Advertisement

ಸಂಚಾರ ನಿರ್ವಹಣೆಗೆ ಕ್ರಮ ಗೊಳ್ಳಬೇಕು

12:26 PM Jul 18, 2017 | |

ತಿ.ನರಸೀಪುರ: ಪಟ್ಟಣದಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕ ಒತ್ತಾಯ ನಿರಂತರವಾಗಿ ಕೇಳಿ ಬರುತ್ತಿದೆ. ಪ್ರಮುಖವಾಗಿ ಪಟ್ಟಣದ ಕಾಲೇಜು ರಸ್ತೆ, ಲಿಂಕ್‌ ರಸ್ತೆ ಹಾಗೂ ಖಾಸಗಿ ಬಸ್‌ ನಿಲ್ದಾಣ ವೃತ್ತದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸಿದೆ.

Advertisement

ಜೋಡಿ ರಸ್ತೆಯಲ್ಲಿ ಬ್ಯಾಂಕ್‌ಗಳು, ವ್ಯಾಪಾರ ವಹಿವಾಟು ಅಂಗಡಿ ಮುಂಗಟ್ಟುಗಳಿದ್ದು, ಪ್ರತಿನಿತ್ಯ ಬೈಕ್‌ ಸವಾರರು ಜೋಡಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ. ಬೈಕ್‌ಗಳು ನಿಂತರೆ ಕಿರಿದಾದ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಕಾಲೇಜಿಗೆ ಹೋಗುವ ಹಾಗೂ ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳು ಓಡಾಡಲು ಕಷ್ಟವಾಗುತ್ತದೆ. ಪಾರ್ಕಿಂಗ್‌ ಸಮಸ್ಯೆಯಿಂದಾಗಿ ಸುಗಮ ಸಂಚಾರ ಬಹಳ ಕಷ್ಟ.

ಮತ್ತೂಂದೆಡೆ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಆಟೋಗಳು ಕೆಲವೊಮ್ಮೆ ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಿರುವುದರಿಂದ ಹಾಗೂ ಅಲ್ಲಿಯೂ ಕೂಡ ಎರಡು ಬದಿಗಳಲ್ಲಿ ಬೈಕ್‌ಗಳ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ ಕಾಡುತ್ತಿದೆ. ಖಾಸಗಿ ಬಸ್‌ ನಿಲ್ದಾಣದ ವೃತ್ತವು ನಾಲ್ಕು ದಿಕ್ಕುಗಳು ಹಾಗೂ ಬಸ್‌ ನಿಲ್ದಾಣದಿಂದ ವಾಹನಗಳು ಹೊರ ಬರಲು ದಾರಿ ಇರುವುದರಿಂದ ಐದು ರಸ್ತೆಗಳಿಂದ ಸಂಪರ್ಕ ಕಲ್ಪಿಸುತ್ತಿದೆ.

ಇಲ್ಲಿ ಯಾವುದೇ ಸಿಗ್ನಲ್‌ ಸೌಲಭ್ಯವಿಲ್ಲದಿರುವುದರಿಂದ ವಾಹನಗಳು ಅಡ್ಡಾದಿಡ್ಡಿ ಚಲಿಸುತ್ತಿವೆ. ಬೆಳಗ್ಗೆ ಶಾಲಾ ಕಾಲೇಜಿಗೆ  ಮಕ್ಕಳನ್ನು ಕೂರಿಸಿಕೊಂಡು ಹೋಗುವ ಆಟೋಗಳು, ಬೈಕ್‌ ಸವಾರರು ಅನೇಕ ವೇಳೆ ವಾಹನಗಳ ಅಡ್ಡಾದಿಡ್ಡಿ ಚಾಲನೆಯಿಂದ ತೊಂದರೆ ಅನುಭವಿಸಿದ್ದಾರೆ. ಬಸ್‌ ನಿಲ್ದಾಣದಿಂದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲೂ ಕೂಡ ಆಟೋಗಳು, ರಸ್ತೆ ಬದಿ ಗಾಡಿಗಳು ನಿಲ್ಲುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆಗೆ ಅನುಗುಣವಾಗಿ ಸೂಕ್ತ ಸಂಚಾರ ವ್ಯವಸ್ಥೆ ವಿಶೇಷವಾಗಿ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ದೊರಕಿಸಬೇಕಿದೆ. ಖಾಸಗಿ ಬಸ್‌ ನಿಲ್ದಾಣ ವೃತ್ತದಲ್ಲಿ ಸಂಚಾರ ಸಿಗ್ನಲ್‌ ಅಳವಡಿಸಿದರೆ ಸ್ವಲ್ಪ ಅಡ್ಡಾದಿಡ್ಡಿ ಚಲನೆಗೆ ಬ್ರೇಕ್‌ ಹಾಕಬಹುದಾಗಿದೆ. ಗ್ರಾಮೀಣ ಪ್ರದೇಶಕ್ಕೆ ತೆರಳುವ ಆಟೋಗಳಿಗೆ ವ್ಯವಸ್ಥಿತ ನಿಲ್ದಾಣ ಹಾಕಬೇಕಿದೆ.

Advertisement

ವಾಹನ ಸಂಚಾರ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಲಿಂಕ್‌ ರಸ್ತೆಯ ರಸ್ತೆ ಬದಿ ವ್ಯಾಪಾರಿಗಳು ಸ್ಥಳಾಂತರಿಸಲಾಗಿತ್ತು. ಆಟೋಗಳ ಅಡ್ಡಾದಿಡ್ಡಿ ನಿಲ್ಲುವಿಕೆ ತಡೆಗಟ್ಟಲು ಖಾಸಗಿ ಬಸ್‌ ನಿಲ್ದಾಣ ವೃತ್ತ ಹಾಗೂ ಲಿಂಕ್‌ ರಸ್ತೆಯಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಓರ್ವ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಜೆ ವೇಳೆ ಕಾಲೇಜು ಬಿಡುವ ವೇಳೆ ವೃತ್ತದಲ್ಲಿ ಪೊಲೀಸ್‌ ನಿಯೋಜನೆ ಹಾಗೂ ಪಟ್ಟಣದಲ್ಲಿ ಕಾಲೇಜುಗಳ ಪೊಲೀಸ್‌ ವಾಹನ ಸಂಚಾರ ನಡೆಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡುವ ಪ್ರಯತ್ನ ಮಾಡಿದ್ದೇವೆ.
-ಎನ್‌. ಆನಂದ್‌, ಪಿಎಸೈ 

ಖಾಸಗಿ ಬಸ್‌ ನಿಲ್ದಾಣದ ಬಳಿ ಕಡ್ಡಾಯವಾಗಿ ಸಿಗ್ನಲ್‌ ಅಳವಡಿಸಬೇಕು. ಶಾಲೆಗೆ ಹೋಗುವ ಮಕ್ಕಳನ್ನು ಕೂರಿಸಿಕೊಂಡು ಹಾಗೂ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಅನುಕೂಲ ಕಲ್ಪಿಸಲು ವೃತ್ತದಲ್ಲಿ ಸಿಗ್ನಲ್‌ ಅಳವಡಿಸಿಬೇಕು. ರಸ್ತೆ ಬದಿ ನಿಲ್ಲುವ ವಾಹನಗಳಿಗೆ ಹಾಗೂ ವ್ಯಾಪಾರಿಗಳಿಗೆ ಸೂಕ್ತ ನಿದೇರ್ಶನ ನೀಡಬೇಕು.
-ರಮೇಶ್‌ ಆರ್‌. ಗೌಡ,  ತಿ.ನರಸೀಪುರ ನಿವಾಸಿ

* ಎಸ್‌.ಬಿ.ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next