Advertisement
ಮಳೆ ನೀರು ನಿಂತು ಹೊಂಡದ ಆಳ ತಿಳಿಯದೆ ದ್ವಿಚಕ್ರ ಸವಾರರು ಎದ್ದು ಬಿದ್ದು ಸಂಚರಿಸುವ ಸ್ಥಿತಿಯಾದರೆ, ಘನ ವಾಹನಗಳು ಆಮೆಗತಿಯಲ್ಲಿ ಸೇತುವೆ ದಾಟುತ್ತಿವೆ. ಸದ್ಯ ಮಳೆ ತನ್ನ ಆರ್ಭಟವನ್ನು ಕೊಂಚ ಸಡಿಲಿಸಿದ್ದರೂ ತಾತ್ಕಾಲಿಕ ದುರಸ್ತಿಗೂ ಇಲಾಖೆ ಮುಂದಾಗಿಲ್ಲ. ಮಳೆಗಾಲದ ಕೆಲವೇ ತಿಂಗಳ ಮೊದಲು ಪೇವರ್ ಫಿನಿಶ್‌ನೊಂದಿಗೆ ಕಂಗೊಳಿಸುವ ಕೂಳೂರು ಸೇತುವೆ ಹಾಗೂ ಪಣಂಬೂರು ಸುರತ್ಕಲ್ ಹೆದ್ದಾರಿ ಒಂದು ಮಳೆ ಬಂದರೆ ತನ್ನ ನೈಜ ರೂಪ ತೋರಿಸುತ್ತದೆ. ಪೇವರ್ ಫಿನಿಶ್ ಎದ್ದು ಹೋಗಿ ಅಲ್ಲಲ್ಲಿ ಹೊಂಡ, ಇನ್ನು ಕೆಲವೆಡೆ ಡಾಮರಿನ ದಿಣ್ಣೆ ಎದ್ದು ನಿಲ್ಲುತ್ತದೆ. ಆ್ಯಂಬುಲೆನ್ಸ್‌ನಂಥ ತುರ್ತು ಸೇವೆಯ ವಾಹನಗಳು ಈ ಟ್ರಾಫಿಕ್ ಬ್ಲಾಕ್‌ನಲ್ಲಿ ಸಿಲುಕಿದರೆ ಅಸಹಾಯವಾಗಿ ನಿಲ್ಲುವುದನ್ನು ಬಿಟ್ಟರೆ ಬೇರೇನೂ ಮಾಡಲಾಗದು. ವಿಮಾನ ರೈಲು ಯಾನಿಗಳು ಒಂದೆರಡು ತಾಸು ಬೇಗನೇ ಮನೆ ಬಿಡದಿದ್ದರೆ ನಿಗದಿತ ಪ್ರಯಾಣ ಕೈ ತಪ್ಪುವುದು ಖಚಿತ.
ಸೇತುವೆಯಲ್ಲಿ ಇಂತಹ ಅವಾಂತರ ಪ್ರತೀ ವರ್ಷ ಸೃಷ್ಟಿಯಾಗುತ್ತಿದ್ದರೂ ಶಾಶ್ವತ ಪರಿಹಾರ ಇನ್ನೂ ಕನಸು. ಸೇತುವೆಗಳ ಇಕ್ಕೆಲಗಳಲ್ಲಿ ಇರುವ ತಡೆಗೋಡೆ ಈಗಾಗಲೇ ಫಲ್ಗುಣಿ ಒಡಲು ಸೇರಿ ಹಲವು ತಿಂಗಳುಗಳೇ ಕಳೆದಿದ್ದರೂ ದುರಸ್ತಿಯಾಗಿಲ್ಲ. ಈ ರಸ್ತೆ ಶಾಶ್ವತವಾಗಿ ದುರಸ್ತಿಯಾಗಲು ಇನ್ನೆಷ್ಟು ಸಮಯ ಬೇಕು ಎಂಬುದೇ ಯಕ್ಷ ಪ್ರಶ್ನೆ. ಅಪಾಯಕ್ಕೆ ಆಹ್ವಾನ
ಫಲ್ಗುಣಿ ನದಿಯ ಸೇತುವೆ ತಡೆಗೋಡೆ ಕೂಡ ದುರ್ಬಲವಾಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಹಿಂದೆ ಅಪಾಯಕಾರಿ ತಿರುವು ಇರುವಲ್ಲಿ ಒಂದು ಕಾರು ಹಾಗೂ ಸಿಮೆಂಟು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಚಾಲಕರು ಹಾಗೂ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದು, ರಾತ್ರಿ ವೇಳೆ ಅಪಘಾತ ನಡೆದರೂ ತಿಳಿಯದ ಸ್ಥಿತಿ ಇದೆ.
ಉಡುಪಿಯಿಂದ ಮಂಗಳೂರು ಕಡೆ ಬರುವಲ್ಲಿ ಸೇತುವೆ ಬಳಿ ಕಡಿದಾದ ತಿರುವು ಇದ್ದು, ಕೆಲವು ವಾಹನಗಳು ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಢಿಕ್ಕಿ ಹೊಡೆಯುತ್ತವೆ. ಈ ಭಾಗದಲ್ಲಿ ಸುಮಾರು 15-20 ಅಡಿ ಆಳವಿದ್ದು, ಈ ಕಡಿದಾದ ತಿರುವು ಬಹಳ ಅಪಾಯಕಾರಿ.