Advertisement

ಬ್ರಹ್ಮಾವರದಲ್ಲಿ ಸಂಚಾರವೇ ಬಹುದೊಡ್ಡ ಸಮಸ್ಯೆ 

08:34 PM Sep 05, 2021 | Team Udayavani |

ಬ್ರಹ್ಮಾವರ: ತಾಲೂಕು ಕೇಂದ್ರವಾಗಿ ತ್ವರಿತ ಗತಿಯಲ್ಲಿ ಬದಲಾವಣೆ ಕಾಣುತ್ತಿರುವ ಬ್ರಹ್ಮಾವರದಲ್ಲಿ ಸಂಚಾರೀ ಅವ್ಯವಸ್ಥೆಯೇ ಬಹುದೊಡ್ಡ ಸಮಸ್ಯೆಯಾಗಿದೆ.

Advertisement

ಸರ್ವಿಸ್‌ ರಸ್ತೆ ಕೊರತೆ :

ರಾ.ಹೆ. ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆಗಳಿಲ್ಲದೆ ಮಹೇಶ್‌ ಆಸ್ಪತ್ರೆ, ಆಶ್ರಯ ಹೊಟೇಲ್‌, ಎಲ್‌ಐಸಿ, ಎಸ್‌.ಎಂ.ಎಸ್‌., ಶ್ಯಾಮಿಲಿ ಸಭಾಂಗಣ ಬಳಿ ತೀವ್ರ ಸಮಸ್ಯೆಯಾಗುತ್ತಿದೆ. ಈಗಿರುವ ಸರ್ವಿಸ್‌ ರಸ್ತೆಗಳನ್ನು ಎರಡೂ ದಿಕ್ಕಿನಲ್ಲಿ ಕನಿಷ್ಠ ದೂಪದಕಟ್ಟೆ ವರೆಗೆ ವಿಸ್ತರಿಸುವುದು ಅವಶ್ಯಕ. ಧರ್ಮಾವರಂನಿಂದ ಉಪ್ಪಿನಕೋಟೆ ತನಕವೂ ಸರ್ವಿಸ್‌ ರಸ್ತೆ ಅನಿವಾರ್ಯ.

ಅಂಡರ್‌ಪಾಸ್‌ ಅವ್ಯವಸ್ಥೆ :

ರಾ.ಹೆ. ಚತುಷ್ಪಥ ಸಂದರ್ಭ ಶಬರಿ ಹೊಟೇಲ್‌ ಎದುರಿಗೆ ಪ್ರಸ್ತಾವನೆಯಲ್ಲಿದ್ದ ಅಂಡರ್‌ಪಾಸ್‌ನ್ನು ಒತ್ತಡದ ಮೇರೆಗೆ ಬಸ್‌ಸ್ಟ್ಯಾಂಡ್‌ನಿಂದ ಮುಂದೆ ಮೆಸ್ಕಾಂ ಬಳಿ ವರ್ಗಾಯಿಸಲಾಯಿತು. ಆಕಾಶವಾಣಿ ಬಳಿ ಸಮಸ್ಯೆ ತಪ್ಪಿಸುವುದು ಹಾಗೂ ವಿಭಿನ್ನ ಕಾರಣಗಳಿಂದ ಮಂಜೂರಾಗಿದ್ದ ಅಂಡರ್‌ಪಾಸ್‌ ಮತ್ತೂ ಕಿರಿದಾಗಿ ಕ್ಯಾಟಲ್‌ ಪಾಸ್‌ ಆಗಿ ನಿರ್ಮಾಣವಾಯಿತು. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ವಾಹನಗಳು ಸಂಚರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪ್ರತಿಕ್ಷಣ ಅಪಾಯ, ಆತಂಕ ಎದುರಿಸಬೇಕಾಗಿದೆ. ಅತೀ ಹೆಚ್ಚು ವಾಹನ ದಟ್ಟಣೆ ಇರುವ ಬ್ರಹ್ಮಾವರದಲ್ಲಿ ಫ್ಲೈ ಓವರ್‌ ಅಥವಾ ಮೊದಲಿನಂತೆ ಬಸ್‌ಸ್ಟಾ Âಂಡ್‌ ಸಮೀಪ ಅಂಡರ್‌ಪಾಸ್‌ ನಿರ್ಮಾಣ ಒಕ್ಕೊರಲ ಬೇಡಿಕೆಯಾಗಿದೆ.

Advertisement

ಆಕಾಶವಾಣಿ ಗೊಂದಲದ ಗೂಡು :  ಆಕಾಶವಾಣಿ ಜಂಕ್ಷನ್‌ 6 ರಸ್ತೆಗಳು ಕೂಡುವ ಸ್ಥಳವಾದ್ದರಿಂದ ಗೊಂದಲದ ಗೂಡಾಗಿದೆ. ಬಾರಕೂರು ಕಡೆಯಿಂದ ಬರುವ ರಸ್ತೆಯನ್ನು ಒಮ್ಮೆಲೇ ಎತ್ತರಿಸಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ರಸ್ತೆ ವಿಸ್ತರಣೆ, ವೃತ್ತ ರಚನೆ ಬಹು ಬೇಡಿಕೆಯಾಗಿದೆ.

ಬ್ರಹ್ಮಾವರ ಬಸ್‌ಸ್ಟ್ಯಾಂಡ್‌ ಹಾಗೂ ಮಹೇಶ್‌ ಆಸ್ಪತ್ರೆ ಬಳಿ ಇರುವ ಬ್ಯಾರಿಕೇಡ್‌ಗಳಿಗೆ ರಿಫ್ಲೆಕ್ಟರ್‌ ಇಲ್ಲದೆ ರಾತ್ರಿ ಸಮಯ ಅವಘಡಕ್ಕೆ ಕಾರಣವಾಗುತ್ತಿದೆ. ಎರಡೂ ಕಡೆಗಳಲ್ಲಿ ಸಿಗ್ನಲ್‌ ಅಳವಡಿಸಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ. ಉಡುಪಿಯಿಂದ ಕುಂದಾಪುರ ಕಡೆ ತೆರಳುವ ಎಕ್ಸ್‌ಪ್ರೆಸ್‌ಗಳು ಸಂಜೆ 7ರ ಬಳಿಕ ಬಸ್‌ ಸ್ಟ್ಯಾಂಡ್ ಪ್ರವೇಶಿಸದೆ ರಾ.ಹೆ. ಬದಿಯಲ್ಲೇ ನಿಲ್ಲಿಸುತ್ತಿವೆ.

ಇದರಿಂದ ಮಹಿಳೆಯರಿಗೆ, ವಯಸ್ಕರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹುಬ್ಬಳ್ಳಿ, ಬೆಳಗಾಂ, ಮುಂಬಯಿ ಮೊದಲಾದ ಕಡೆ ತೆರಳುವ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ದೂರ ಸಂಚಾರದ ಬಸ್‌ಗಳು ಸಿಟಿ ಸೆಂಟರ್‌ ಬಳಿಯಿಂದ ಸರ್ವಿಸ್‌ ರಸ್ತೆಯಲ್ಲೇ ಸಂಚರಿಸುವಂತೆ ಆದೇಶಿಸುವುದು ಅನಿವಾರ್ಯ.

ಸರ್ವಿಸ್‌ ರಸ್ತೆ ಸಮೀಪದ ಚರಂಡಿಯ ಸ್ಲ್ಯಾಬ್‌ಗಳು ಅಲ್ಲಲ್ಲಿ ಮುರಿದು ಬಿದ್ದಿದೆ. ಇದರಿಂದ ಪಾದಚಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ತಾಲೂಕು ಕಚೇರಿ ರಸ್ತೆಯ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವುದರಿಂದ ವಾಹನ ಪಾರ್ಕಿಂಗ್‌ಗೆ ಇನ್ನಷ್ಟು ಅನುಕೂಲವಾಗಲಿದೆ. ಬ್ರಹ್ಮಾವರ ತಾಲೂಕು ರಚನೆಯಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಬೇಕಿದೆ. ತಾಲೂಕಿಗೆ ಸಂಬಂಧಪಟ್ಟ ಕಡತಗಳು ಉಡುಪಿಯಿಂದ ವರ್ಗಾವಣೆಯಾಗಬೇಕು. ವಿವಿಧ ಇಲಾಖೆಗಳು ಪ್ರಾರಂಭವಾಗಬೇಕು. ಸರಕಾರಕ್ಕೆ ಕೋಟ್ಯಂತರ ರೂ. ಆದಾಯವಿರುವ ಸಬ್‌ರಿಜಿಸ್ಟಾರ್‌ ಕಚೇರಿಯಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲದೆ ಪ್ರತಿನಿತ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ.

ಬ್ರಹ್ಮಾವರದಲ್ಲಿ ಸರ್ವಿಸ್‌ ರಸ್ತೆ ವಿಸ್ತರಣೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಪ್ರಯತ್ನದಲ್ಲಿದ್ದೇವೆ. ತಾಲೂಕಿಗೆ ಸಂಬಂಧಪಟ್ಟ ಕೆಲವು ಕಡತಗಳು ಉಡುಪಿಯಲ್ಲಿದ್ದು, ಹಂತ ಹಂತವಾಗಿ ಬ್ರಹ್ಮಾವರಕ್ಕೆ ವರ್ಗಾವಣೆಯಾಗುತ್ತಿದೆ.ಕೆ. ರಘುಪತಿ ಭಟ್‌, ಶಾಸಕರು, ಉಡುಪಿ,

ತಾಲೂಕು ರಚನೆಯೊಂದಿಗೆ ಪೂರ್ಣ ಪ್ರಮಾಣದ ಅನುಷ್ಠಾನವೂ ಮುಖ್ಯ. ಬ್ರಹ್ಮಾವರಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.ಸದಾಶಿವ ಶೆಟ್ಟಿ ಹೇರೂರು

 

Advertisement

Udayavani is now on Telegram. Click here to join our channel and stay updated with the latest news.

Next