Advertisement

ನಾಲೆ ಏರಿ ರಸ್ತೆ ಒತ್ತುವರಿ: ಸಂಚಾರಕ್ಕೆ ಕಿರಿಕಿರಿ

01:33 PM Dec 07, 2019 | Suhan S |

ಶ್ರೀರಂಗಪಟ್ಟಣ: ಕೂಡಲಕುಪ್ಪೆ ಹಾಗೂ ಕಿರಂಗೂರು ಗ್ರಾಮದ ಎಲ್ಲೆಗೆ ಸೇರಿದ ಎರೆಮಣೆ ನಾಲೆಯ ಏರಿ ಮೇಲಿರುವ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಸುತ್ತಮುತ್ತಲ ಜಮೀನುಗಳಿಗೆ ಹೋಗಲು ರೈತರಿಗೆ ತುಂಬಾ ತೊಂದರೆಯಾಗಿದೆ ಆರೋಪಿಸಿ ರೈತರೊಬ್ಬರು ತಹಶೀಲ್ದಾರ್‌ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಿರಂಗೂರು ಬಳಿ ನಡೆದಿದೆ.

Advertisement

ಕಿರಂಗೂರು ಗ್ರಾಮದ ಬಳಿ ಎರೆಮಣೆ ನಾಲೆ ಏರಿ ಮೇಲಿನ ರಸ್ತೆ ಒತ್ತುವರಿಯಾಗಿತ್ತು. ರೈತರ ಮನವಿ ಮೇರೆಗೆ ಸರ್ವೆ ಇಲಾಖೆಯವರು ರಸ್ತೆ ಸರ್ವೆ ಮಾಡಿ ಕಲ್ಲು ನೆಟ್ಟಿದ್ದರು. ನಾಲೆ ಬಳಿಯ ರಸ್ತೆ ಸ್ಥಳವನ್ನು ಪಕ್ಕದ ಜಮೀನಿನ ರೈತ ಶಂಕರ್‌ ಅತಿಕ್ರಮಿಸಿಕೊಂಡು ಜನ, ಜಾನುವಾರು, ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಬಗ್ಗೆ ಈ ಹಿಂದಿನ ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ.

ಕ್ರಮ ಕೈಗೊಳ್ಳದ ಅಧಿಕಾರಿಗಳು: ತಹಶೀಲ್ದಾರರುಹಾಗೂ ಪೊಲೀಸರು ಸ್ಥಳ ಪರಿಶೀಲಿಸಿ ಹೋದವರು ಮತ್ತೆ ಹಿಂದಿರುಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರೂ ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ಎಲ್ಲಾ ಅಧಿಕಾರಿಗಳು, ಪೊಲೀಸರು ರಸ್ತೆ ಒತ್ತುವರಿ ಮಾಡಿಕೊಂಡಿರುವ ರೈತನ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಸುತ್ತಮುತ್ತಲ ಜಮೀನುಗಳ ರೈತರು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ತಹಶೀಲ್ದಾರ್‌ ರೂಪಾ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು.

ರಸ್ತೆ ಅಗಲೀಕರಣ ಮಾಡಿಕೊಡಿ: ಕಿರಂಗೂರು ಗ್ರಾಮದ ಸರ್ವೆ ನಂ.14, 15,16, 17 ಹಾಗೂ 2018-19ರ ಸುಮಾರು 52 ಮಂದಿ ರೈತರ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಶಂಕರ್‌ ನಾಲೆ ಏರಿ ಒತ್ತುವರಿ ಮಾಡಿಕೊಂಡು, ಇದು ರಸ್ತೆಗೆ ಸೇರಿದ್ದಲ್ಲ. ನಮ್ಮದೆ ಜಮೀನು ಎಂದು ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ. ರಸ್ತೆ ಒತ್ತುವರಿ ತೆರವುಗೊಳಿಸಿ ನಾವು ನಮ್ಮ ಜಮೀನುಗಳಿಗೆ ಓಡಾಡಲು ರಸ್ತೆ ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ತಹಶೀಲ್ದಾರ್‌ ರೂಪಾ ಅವರಿಗೆ ಅಕ್ಕಪಕ್ಕದ ಜಮೀನುಗಳ ರೈತರು ಮನವಿ ಮಾಡಿದರು.

ಸ್ಥಳ ಪರಿಶೀಲನೆ: ತಹಶೀಲ್ದಾರ್‌ ರೂಪಾ ಸ್ಥಳ ಪರಿಶೀಲನೆ ನಡೆಸಿ, ಸ್ಥಳದಲ್ಲಿದ್ದ ನೀರಾವರಿ ಎಂಜಿನಿಯರ್‌, ಕಂದಾಯ ಅಧಿಕಾರಿ, ಗ್ರಾಮಲೆಕ್ಕಿಗ ಹಾಗೂ ಸರ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೂಡಲೇ ನಿಮ್ಮೆಲ್ಲ ಸಮಸ್ಯೆಗಳು ಬಗೆಹರಿಸುವುದಾಗಿ ರೈತರಿಗೆ ಭರವಸೆ ನೀಡಿದರು.

Advertisement

ಪ್ರಕರಣ ದಾಖಲಿಸಿ: ನಾಲೆ ಏರಿ ಒತ್ತುವರಿ ಮಾಡಿಕೊಂಡಿದ್ದಲ್ಲದೆ ನಾಲೆಯಲ್ಲಿ ಪ್ರತಿ ದಿನ ಅಕ್ರಮ ಮರಳು ತೆಗೆದು ಮಾರಾಟ ಮಾಡುತ್ತಿರುವ ಬಗ್ಗೆ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಮರಳು ಗುಡ್ಡೆ ಪರಿಶೀಲಿಸಿ ಕೂಡಲೇ ಕ್ರಮ ತೆಗೆದುಕೊಂಡು ದೂರು ದಾಖಲಿಸಬೇಕೆಂದು ನೀರಾವರಿ ಎಂಜಿನಿಯರ್‌ ಅವರಿಗೆ ತಹಶೀಲ್ದಾರ್‌ ರೂಪಾ ತಾಕೀತು ಮಾಡಿದರು.

ಈ ವೇಳೆ ಕೂಡಲಕುಪ್ಪೆ ಗೋಪಾಲ್‌, ಜಯರಾಮೇಗೌಡ, ಕೆ.ಆರ್‌.ತಮ್ಮಣ್ಣ, ಶಂಕರ್‌ ನಾರಾಯಣ್‌, ಅಭಿಲಾಷ್‌, ಕೆ.ಆರ್‌.ಶಶಿಧರ್‌, ಜಗದೀಶ್‌, ಚಿಕ್ಕಣ್ಣ ಮತ್ತಿತರ ರೈತರು ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next