡುಗನೊಬ್ಬ ಇಂದಿಗೂ ನನ್ನ ಮನಸ್ಸಿನಲ್ಲಿಯೇ ಉಳಿದಿದ್ದಾನೆ.

Advertisement

ಟ್ರಾಫಿಕ್‌ ಲೈಟು ಕೆಂಪು ಬಣ್ಣಕ್ಕೆ ತಿರುಗಿತ್ತಿದ್ದಂತೆ ರಸ್ತೆಯಂಚಿಲ್ಲಿ ಕುಳಿತಿದ್ದ ಆ ಮುಗ್ಧ ಮುಖದಲ್ಲಿ ಕಿರುನಗೆ ಚಿಗುರೊಡೆದಿತ್ತು. ಕೈಯಲ್ಲಿದ್ದ ವಸ್ತುಗಳನ್ನು ಮಾರಲು ಅವಕಾಶ ದೊರೆಯಿತು ಎಂಬ ಭಾವನೆ ಅವನಲ್ಲಿ ಮೂಡುವ ಕೆಲ ನಿಮಷಗಳಲ್ಲೇ ಟ್ರಾಫಿಕ್‌ ಲೈಟು ಹಸುರು ಬಣ್ಣಕ್ಕೆ ತಿರುಗಿ ಆ ಮುಗ್ಧ ನಗು ಕಮರಿತ್ತು.  ಹೀಗೆ ಟ್ರಾಫಿಕ್‌ ಸಿಗ್ನಲ್‌ ಗಳಲ್ಲಿ ವಸ್ತುಗಳನ್ನು ಮಾರುವ ಅನೇಕರು ನಮ್ಮ ದೇಶದಲ್ಲಿದ್ದಾರೆ. ಇವರಲ್ಲಿ ಮಕ್ಕಳು, ವೃದ್ಧರ ಸಂಖ್ಯೆ ಅಧಿಕವಾಗಿದೆ.

ಹಣ, ಅಧಿಕಾರದ ಮೋಹಕ್ಕೊಳಗಾದ ಯುವ ಜನತೆ ತಮ್ಮ ತಂದೆ ತಾಯಿ ಮಕ್ಕಳನ್ನು ತಮ್ಮಿಂದ ದೂರವಿಡುತ್ತಿದ್ದಾರೆ. ಪೋಷಕರನ್ನು ಕಳೆದುಕೊಂಡ ಇವರು ಪ್ರತಿನಿತ್ಯ ಚೋಟು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ಅವಲಂಬಿಸಿದ್ದಾರೆ. ಇವರೆಲ್ಲ ಹಸಿರು ಬಣ್ಣಕಿಂತ ಕೆಂಪು ಬಣ್ಣ ಎಂದು ಬರುವುದೋ ಎಂಬ ಆಶಾವಾದದಲ್ಲಿರುತ್ತಾರೆ.

- ಶಶಿಧರ ಮರಾಠಿ

ಎಂಎಂ ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next