ಮಡಿಕೇರಿ: ವಾಲ್ನೂರು ಗ್ರಾಮದ ಅಮ್ಮಂಗಾಲದ ಚೇನಂಡ ಪೊನ್ನಪ್ಪ ಅವರ ಟ್ರಸ್ಟ್ ಲ್ಯಾಂಡ್ ಎಸ್ಟೇಟ್‌ಗೆ ಹುಲಿಯೊಂದು ಆಗಾಗ ಬಂದು ಹಸು, ಎಮ್ಮೆ, ಕರು ಇತ್ಯಾದಿ ಗಳನ್ನು ಬೇಟೆಯಾಡಿ ತೆರಳುತ್ತಿದ್ದು, ಜೂ. 14ರಂದು ತೋಟಕ್ಕೆ ನುಸುಳಿ ರುವ ಸಾಕ್ಷಿ ಲಭಿಸಿದೆ.
ಹುಲಿ ಆಗಾಗ ಬಂದುಹೋದರೂ ಅರಣ್ಯ ಇಲಾಖೆ ಸಿಬಂದಿಯಿಂದ ಇಲ್ಲಿಯವರೆಗೆ ಅದನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಮನುಷ್ಯರಿಗೆ ಈ ವರೆಗೆ ಯಾವುದೇ ಅಪಾಯ ಸಂಭವಿಸದಿದ್ದರೂ ಪೊನ್ನಪ್ಪ ಅವರ ಪುತ್ರ ಅಯ್ಯಪ್ಪ ಅವರು ಹುಲಿಯ ಚಲನವಲನವನ್ನು ಪತ್ತೆಹಚ್ಚಲು ತೋಟದ ನಡುವಿನಲ್ಲೇ ಸಿಸಿ ಕೆಮರಾ ಅಳವಡಿಸಿದ್ದರು. ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ಹುಲಿ ಜೂ. 14ರಂದು ತೋಟದಲ್ಲಿ ಸಂಚರಿಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಬೃಹತ್ ಗಾತ್ರದ ಹುಲಿ ಆ ದಾರಿಯಿಂದ ಹೋಗಿ ಸ್ವಲ್ಪ ಹೊತ್ತಿನಲ್ಲೇ ಒಂಟಿ ಸಲಗವೊಂದು ಆ ದಾರಿಯಾಗಿ ಓಡಾಡಿರುವ ದೃಶ್ಯ ಕಂಡು ಬಂದಿದೆ. ಅ ವೀಡಿಯೋ ಈಗ ವೈರಲ್ ಆಗಿದೆ.
ಹುಲಿಯ ಓಡಾಟದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಎಸ್ಟೇಟ್‌ಗಳಲ್ಲಿ ಆನೆ ಹಿಂಡು ಕಳೆದ ಒಂದು ವಾರದಿಂದ ಅಭ್ಯತ್‌ಮಂಗಲ ಮತ್ತು ಅತ್ತಿಮಂಗಲ ಭಾಗ ದಲ್ಲಿ ನೆಲೆ ನಿಂತಿರುವ 20ಕ್ಕೂ ಅಧಿಕ ಕಾಡಾನೆಗಳು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ.
ಭಾರೀ ಮಳೆಯ ನಡುವೆಯೂ ಅರಣ್ಯ ಇಲಾಖೆ ಸಿಬಂದಿ ಕಳೆದೆರಡು ದಿನಗಳಿಂದ ಆನೆಗಳನ್ನು ಕಾಡಿಗಟ್ಟುವ ಯತ್ನದಲ್ಲಿ ತೊಡಗಿದ್ದಾರೆ. ಬುಧವಾರದ ಕಾರ್ಯಾಚರಣೆ ವಿಫಲವಾದರೂ ಗುರುವಾರ 8 ಆನೆಗಳನ್ನು ಕಾಡಿನತ್ತ ಅಟ್ಟುವಲ್ಲಿ ಸಿಬಂದಿ ಯಶಸ್ವಿಯಾಗಿದ್ದಾರೆ. ಇನ್ನೂ ಹಲವು ಆನೆಗಳು ತೋಟಗಳಲ್ಲೇ ಓಡಾಡುತ್ತಿವೆ.
ಅರಣ್ಯ ಸಿಬಂದಿ ಚರಣ್, ರವಿ, ಜಗದೀಶ್, ಅಪ್ಪಸ್ವಾಮಿ, ತಿಲಕ, ಆಸೀಸ್, ಕಿರಣ್, ವಿಜಯ ಹಾಗೂ ಚಾಲಕ ವಾಸು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.