Advertisement

ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

02:35 AM Jul 06, 2018 | Team Udayavani |

ಬೆಳ್ತಂಗಡಿ: ಬಿ.ಸಿ. ರೋಡ್‌- ಉಜಿರೆ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ಸಮೀಪದ ಲಾೖಲದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೋರಿ ಕಾಮಗಾರಿಯಿಂದಾಗಿ ಗುರುವಾರ ಬೆಳಗ್ಗೆ ಟ್ರಾಫಿಕ್‌ ಜಾಮ್‌ನಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡಿದ ಘಟನೆ ಸಂಭವಿಸಿದೆ. ಇಲಾಖೆಯುವರು ಬುಧವಾರ ರಾತ್ರಿ 11ರ ವೇಳೆ ಕಾಮಗಾರಿ ಆರಂಭಿಸಿದ್ದರೂ ತಡರಾತ್ರಿ ಮಳೆ ಬಂದು ಕೆಲಸಕ್ಕೆ ಅಡ್ಡಿಯಾದ ಕಾರಣ ಕಾಮಗಾರಿ ಗುರುವಾರ ಬೆಳಗ್ಗೆ 10.30ರವರೆಗೆ ಸಾಗಿತ್ತು. ಆದರೆ ಬೆಳಗ್ಗೆ ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಏಕಾಏಕಿ ಟ್ರಾಫಿಕ್‌ ಜಾಮ್‌ ಉಂಟಾಗಿ ಕಿ.ಮೀ.ಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಹೀಗಾಗಿ ಬೆಳಗ್ಗೆ ಉಜಿರೆ, ಬೆಳ್ತಂಗಡಿ, ಮಡಂತ್ಯಾರ್‌ ಮೊದಲಾದ ಭಾಗಗಳ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಯಿತು. ದೈನಂದಿನ ಕೆಲಸಕ್ಕೆ ತೆರಳುವವರಿಗೂ ತೊಂದರೆ ಉಂಟಾಗಿತ್ತು. ಧರ್ಮಸ್ಥಳಕ್ಕೆ ತೆರಳುವ ಭಕ್ತರು ಕ್ಷೇತ್ರವನ್ನು ತಲುಪುವುದು ವಿಳಂಬವಾಗಿತ್ತು.

Advertisement

ಟ್ರಾಫಿಕ್‌ ಜಾಮ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳು ಸಿಲುಕಿಹಾಕಿಕೊಂಡಿದ್ದ ಪರಿಣಾಮ ಹೆಚ್ಚಿನ ವಿದ್ಯಾರ್ಥಿಗಳು, ಪ್ರಯಾಣಿಕರು ಅರ್ಧದಲ್ಲಿಯೇ ಇಳಿದು ನಡೆದುಕೊಂಡೇ ಸಾಗಬೇಕಾಯಿತು. ಹೆಚ್ಚಿನ ಶಾಲಾ ವಾಹನಗಳು ಕೂಡ ಶಾಲೆಯನ್ನು ತಲುಪುವುದು ತಡವಾಗಿತ್ತು. ಬೆಳ್ತಂಗಡಿ ಸೇತುವೆ ಕೂಡ ಕಿರಿದಾಗಿದ್ದು, ಏಕಕಾಲದಲ್ಲಿ ಮುಖಾಮುಖಿಯಾದ ಘನವಾಹನಗಳೂ ನಿಧಾನವಾಗಿ ಸಾಗಬೇಕಿತ್ತು. ಕೆಲವರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ, ಟ್ರಾಫಿಕ್‌ ಕ್ಲಿಯರ್‌ ಆದ ಬಳಿಕ ಸಾಗಿದರು. ಟ್ರಾಫಿಕ್‌ ಜಾಮ್‌ನ ಪರಿಣಾಮ ಒಂದು ಬದಿ ಬೆಳ್ತಂಗಡಿ ಪೇಟೆಯವರೆಗೆ ಹಾಗೂ ಇನ್ನೊಂದು ಬದಿ ಉಜಿರೆ ಟಿಬಿ ಕ್ರಾಸ್‌ವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. 10.30ರ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತ್ತು.

ಮೋರಿ ಕಾಮಗಾರಿ
ಹೆದ್ದಾರಿಯ ಮಧ್ಯೆ ಹಾದು ಹೋಗಿರುವ ಮಳೆನೀರು ಹರಿಯುವ ಚರಂಡಿಯ ಸ್ಲ್ಯಾಬ್‌ ತುಂಡಾಗಿ ಮಳೆನೀರು ಲಾೖಲ ಪೇಟೆಯಲ್ಲೇ ನಿಲ್ಲುವ ಪರಿಸ್ಥಿತಿ ಇತ್ತು. ಹೀಗಾಗಿ ಸ್ಥಳೀಯ ಗ್ರಾ.ಪಂ.ನವರು ಸಂಸದರು ಹಾಗೂ ಸ್ಥಳೀಯ ಶಾಸಕರ ಮೂಲಕ ಒತ್ತಡ ಹೇರಿ ಇಲಾಖೆಯವರು ಕಾಮಗಾರಿ ನಡೆಸುವಂತೆ ಮಾಡಿದ್ದರು.

ಕಾಮಗಾರಿಗೆ ಮಳೆ ಅಡ್ಡಿ
ರಾತ್ರಿ 11ರ ವೇಳೆಗೆ ಚಾರ್ಮಾಡಿ ಮೂಲಕ ಬೆಂಗಳೂರು ಹೋಗುವ ಬಸ್‌ ಗಳು ತೆರಳಿದ ಬಳಿಕ ಕಾಮಗಾರಿ ಆರಂಭಿಸಿದ್ದರು. ಆದರೆ ಮಧ್ಯದಲ್ಲಿ ಮಳೆ ಬಂದ ಕಾರಣ ಕಾಮಗಾರಿಗೆ ಅಡ್ಡಿಯಾಗಿತ್ತು. ಜತೆಗೆ ಈ ಭಾಗದಲ್ಲಿ ಮುರ ಮಣ್ಣು ಇದ್ದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಹೀಗಾಗಿ ರಾತ್ರಿಯೇ ಮುಗಿಯಬೇಕಾಗಿದ್ದ ಕಾಮಗಾರಿ ಬೆಳಗ್ಗಿನವರೆಗೆ ಸಾಗಿತ್ತು.

ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‌ ಡೊಂಗ್ರೆ, ಸದಸ್ಯ ಮೋಹನದಾಸ ಸಹಿತ ಸ್ಥಳೀಯರು ಬೆಳಗ್ಗಿನವರೆಗೂ ಸ್ಥಳದಲ್ಲಿ ನಿಂತು ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆ ಟ್ರಾಫಿಕ್‌ ಜಾಮ್‌ ವೇಳೆಯೂ ಸ್ಥಳೀಯರು ಪೊಲೀಸರ ಜತೆ ಸೇರಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Advertisement

ಚಾರ್ಮಾಡಿ – ಕಕ್ಕಿಂಜೆ ಬ್ಲಾಕ್‌
ಹೆದ್ದಾರಿಯ ಮುಂಡಾಜೆ ಕಾಪು ಬಳಿ ಕಾರೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾರ್ಮಾಡಿ – ಕಕ್ಕಿಂಜೆ ಮಧ್ಯದಲ್ಲೂ ರಾತ್ರಿ ಸುಮಾರು 3ರಿಂದ 5ರವರೆಗೆ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಅಲ್ಲೂ ಕೂಡ ಟ್ರಾಫಿಕ್‌ ಜಾಮ್‌ ನಿಂದ ಬೆಂಗಳೂರು ಭಾಗದಿಂದ ಬಸ್‌ ಗಳು ಬೆಳಗ್ಗೆ 6ಕ್ಕೆ ಆಗಮಿಸಬೇಕಾಯಿತು.

ಲಾೖಲ ಕಾಮಗಾರಿಯ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 1.30ರ ಬಳಿಕ ವಾಹನಗಳು ಲಾೖಲದಿಂದ ಕಿಲ್ಲೂರು ರಸ್ತೆಯಲ್ಲಿ ಸಂಚರಿಸಿ ಕುತ್ರೊಟ್ಟುನಿಂದ ಟಿ.ಬಿ. ಕ್ರಾಸ್‌ ತಲುಪಿದವು. ಆದರೆ ಕುತ್ರೊಟ್ಟು ಭಾಗದಲ್ಲಿ ಬಸ್ಸೊಂದು ಕೈಕೊಟ್ಟ ಪರಿಣಾಮ ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಯಿತು. ಜತೆಗೆ ಚಾರ್ಮಾಡಿ-ಕಕ್ಕಿಂಜೆಯಲ್ಲಿ ಬ್ಲಾಕ್‌ ಆಗಿದ್ದ ವಾಹನಗಳು ಏಕಾಏಕಿ ಕುತ್ರೊಟ್ಟು  ರಸ್ತೆಯಲ್ಲಿ ಆಗಮಿಸಿದ ಪರಿಣಾಮ ಅಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next