ಬೆಂಗಳೂರು: ಕಳೆದ ಎರಡು ದಿನಗಳಿಂದ ಖಾಲಿಕಖಾಳಿಯಾಗಿದ್ದ ಮಹಾನಗರದ ಬಹುತೇಕ ರಸ್ತೆಗಳಲ್ಲಿ ಸೋಮವಾರ ಬೆಳಗ್ಗೆಯೇ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮುಖ್ಯವಾಗಿ ಹೊರ ಜಿಲ್ಲೆಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಹಾಗೂ ಮುಖ್ಯರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಹಳೇ ಮದ್ರಾಸ್ ರಸ್ತೆಗಳಲ್ಲಿ ಎರಡು -ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಮೇ 12ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಜನ, ಮತದಾನಕ್ಕಾಗಿ ತಮ್ಮ ಊರುಗಳಿಗೆ ತೆರಳಿದ್ದರು. ಇನ್ನು ಮೇ 13 ಭಾನುವಾರವಾದ್ದರಿಂದ ಸೋಮವಾರ ಬೆಳಗ್ಗೆ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳಲ್ಲಿ ವಾಪಸ್ ಬಂದಿದ್ದರಿಂದ ನಗರ ಪ್ರವೇಶಿಸುವ ತುಮಕೂರು, ಮೈಸೂರು, ದೇವನಹಳ್ಳಿ, ಅನೇಕಲ್, ಬನ್ನೇರುಘಟ್ಟ, ಹೊಸಕೋಟೆ ರಸ್ತೆಗಳಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಸಂಚಾರ ದಟ್ಟಣೆ ಕಂಡುಬಂತು.
ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯಲ್ಲಿ ವಿವಿಧ ಜಿಲ್ಲೆಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ಕಾರುಗಳು ಹಾಗೂ ದ್ವಿಚಕ್ರವಾಹನಗಳು ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪರಿಣಾಮ ಈ ರಸ್ತೆಯ ಟೋಲ್ ಕೇಂದ್ರಗಳ ಬಳಿ ತೀವ್ರ ಸಂಚಾರ ದಟ್ಟಣೆ ಕಂಡುಬಂತು. ಮುಖ್ಯವಾಗಿ ನೆಲಮಂಗಲ ಟೋಲ್‌ಬಳಿ 1 ಕಿ.ಮೀಗೂ ಹೆಚ್ಚು ದೂರದವರೆಗೂ ವಾಹನಗಳು ನಿಂತಿದ್ದವು.
ಇನ್ನು ಗುರುಗುಂಟೆ ಪಾಳ್ಯದಿಂದ ಮೆಜೆಸ್ಟಿಕ್‌ವರೆಗೂ ಸಿಗುವ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನಗಳು ಅರ್ಧಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ತುಮಕೂರು-ಹಾಸನ ಮಾರ್ಗದಲ್ಲಿ ಬಂದ ಪ್ರಯಾಣಿಕರು, ನಾಗಸಂದ್ರಕ್ಕೆ ಬರುತ್ತಿದ್ದಂತೆ ಬಸ್ ಇಳಿದು ಮೆಟ್ರೋ ಮೂಲಕ ನಗರ ಪ್ರವೇಶಿಸಿದರು. ಹಾಗಾಗಿ ಈ ಮಾರ್ಗದ ಮೆಟ್ರೋ ರೈಲುಗಳಲ್ಲೂ ಹೆಚ್ಚಿನ ಜನಸಂದಣಿ ಇತ್ತು.