Advertisement

ಸಂಚಾರ ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಮಹಾಬಲ ಶೆಟ್ಟಿ

12:04 AM May 06, 2019 | Sriram |

ನಗರ : ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ನಡೆಸುವವರ ವಿರುದ್ಧ ಸಂಚಾರ ಪೊಲೀಸ್‌ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತದೆ. ತಮ್ಮ ಹಾಗೂ ಪರರ ಹಿತಕ್ಕಾಗಿ ಸಂಚಾರ ನಿಯಮಗಳನ್ನು ಪಾಲಿಸುವವರನ್ನು ಇಲಾಖೆ ಗೌರವದಿಂದ ಕಾಣುತ್ತದೆ ಎಂದು ಪುತ್ತೂರು ಸಂಚಾರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮಹಾಬಲ ಶೆಟ್ಟಿ ತಿಳಿಸಿದ್ದಾರೆ.

Advertisement

ಬನ್ನೂರು, ಪಡೀಲು, ಹಾರಾಡಿ, ಕೆಮ್ಮಾಯಿ ಪರಿಸರಗಳಲ್ಲಿ ನಿಯಮಗಳನ್ನು ನಿರ್ಲಕ್ಷಿಸಿ ಸಂಚಾರ ನಡೆಸಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ರವಿವಾರ ಸಂಜೆ ಆ ಪರಿಸರದ ವಾಹನಗಳ ಮಾಲಕರು, ಆಟೋ ರಿಕ್ಷಾ ಚಾಲಕರು ಹಾಗೂ ಪ್ರಮುಖರ ಸಭೆ ನಡೆಸಿ ಅವರು ಮಾತನಾಡಿದರು.

ಸಂಚಾರ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಯಾರಿಗೂ ವಿನಾಯಿತಿ ಇಲ್ಲ. ನಮ್ಮ ಕುಟುಂಬದವರಾದರೂ ನಾವು ಬಿಡುವುದಿಲ್ಲ. ಈ ಪರಿಸರದಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಕಂಡು ಬಂದಿದೆ. ಈ ಕುರಿತು ಶನಿವಾರ ಕಾರ್ಯಾಚರಣೆಯನ್ನೂ ನಡೆಸಿದ್ದೇವೆ. ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸುವ ಸುಮಾರು 50 ಪ್ರಕರಣಗಳು ಒಂದೇ ದಿನ ದಾಖಲಾಗಿವೆ ಎಂದರು.

ಹೆಲ್ಮೆಟ್‌ ಕಡ್ಡಾಯ ಧರಿಸಿ
ಹೆಲ್ಮೆಟ್‌ ಧರಿಸಿದೆ ಸಂಚರಿಸಿದ ಸಂದರ್ಭ ಸಾವನ್ನಪ್ಪಿದ ಪ್ರಕರಣಗಳು ತುಂಬಾ ಇವೆ. ಆ ಕಾರಣಕ್ಕಾಗಿಯಾದರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನೂ ನಿಲ್ಲಿಸಬೇಕು. ರಿಕ್ಷಾ ಚಾಲಕರು ಜನರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿ ಹೊಂದಿರುವುದರಿಂದ ಆ ಕುರಿತೂ ಅಲೋಚಿಸಬೇಕು ಎಂದವರು ಸಲಹೆ ನೀಡಿದರು.

ಓಡಬೇಡಿ
ಸಂಚಾರದ ಸಂದರ್ಭ ಪೊಲೀಸರು ತಪಾಸಣೆ ನಡೆಸುವುದನ್ನು ಕಂಡು ಯಾರೂ ಓಡಬೇಡಿ. ತಪ್ಪಿದ್ದರೆ ನಿಗದಿತ ದಂಡ ಕಟ್ಟಿ. ಕೆಲವು ಬಾರಿ ನಮಗೂ ವಾಹನಗಳನ್ನು ನಿಲ್ಲಿಸಲು ಭಯವಾಗುತ್ತದೆ. ತಪ್ಪಿಸಿಕೊಂಡು ಜೋರಾಗಿ ಹೋಗುವುದರಿಂದಲೂ ಅಪಘಾತ ಸಂಭವಿಸುತ್ತದೆ. ಅಪಘಾತ ವಲಯಗಳನ್ನು ಗುರುತಿಸುವ ಕೆಲಸ ಇಲಾಖೆಯಿಂದ ಆಗುತ್ತಿದ್ದು, ಬಳಿಕ ಪೂರಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Advertisement

ಸಂಚಾರ ಪೊಲೀಸ್‌ ಠಾಣೆಯ ಎಎಸ್‌ಐ ಸುರೇಶ್‌ ಶರ್ಮ ಉಪಸ್ಥಿತರಿದ್ದರು. ಪ್ರಮುಖರಾದ ಮನೋಹರ್‌ ರೈ, ಅಶ್ರಫ್‌ ಕಲ್ಲೇಗ, ರೋಶನ್‌ ರೈ, ಜೋಕಿಂ ಡಿಸೋಜ, ವಿಲ್ಮಾ ಗೋನ್ಸಾಲ್ವಿಸ್‌, ಹಮೀದ್‌ ಮತ್ತಿತರರು ಸಲಹೆ, ಸೂಚನೆಗಳನ್ನು ನೀಡಿದರು.

“ಉದಯವಾಣಿ’
ವರದಿಗೆ ಸ್ಪಂದನೆ
ಬನ್ನೂರು, ಪಡೀಲು, ಹಾರಾಡಿ, ಕೆಮ್ಮಾಯಿ ಪರಿಸರಗಳಲ್ಲಿ ನಿರ್ಲಕ್ಷé ಮತ್ತು ನಿಯಮ ಉಲ್ಲಂಘನೆ ಮಾಡಿ ವಾಹನಗಳನ್ನು ಚಲಾಯಿಸುತ್ತಿರುವ ಮತ್ತು ಇದರಿಂದ ಸಾರ್ವಜನಿಕ ಭೀತಿ ಉಂಟಾಗಿರುವ ಕುರಿತು “ಉದಯವಾಣಿ’ ಸುದಿನದಲ್ಲಿ ಮೇ 4ರಂದು ವಿಸ್ತೃತ ವರದಿ ಮಾಡಲಾಗಿತ್ತು. ಈ ಕುರಿತು ಸಾರ್ವಜನಿಕ ದೂರಿನ ಮೇರೆಗೆ ಆರ್‌ಟಿಒ ಅಧಿಕಾರಿಗಳು ಕ್ರಮಕ್ಕೆ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಗಮನಹರಿಸಬೇಕು ಎಂದು ಆಗ್ರಹಿಸ ಲಾಗಿತ್ತು. ತತ್‌ಕ್ಷಣ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ರವಿವಾರ ಈ ಭಾಗದ ಸಾರ್ವಜನಿಕರ ಸಭೆ ನಡೆಸಿದ್ದಾರೆ. ಪತ್ರಿಕೆಯ ವರದಿಗೆ,ಪೊಲೀಸ್‌ ಇಲಾಖೆಯ ಸ್ಪಂದನೆಯ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪೊಲೀಸರ ಸಲಹೆ
– ವಾಹನಗಳಲ್ಲಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಿ. ಇದು ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ಅಪಘಾತದ ಸಂದರ್ಭದಲ್ಲಿ ನೆರವಾಗುತ್ತದೆ.
– ರೈಲ್ವೇ ಕ್ರಾಸಿಂಗ್‌ನಲ್ಲಿ ಅವಸರ ಮಾಡದೆ ನಿಯಮ ಪಾಲಿಸಿ.
– ಪುತ್ತೂರು ನಗರದಲ್ಲಿ ಯಾರೂ ಓವರ್‌ಟೇಕ್‌ಗೆ ಪ್ರಯತ್ನಿಸಬಾರದು.
– ವಾಹನಗಳಿಗೆ ಹೆಚ್ಚುವರಿ ಲೈಟುಗಳನ್ನು ಅಳವಡಿಸಿದವರಿಗೆ ದಂಡ ವಿಧಿಸಲಾಗುತ್ತದೆ.
– ಡಾಮರು ರಸ್ತೆ ಬಿಟ್ಟು ಪಾರ್ಕಿಂಗ್‌ ಮಾಡಿ.
– ಹೆಡ್‌ಲೈಟ್‌ ಅನ್ನು ಡಿಮ್‌-ಡಿಪ್‌ ಮಾಡುವ ಪದ್ಧತಿ ರೂಢಿಸಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next