ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಚಾಲಕರ ವಿರುದ್ಧ 1193 ಪ್ರಕರಣ ದಾಖಲಿಸಿ, 5.92 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ
ನಗರ ಸಂಚಾರ ಉತ್ತರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದು, ಮಂಗಳವಾರ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ 339 ಪ್ರಕರಣ ದಾಖಲಿಸಿ 1.65 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಸಂಚಾರ ಉತ್ತರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 11.30 ರಿಂದ ಸಂಜೆ 4 ಗಂಟೆವರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕರೆದಲ್ಲಿಗೆ ಬಾಡಿಗೆ ಬರಲು ನಿರಾಕರಣೆ, ದುಬಾರಿ ದರಕ್ಕೆ ಬೇಡಿಕೆ, ನೋ ಎಂಟ್ರಿ, ವಿರುದ್ಧ ದಿಕ್ಕಿನಲ್ಲಿ ಚಾಲನೆ, ಪಾದಾಚಾರಿ ಮಾರ್ಗದಲ್ಲಿ ಚಾಲನೆ, ದೋಷಪೂರಿತ ನೋಂದಣಿ ಫಲಕ ಅಳವಡಿಕೆ ಸೇರಿ ವಿವಿಧ ಸಂಚಾರ ನಿಯಮಗಳ ಉಲ್ಲಂ ಸಿದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.
ಪೂರ್ವ ಸಂಚಾರ ವಿಭಾಗದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ 854 ಪ್ರಕರಣ ದಾಖಲಿಸಿ, 4.27 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಮಂಗಳವಾರ ನಗರ ಪೂರ್ವ ಸಂಚಾರ ವಿಭಾಗದ ಪೊಲೀಸರು ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಕರೆದಲ್ಲಿಗೆ ಬಾಡಿಗೆ ಬಾರದಿರುವುದು, ಹೆಚ್ಚುವರಿ ದರಕ್ಕೆ ಬೇಡಿಕೆ, ದೋಷಪೂರಿತ ಸೈಲೆನ್ಸರ್ ಅಳವಡಿಕೆ, ಟ್ರಾಫಿಕ್ ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ನೋ ಎಂಟ್ರಿ, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ.