Advertisement

ಪಡೀಲ್‌ ರೈಲ್ವೆ ಕೆಳಸೇತುವೆಯಲ್ಲಿ ಸಂಚಾರ ಸರಾಗ

12:28 PM Nov 19, 2017 | Team Udayavani |

ಮಹಾನಗರ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲಿನಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣಗೊಂಡಿರುವ ರೈಲ್ವೇ ಕೆಳಸೇತುವೆ ನ. 15ರಂದು ಉದ್ಘಾಟನೆಗೊಂಡಿದ್ದು, ವಾಹನಗಳು ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾತಂಕವಾಗಿ ಸಂಚರಿಸುತ್ತಿವೆ.

Advertisement

ಅಂಡರ್‌ಪಾಸ್‌ ಮೂಲಕ ಎಲ್ಲ ವಾಹನಗಳು ಸಾಗುತ್ತಿದ್ದು, ಕೆಳಸೇತುವೆಯ ಎತ್ತರದ ಕುರಿತು ಇದ್ದ ಆತಂಕಗಳೂ ಪ್ರಸ್ತುತ ದೂರವಾಗಿದೆ. ಆದರೆ ಎತ್ತರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಎನ್‌ಎಚ್‌ಎಐ ನಿರ್ಧರಿಸಿದೆ.

ಇಲ್ಲಿನ ಹಳೆ ಕೆಳಸೇತುವೆಯ ಬಳಿ ಹೆದ್ದಾರಿ ಹದಗೆಟ್ಟ ಪರಿಣಾಮ ಕಳೆದ ಮಳೆಗಾಲದಲ್ಲಿ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸಿದ್ದರು. ವಾಹನಗಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿಯೂ ನಿರ್ಮಾಣವಾಗಿತ್ತು. ಈ ರಸ್ತೆಯ ಮೂಲಕ ಸಾಗುವ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಆದರೆ ಹೊಸ ಸೇತುವೆಯ ಭಾಗದಲ್ಲಿ ರಸ್ತೆ ಸುಸಜ್ಜಿತವಾಗಿರುವುದರಿಂದ ವಾಹನಗಳು ವೇಗದಿಂದ ಸಾಗುತ್ತಿವೆ.

ಪಡೀಲಿನಲ್ಲಿ 16.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 62 ಮೀ. ಉದ್ದದ ನೂತನ ಕೆಳಸೇತುವೆಯನ್ನು ನ. 15ರಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಿದ್ದರು. ಈ ಸೇತುವೆಯ ಎತ್ತರದ ಕುರಿತು ಸಾರ್ವಜನಿಕರಿಗೆ ಸಂಶಯಗಳು ವ್ಯಕ್ತವಾಗಿತ್ತು. ದೂರದಲ್ಲಿ ಸೇತುವೆಯು ತಗ್ಗಿನಂತೆ ಕಂಡು ಬಂದರೂ ಹತ್ತಿರದಿಂದ ನೋಡುವಾಗ ಸಾಕಷ್ಟು ಎತ್ತರವಾಗಿ ಕಾಣುತ್ತಿತ್ತು. ವಾಹನಗಳು ಸರಾಗವಾಗಿ ಸಾಗುತ್ತಿರುವುದರಿಂದ ಎಲ್ಲ ಆತಂಕಗಳು ದೂರವಾಗಿದೆ.

ಐಆರ್‌ಸಿಯಂತೆ ನಿರ್ಮಾಣ
ಪಡೀಲ್‌ ನೂತನ ರೈಲ್ವೇ ಕೆಳಸೇತುವೆಯನ್ನು ಇಂಡಿಯನ್‌ ರೋಡ್ಸ್‌ ಕಾಂಗ್ರೆಸ್‌ (ಐಆರ್‌ಸಿ) ಗುಣಮಟ್ಟದಲ್ಲೇ ನಿರ್ಮಾಣ ಮಾಡಲಾಗಿದೆ. ನಿಯಮದಂತೆ ಯಾವುದೇ ಹೆದ್ದಾರಿಗೆ ಬಾಕ್ಸ್‌ ನಿರ್ಮಾಣ ಮಾಡಬೇಕಾದರೆ 5.50 ಮೀ. ಎತ್ತರ ಇರಬೇಕು. ಪಡೀಲ್‌ ನೂತನ ರೈಲ್ವೇ ಕೆಳಸೇತುವೆಯೂ ಅಷ್ಟೇ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಇದು 2 ಲೇನ್‌ ಸೇತುವೆಯಾಗಿದ್ದು, 12.50 ಮೀ. ಅಗಲವನ್ನೂ ಹೊಂದಿದೆ. ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು 4.8 ಮೀ. ಎತ್ತರವನ್ನು ಹೊಂದಿರಬಹುದು.
ಅದಕ್ಕಿಂತ ಹೆಚ್ಚಿನ ಎತ್ತರವನ್ನು ಹೊಂದಿದ್ದರೆ ಅದು ನಿಯಮಬಾಹಿರ ಆಗುತ್ತದೆ. ಹೀಗಾಗಿ ಪಡೀಲ್‌ ಅಂಡರ್‌ಪಾಸ್‌ನಲ್ಲಿ ಯಾವುದೇ ವಾಹನಗಳು ನಿರಾತಂಕವಾಗಿ ಸಾಗಬಹುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಾನೂನು ಕ್ರಮಕ್ಕೆ ನಿರ್ಧಾರ
ಸೇತುವೆಯ ಎತ್ತರ ಕಡಿಮೆಯಾಗಿದೆ, ಕಂಟೈನರ್‌ನಂತಹ ಬೃಹತ್‌ ಗಾತ್ರದ ವಾಹನಗಳು ಸಾಗುವುದಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ, ವೀಡಿಯೋಗಳನ್ನು ರವಾನೆ ಮಾಡುತ್ತಿದ್ದು, ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಎನ್‌ಎಚ್‌ಎಐ ನಿರ್ಧರಿಸಿದೆ.

ಇಂತಹ ತಪ್ಪು ಸಂದೇಶಗಳಿಂದ ಸಾರ್ವಜನಿಕರು ಆತಂಕಿತರಾಗಿ ಪ್ರಾಧಿಕಾರದ ಕಚೇರಿಗೆ ದೂರವಾಗಿ ಕರೆ ಮಾಡಿ ಕೇಳುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳ ವಿಚಾರವನ್ನೇ ನಂಬುವ ಸಾಧ್ಯತೆಯೂ ಇರುತ್ತದೆ. ಜತೆಗೆ ಇದರ ಕುರಿತು ತಪ್ಪು ಸಂದೇಶ ರವಾನೆ ಮಾಡಿದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಹೆದ್ದಾರಿ 1.8 ಮೀ. ಏರಿಕೆ
ಪ್ರಸ್ತುತ ಹೊಸ ಸೇತುವೆಯಲ್ಲಿ ಮಂಗಳೂರಿನಿಂದ ಬಿ.ಸಿ. ರೋಡ್‌ ಭಾಗಕ್ಕೆ ತೆರಳುವ ವಾಹನಗಳು ಮಾತ್ರ ಸಾಗುತ್ತಿದ್ದು, ಹಳೆ ಸೇತುವೆಯ ದುರಸ್ತಿ ಕಾರ್ಯವನ್ನು ರೈಲ್ವೇ ಇಲಾಖೆ ಮಾಡಲಿದೆ. ಈ ಕುರಿತು ಎರಡೂ ಇಲಾಖೆಗಳಿಗೂ ಒಪ್ಪಂದ ನಡೆದಿದ್ದು, ಬೆಂಗಳೂರು ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿಯಾದ ಬಳಿಕ ಎನ್‌ಎಚ್‌ಎಐ ಮಂಗಳೂರು ಕಚೇರಿ ಪರವಾನಿಗೆ ನೀಡಲಿದೆ. ಹೆದ್ದಾರಿ ದುರಸ್ತಿ ಕಾರ್ಯವನ್ನು ಎನ್‌ಎಚ್‌ಎಐ ಮಾಡಲಿದೆ. ಈ ಭಾಗದಲ್ಲಿ ಹೆದ್ದಾರಿ 1.8 ಮೀ. ಏರಿಕೆಯಾಗಲಿದೆ. ಈ ಕೆಳಸೇತುವೆಯೂ 5.50 ಮೀ. ಎತ್ತರ ಹಾಗೂ 12.50 ಮೀ. ಅಗಲ ಹೊಂದಿರುತ್ತದೆ.

ಸೇತುವೆ ಕುರಿತು ಆತಂಕ ಬೇಡ
ನೂತನವಾಗಿ ನಿರ್ಮಾಣಗೊಂಡಿರುವ ಪಡೀಲ್‌ ಅಂಡರ್‌ಪಾಸ್‌ನ ಕುರಿತು ಯಾರೂ ಆತಂಕ ಪಡಬೇಕಿಲ್ಲ. ಅದರಲ್ಲಿ ಎಲ್ಲ ವಾಹನಗಳು ಸರಾಗವಾಗಿ ಸಾಗುತ್ತವೆ. ಪ್ರಸ್ತುತ ಅಲ್ಲಿ ಟ್ರಾಫಿಕ್‌ ತೊಂದರೆಯೂ ನಿವಾರಣೆಯಾಗಿದೆ. ಸೇತುವೆಯ ಕುರಿತು ಕೆಲವರು ತಪ್ಪು ಸಂದೇಶ ರವಾನೆ ಮಾಡುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ನಿರ್ಧರಿಸಿದ್ದೇವೆ.
–  ವಿಜಯಕುಮಾರ್‌ ಸ್ಯಾಮ್‌ಸನ್‌,
    ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು.

    ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next