Advertisement

ಮಡಹಳ್ಳಿ: ಅಧಿಕ ಭಾರಹೊತ್ತ ಟಿಪ್ಪರ್‌ಗಳ ಸಂಚಾರ

05:02 PM Dec 25, 2022 | Team Udayavani |

ಗುಂಡ್ಲುಪೇಟೆ: ಪಟ್ಟಣದ ಮಡಹಳ್ಳಿ ಮಾರ್ಗದ ಪೊಲೀಸ್‌ ಠಾಣೆ ಮುಂಭಾಗದ ರಸ್ತೆಯಲ್ಲಿ ಅಧಿಕ ಭಾರ ಹೊತ್ತ ಟಿಪ್ಪರ್‌ ಲಾರಿಗಳು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿದೆ. ಇದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಹೀಗಿದ್ದರೂ ಸಹ ಪೊಲೀಸರು ಕ್ರಮಕ್ಕೆ ಮುಂದಾಗದೆ ಜಾಣಮೌನ ವಹಿಸಿದ್ದಾರೆ.

Advertisement

ಮಡಹಳ್ಳಿ ರಸ್ತೆಯೂ ಉತ್ತಂಗೆರೆಹುಂಡಿ, ಹುಲಸ ಗುಂದಿ, ಮೂಖಹಳ್ಳಿ, ಬರಗಿ, ದೇಶಿಪುರ ಸೇರಿದಂತೆ ಇನ್ನಿತರ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿರುವ ಹಿನ್ನೆಲೆ ಪ್ರತಿನಿತ್ಯ ಈ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಜೊತೆಗೆ ಕ್ರಷರ್‌ ಗಳು ಇರುವ ಕಾರಣ ಟಿಪ್ಪರ್‌ ಲಾರಿ ಅಧಿಕ ಭಾರಹೊತ್ತು ಜಲ್ಲಿಕಲ್ಲಿ ತುಂಬಿಕೊಂಡು ತೆರಳುತ್ತಿವೆ.

ಇನ್ನೂ ಮಧ್ಯೆ ಕೆಂಪು ಮಣ್ಣು ಲಾರಿಗಳ ಹಾವಳಿಯೂ ಕೂಡ ಹೆಚ್ಚಿದ್ದು, ನಿಗದಿಗಿಂತ ಅಧಿಕ ಭಾರ ತುಂಬಿಕೊಂಡು ಬರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಅನೇಕ ಕಡೆ ಬೃಹದಾಕಾರದ ಗುಂಡಿಗಳು ಬಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ರಸ್ತೆ ಮಾರ್ಗದಲ್ಲಿ ಹಲವು ಇಲಾಖೆ, ಶಾಲೆ ಹಾಗೂ ಕೋರ್ಟ್‌: ಮಡಹಳ್ಳಿ ರಸ್ತೆಯಲ್ಲಿ ಮಾರ್ಗವಾಗಿ ಕೋರ್ಟ್‌, ಜೆಎಸ್‌ಎಸ್‌ ಮಹಾ ವಿದ್ಯಾಲಯ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಬಿಸಿಎಂ ವಿದ್ಯಾರ್ಥಿನಿಲಯ, ಮಾನಸ ಶಾಲೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿದ್ದರೂ ಸಹ ರಾಜಾ ರೋಷವಾಗಿ ಎಗ್ಗಿಲ್ಲದೆ ಟಿಪ್ಪರ್‌ ಲಾರಿಗಳು ಸಂಚಾರ ಮಾಡುತ್ತಿದೆ. ಇದರಿಂದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಕಿರಿಕಿರಿ ಹೆಚ್ಚಿದೆ.

ಮಳೆ ಬಂದರೆ ಸಂಚಾರ ದುಸ್ತರ: ಮಡಹಳ್ಳಿ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಅಲ್ಪ ಪ್ರಮಾಣದಲ್ಲಿ ಮಳೆ ಬಂದರೂ ಸಹ ಮಳೆ ನೀರು ಮಡಹಳ್ಳಿ ವೃತ್ತದಲ್ಲಿ ನಿಂತು ಕೆರೆಯಂತೆ ಮಾರ್ಪಾಡಾಗುತ್ತಿದೆ. ಸಮಸ್ಯೆ ಹಲವು ವರ್ಷ ಗಳಿಂದ ಇದ್ದರೂ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿ ಪಡಿಸಿ ಶಾಶ್ವತ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಶಾಸಕರೇ ಇತ್ತ ಗಮನಿಸಿ : ಹಲವು ವರ್ಷಗಳಿಂದಲೂ ರಸ್ತೆ ಕಿತ್ತುಹೋಗಿ ಗುಂಡಿಮಯವಾಗಿದೆ. ಟಿಪ್ಪರ್‌ ಲಾರಿಗಳ ಸಂಖ್ಯೆ ಅಧಿಕ ಸಂಖ್ಯೆಯಲ್ಲಿ ಹೆಚ್ಚಿನ ಭಾರ ಹೊತ್ತು ಸಂಚಾರ ಮಾಡುತ್ತಿವೆ. ಇದರ ಅರಿವಿದ್ದರೂ ಸಹ ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ರಸ್ತೆ ದುರಸ್ತಿ ಪಡಿಸಲು ಆಶಕ್ತಿ ತೋರುತ್ತಿಲ್ಲ. ಜೊತೆಗೆ ಟಿಪ್ಪರ್‌ ಲಾರಿಗಳ ಸಂಚರಿಸುತ್ತಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ. ಇನ್ನಾದರೂ ಸಹ ಎಚ್ಚೆತ್ತು ರಸ್ತೆ ದುರಸ್ತಿಗೊಳಿಸಿ ಟಿಪ್ಪರ್‌ ಸಂಚಾರಕ್ಕೆ ಕಡಿವಾಣ ಹಾಕಲು ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆ ಬಂದರೆ ಮಡಹಳ್ಳಿ ರಸ್ತೆಯಲ್ಲಿ ನೀರು ನಿಂತು ಕರೆಯಂತೆ ನಿರ್ಮಾಣವಾಗುತ್ತಿದೆ.  ಹಲವು ವರ್ಷಗಳಿಂದಲೂ ಸಮಸ್ಯೆ ಇದ್ದರೂ ಸಹ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜೊತೆಗೆ ಈ ಮಾರ್ಗವಾಗಿ ಅಧಿಕ ಭಾರ ಹೊತ್ತ ಟಿಪ್ಪರ್‌ ಲಾರಿಗಳು ಸಂಚಾರ ಮಾಡುತ್ತಿರುವ ಹಿನ್ನೆಲೆ ರಸ್ತೆ ತುಂಬಾ ಗುಂಡಿಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಿ ಟಿಪ್ಪರ್‌ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಿ ರಸ್ತೆ ದುರಸ್ತಿಗೆ ಮುಂದಾಗಲಿ. – ರಾಜ್‌ಗೋಪಾಲ್‌, ಪುರಸಭೆ ಸದಸ್ಯ

ಮಡಹಳ್ಳಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲಿ ಟೆಂಡರ್‌ ಆಗಿದೆ. ಶೀಘ್ರವಾಗಿ ಕೆಲಸ ಆರಂಭಿಸಿ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.- ರಾಮಚಂದ್ರು, ಎಇಇ, ಪಿಡೂಬ್ಲ್ಯೂಡಿ ಇಲಾಖೆ  

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next