ರಾಯಚೂರು: ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುವ ದ್ವಾರದ ಕೋಟೆ ಮುಂಭಾಗದಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಅಗೆದು ವಾರ ಕಳೆದರೂ ಕಾಮಗಾರಿ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ದಿನೇದಿನೆ ಟ್ರಾಫೀಕ್ ಜಾಮ್
ಸಮಸ್ಯೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.
ನಿತ್ಯ ವಾಹನಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ನಗರಸಭೆ ಸುತ್ತುವರಿದು ಬರಬೇಕಿದೆ. ಇದರಿಂದ ಗಳಿಗೆಗೊಮ್ಮೆ ಟ್ರಾಫೀಕ್ ಜಾಮ್ ಉಂಟಾಗುತ್ತಿದ್ದು, ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಸಾರಿಗೆ ಬಸ್‌ಗಳು ಕೂಡ ಇದೇ ಮಾರ್ಗವಾಗಿ ಓಡಾಡಬೇಕಿರುವುದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ಎರಡು ಬಸ್‌ಗಳು ಎದುರು ಬದರಾದರೂ ಟ್ರಾಫೀಕ್ ಉಲ್ಬಣಗೊಳ್ಳುತ್ತಿದೆ. ಅಲ್ಲದೇ, ಟ್ರಾಫೀಕ್ ಸಿಬ್ಬಂದಿ ಇದ್ದರೂ ಪರಿಸ್ಥಿತಿ ನಿಭಾಯಿಸುವುದು
ಕಷ್ಟವಾಗುತ್ತಿದೆ. ಚಂದ್ರಮೌಳೇಶ್ವರ ವೃತ್ತ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಬಸವೇಶ್ವರ ವೃತ್ತದ ಬಳಿ ಟ್ರಾಫೀಕ್ ಜಾಮ್ ನಿರ್ಮಾಣವಾಗುತ್ತಿದೆ.
ಸೂಚನಾ ಫಲಕವಿಲ್ಲ: ಒಂದೆಡೆ ಕಾಮಗಾರಿ ಶುರುವಾಗಿ ಐದಾರು ದಿನಗಳಾಯಿತು. ಮತ್ತೂಂದೆಡೆ ನಗರಕ್ಕೆ ಬರುವ ಹೊಸಬರಿಗೆ ಬಸ್ ನಿಲ್ದಾಣ ಮಾರ್ಗ ಬಂದ್ ಆಗಿರುವ ಮಾಹಿತಿ ಇಲ್ಲ. ಕಾಮಗಾರಿ ನಿರ್ವಹಿಸುತ್ತಿರುವರು ಕೂಡ ಬಸವೇಶ್ವರ ವೃತ್ತದಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ಇದರಿಂದ ಅಂಬೇಡ್ಕರ್ ವೃತ್ತದವರೆಗೆ ತೆರಳಿ ಹಿಂದಿರುಗುವಂತಾಗಿದೆ. ಸಾರಿಗೆ ಇಲಾಖೆಯಲ್ಲಿ ಹೊಸ ಮಾರ್ಗಕ್ಕೆ ಬಂದ ಚಾಲಕರಿಗೂ ಕೂಡ ಗೊಂದಲ ತಪ್ಪಿದ್ದಲ್ಲ.
ಕಾಮಗಾರಿ ನಿರ್ವಹಣೆ ಮಾಡುತ್ತಿರುವವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇನ್ನಾದರೂ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂಬುದು ಸ್ಥಳೀಯರ ಒತ್ತಾಸೆ.