ಬೆಂಗಳೂರು: ಹೊರವರ್ತುಲ ರಸ್ತೆಯ ನಾಗವಾರ ಬಳಿಯ ಮಾನ್ಯತಾ ಟೆಕ್ ಪಾರ್ಕ್‌ನಿಂದಾಗಿ ಆ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಸಮಸ್ಯೆ ನಿವಾರಿಸುವಂತೆ ಚಿತ್ರ ನಟ ಶಿವರಾಜ್‌ಕುಮಾರ್ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧಕ್ಕೆ ಮನವಿ ನೀಡಲು ಆಗಮಿಸಿದ ಶಿವರಾಜ್‌ಕುಮಾರ್ ಹಾಗೂ ಆ ಭಾಗದ ನಿವಾಸಿಗಳ ಜತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಕೊಠಡಿಯಲ್ಲಿ ಚರ್ಚಿಸಿದ ರಾಮಲಿಂಗಾರೆಡ್ಡಿಯವರು, ಸದ್ಯದಲ್ಲೇ ಸಂಚಾರ ಪೊಲೀಸರ ಸಭೆ ಕರೆದು ದಟ್ಟಣೆ ನಿವಾರಣೆ ಮಾರ್ಗೋಪಾಯಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ಮಾತನಾಡಿದ ರಾಮಲಿಂಗಾರೆಡ್ಡಿ, ಮಾನ್ಯತಾ ಟೆಕ್‌ಪಾರ್ಕ್ ನಿರ್ಮಾಣ ವೇಳೆ 30 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದು, ವಾಹನ ಸಂಚಾರಕ್ಕೆ ಬದಲಿ ರಸ್ತೆ ಉಪಯೋಗಿಸುವುದಾಗಿ ಮುಚ್ಚಳಿಕೆ ಬರೆದುಕೊಡಲಾಗಿತ್ತು.
ಆದರೀಗ ಟೆಕ್‌ಪಾರ್ಕ್‌ನಲ್ಲಿ 1.50 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ಅವರ ವಾಹನಗಳು ರಸ್ತೆಗಿಳಿಯುವುದರಿಂದ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಸಂಚಾರ ದಟ್ಟಣೆ ಎದುರಾಗಿದ್ದು, ಸಮಸ್ಯೆ ನಿವಾರಣೆಗೆ ನಟ ಶಿವರಾಜ್‌ಕುಮಾರ್ ಮನವಿ ನೀಡಿರುವುದಾಗಿ ತಿಳಿಸಿದರು.
ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಜತೆಯೂ ಈ ಬಗ್ಗೆ ಮಾತನಾಡಿ ನಗರ ಸಂಚಾರ ಪೊಲೀಸರೊಂದಿಗೂ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ ಎಂದು ಹೇಳಿದರು. ಮಾನ್ಯತಾ ಟೆಕ್‌ಪಾರ್ಕ್ ಉದ್ಯೋಗಿಗಳ ವಾಹನಗಳಿಂದಾಗುತ್ತಿದ್ದ ಸಂಚಾರ ದಟ್ಟಣೆ ವಿರೋಧಿಸಿ ಇತ್ತೀಚೆಗೆ ಸ್ಥಳೀಯ ನಾಗರಿಕರೊಂದಿಗೆ ನಟ ಶಿವರಾಜ್‌ಕುಮಾರ್ ಪ್ರತಿಭಟನೆ ನಡೆಸಿದ್ದರು.