Advertisement

ಒನ್‌ವೇಲಿ ಗಾಡಿ ನುಗ್ಗಿಸಿದ್ರೆ ಕೊಲೆ ಯತ್ನ ಕೇಸ್‌!

11:05 AM Sep 07, 2019 | Sriram |

ಬೆಂಗಳೂರು: ನೀವು ಲಾರಿ, ಬಸ್‌ ಇತ್ಯಾದಿ ಭಾರೀ ವಾಹನಗಳ ಚಾಲಕರಾಗಿದ್ದೀರಾ? ನಿಮಗೆ ಒನ್‌ವೇನಲ್ಲಿ ನುಗ್ಗುವ ಅಭ್ಯಾಸವಿದೆಯೇ? ಹಾಗಿದ್ದಲ್ಲಿ ಈ ಅಭ್ಯಾಸವನ್ನು ಬಿಟ್ಟುಬಿಡಿ…

Advertisement

ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ಏಕಮುಖ ರಸ್ತೆ(ಒನ್‌ವೇ)ಯಲ್ಲಿ ನುಗ್ಗುವ ಭಾರೀ ವಾಹನಗಳ ಚಾಲಕರ ವಿರುದ್ಧ ಕೊಲೆಯತ್ನ (ಭಾರತೀಯ ದಂಡ ಸಂಹಿತೆ 307) ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದೆ. ಸ್ವತಃ ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಅವರೇ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಮೋಟಾರು ವಾಹನ ಕಾಯ್ದೆ ಅನ್ವಯ ಪರಿಷ್ಕೃತ ದಂಡದ ಮೊತ್ತ ಜಾರಿಗೊಳಿಸಿರುವ ಕುರಿತು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ನಿಯಮ ಉಲ್ಲಂಘನೆ ಆಗುತ್ತದೆ ಎಂಬ ಅರಿವಿದ್ದರೂ ವಾಹನ ಚಾಲನೆ ಮಾಡುವುದಲ್ಲದೆ, ವೇಗವಾಗಿ ಚಾಲನೆ ಮಾಡಿ ಅಪಘಾತ ಕೂಡ ಎಸಗುತ್ತಾರೆ. ಹೀಗಾಗಿ ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ನಿಯಮ ಉಲ್ಲಂಘನೆ ಮಾಡಿದರೆ, ಭಾರತೀಯ ದಂಡಸಂಹಿತೆ 307 ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗುವುದು ಎಂದರು. ಇತ್ತೀಚೆಗೆ ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎಎಸ್‌ಐ ಒಬ್ಬರ ಮೇಲೆ ಹಾಲಿನ ವಾಹನ ಹರಿದು ಮೃತಪಟ್ಟ ಪ್ರಕರಣವನ್ನು ಪೊಲೀಸ್‌ ಆಯುಕ್ತರು ಉಲ್ಲೇಖೀಸಿದರು.

ಜಾಮೀನು ನಿರಾಕರಣೆಗೆ ಮನವಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಾರ್ವಜನಿಕರ ಸಾವಿಗೆ ಕಾರಣವಾಗುವ ಚಾಲಕನ ವಿರುದ್ಧ ಸದ್ಯ ಐಪಿಸಿ 304 ಅಡಿ ಕೇಸು ದಾಖಲಾಗುತ್ತದೆ. ಆದರೆ ಇವರಿಗೆ ಬೇಗನೇ ಜಾಮೀನು ಸಿಗುತ್ತದೆ. ಮುಂದೆ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಆಕ್ಷೇಪಣೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರರಾವ್‌ ತಿಳಿಸಿದರು.

Advertisement

ಇತರೆಡೆ ದಂಡದ ವಿವರ
ಬಾಗಲಕೋಟೆಯಲ್ಲಿ ಮದ್ಯ ಸೇವನೆಯ ನಾಲ್ಕು ಪ್ರಕರಣದಲ್ಲಿ 41500 ರೂ., ಕಲಬುರಗಿಯಲ್ಲಿ 4 ಲಕ್ಷ, ದಾವಣಗೆರೆಯಲ್ಲಿ ಒಬ್ಬರಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ 10 ಸಾವಿರ, ರಾಯಚೂರಿನಲ್ಲಿ 65,900 ರೂ., ವಿಜಯಪುರದಲ್ಲಿ 30 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next