ಕಾರವಾರ: ಬರುವ ವರ್ಷದ ಸೆಪ್ಟೆಂಬರ್‌ಗೆ ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ ನಗರದ ಬಳಿಯ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾ.ಹೆ. ಅಧಿಕಾರಿಗಳು ಹಾಗೂ ಐಡಲ್ ರೋಡ್ ಬಿಲ್ಡರ್ ಸಂಸ್ಥೆ ಜಿಲ್ಲಾಡಳಿತಕ್ಕೆ ಭರವಸೆ ನೀಡಿವೆ.
ಜಿಲ್ಲಾಧಿಕಾರಿ ಕಚೇರಿ ಬಂಗ್ಲೆಯ ಗುಡ್ಡದ ಕೆಳಭಾಗದಲ್ಲಿ 850 ಮೀಟರ್ ಉದ್ದದ ಎರಡು ಪ್ರತ್ಯೇಕ ಸುರಂಗ ಮಾರ್ಗಗಳು ಹಾದು ಹೋಗಿವೆ. ಈ ಸುರಂಗ ಮಾರ್ಗದ ಒಳಗೆ ಪ್ಲಾಸ್ಟರಿಂಗ್, ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿವೆ.
ಕಾರವಾರದಿಂದ ಹೊರಡುವ ಪ್ರವೇಶ ದ್ವಾರದ ಬಳಿ ಅಂತಿಮ ಕೆಲಸಗಳು ನಡೆದಿವೆ. ಅಲ್ಲದೇ ಮತ್ತೂಂದು ತುದಿ ಬಿಣಗಾದಿಂದ ಸುರಂಗ ಮಾರ್ಗದ ಕೆಲಸ ಮುಗಿಸುತ್ತಾ ಬರಲಾಗುತ್ತಿದೆ. ಈ ಸುರಂಗಗಳು ಹೆದ್ದಾರಿಯ ಪ್ರಮುಖ ಆಕರ್ಷಣೆಯಾಗಿಲಿವೆ. ಮಾಜಾಳಿಯಿಂದ ರಾ.ಹೆ. ಚತುಷ್ಪಥ ಅಗಲೀಕರಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಕಾರವಾರ ನಗರದ ಬಳಿಯ ಫ್ಲೈ ಓವರ್ ಸಹ 2020 ಸೆಪ್ಟೆಂಬರ್‌ಗೆ ಮುಗಿಸಬೇಕಿದೆ. ಬಾಳೇಗುಳಿ ಬಳಿ ಶುಲ್ಕ ವಸೂಲಿ ಕೇಂದ್ರದ ತಯಾರಿ ಸಹ ಮುಗಿಯುತ್ತಾ ಬಂದಿದೆ. ಹದಿನೈದು ಕಡೆ ಜನ ಅಂಡರ್ ಪಾಸ್‌ಗೆ ಒತ್ತಾಯಿಸಿದ್ದು, ಅವಶ್ಯವಿದ್ದಲ್ಲಿ ಅಂಡರ್ ಪಾಸ್ ಮಾಡಿ. ಜನರಿಗೆ ಮಣಿಯಬೇಡಿ. ಎಲ್ಲಾ ಕಡೆ ಬೇಡಿಕೆಗೆ ಮಣಿದರೆ ಜನರು ಕೆಲಸ ಮಾಡಲು ಬಿಡಲ್ಲ. ವೈಜ್ಞಾನಿಕವಾಗಿ ಅವಶ್ಯವಿದ್ದ ಕಡೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಹೇಳಿದ್ದಾರೆ. ಈ ಸೂಚನೆ ಆ.31 ರಂದು ಬಂದಿತ್ತು. ಜನ ಪರಿಹಾರ ಪಡೆದು ಭೂಮಿ ಬಿಟ್ಟುಕೊಡದ ಕಡೆ ಪೊಲೀಸ್ ಬಲ ಬಳಸಿ ಎಂಬ ಸೂಚನೆ ಸಹ ಕಾಮಗಾರಿ ಸಂಸ್ಥೆಗೆ ನೀಡಲಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಾ.ಹೆ. ಕೆಲಸ ಚುರುಕುಗೊಳ್ಳಲಿದೆ.
ಕೇಂದ್ರ ಸರ್ಕಾರ ಸಹ ಈ ಯೋಜನೆ ಬೇಗ ಮುಗಿಯಲಿ ಎಂದು ಉತ್ಸುಕವಾಗಿದೆ. ಪರಿಹಾರ ಹಣ ನ್ಯಾಯಾಲಯದಲ್ಲಿ ಡೆಪಾಜಿಟ್ ಮಾಡಲು ಸೂಚಿಸಲಾಗಿದೆ. ಹಾಗಾಗಿ ರಾ.ಹೆ. 2020ಕ್ಕೆ ಒಂದು ಹದಕ್ಕೆ ಬರುವುದು ಖಚಿತವಾದಂತಾಗಿದೆ.