Advertisement

ಸಂಚಾರವೇ ದುಸ್ತರ

09:44 AM Aug 18, 2019 | Team Udayavani |

ಹುಬ್ಬಳ್ಳಿ: ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಸತತ ಮಳೆಯಿಂದಾಗಿ ಬೆಳೆ ನಾಶವಾಗಿ, ಮನೆಗಳಿಗೆ ನೀರು ನುಗ್ಗಿ ಹಾನಿಯಾಯಿತು. ನೆರೆಯಿಂದಾಗಿ ನವಲಗುಂದ ತಾಲೂಕಿನಲ್ಲಿ ಸಾಕಷ್ಟು ಕಡೆ ರಸ್ತೆ, ಬ್ರಿಡ್ಜ್ಗಳು ಕೊಚ್ಚಿ ಹೋಗಿದ್ದು, ಜನರಿಗೆ ಸಂಚಾರವೇ ದುಸ್ತರವಾಗಿದೆ.

Advertisement

ನಿರಂತರ ಮಳೆಯಿಂದಾಗಿ ಬೆಣ್ಣೆ ಹಳ್ಳ ಹಾಗೂ ತುಪರಿ ಹಳ್ಳಗಳು ಸಾಕಷ್ಟು ಆಸ್ತಿ ಪಾಸ್ತಿ ಹಾನಿ ಉಂಟು ಮಾಡಿವೆ. ಹಳ್ಳದ ದಡದಲ್ಲಿನ ದಡದಲ್ಲಿರುವ ಗ್ರಾಮಗಳು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಬ್ರಿಡ್ಜ್ಗಳು, ಚೆಕ್‌ಡ್ಯಾಂಗಳು ಮಳೆಗೆ ಕೊಚ್ಚಿ ಹೋಗಿದ್ದರಿಂದ ಜನರಿಗೆ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವುದು ಅವಶ್ಯಕವಾಗಿದೆ.

ಕೆಲವೆಡೆ ಹಳ್ಳದ ನಾಲಾಗಳಲ್ಲಿ ನೀರು ಹರಿಯುತ್ತಿದ್ದರೆ, ಇನ್ನು ಕೆಲವೆಡೆ ನೀರು ಪ್ರವಾಹ ಕಡಿಮೆಯಾಗಿದೆ. ಇಂಥ ಕಡೆಗಳಲ್ಲಿ ಗ್ರಾಮಗಳ ಜನರೇ ಕಲ್ಲುಗಳನ್ನು ಜೋಡಿಸಿ ಕಾಲುದಾರಿ ಮಾಡಿಕೊಂಡಿದ್ದಾರೆ. ಇನ್ನು ಕೆಲವೆಡೆ ದ್ವಿಚಕ್ರವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇದು ಸುರಕ್ಷಿತವಾಗಿಲ್ಲ. ಕಲ್ಲು ಜಾರಿದರೆ, ಇಲ್ಲವೇ ಮಣ್ಣು ಕುಸಿದರೆ ಅನಾಹುತಗಳಾಗುವ ಸಾಧ್ಯತೆ ಇರುವುದರಿಂದ ತ್ವರಿತಗತಿಯಲ್ಲಿ ಪರ್ಯಾಯ ರಸ್ತೆಗಳನ್ನು ನಿರ್ಮಿಸಿಕೊಡುವುದು ಮುಖ್ಯವಾಗಿದೆ.

ಧಾರಾಕಾರ ಮಳೆ ಸುರಿದ ನಂತರ ಸಂಪರ್ಕ ರಸ್ತೆಗಳಿಲ್ಲದಿದ್ದರಿಂದ ರೈತರಿಗೆ ಹೊಲ, ಗದ್ದೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಹಲವೆಡೆ ರಸ್ತೆಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದ್ದು, ಇಲ್ಲಿ ಸಂಚಾರ ದುಸ್ತರವಾಗಿದೆ. ಚೆಕ್‌ ಡ್ಯಾಂ ಬಳಿ ಇಂಥ ರಸ್ತೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಚತುಶ್ಚಕ್ರ, ಷಟ್ಚಕ್ರ ವಾಹನಗಳು ಹೆಚ್ಚಾಗಿ ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ರಸ್ತೆಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಹಲವು ಗ್ರಾಮಗಳಿಗೆ ಬಸ್‌ಗಳ ಸಂಚಾರ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಮೊರಬದಿಂದ ನವಲಗುಂದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ತಿರ್ಲಾಪುರದವರೆಗೆ ಹಾಳಾಗಿದೆ. ಹುಬ್ಬಳ್ಳಿ, ಧಾರವಾಡ, ನವಲಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಹಾಳಾಗಿದ್ದರಿಂದ ಅಗತ್ಯ ಸಾಮಗ್ರಿಗಳನ್ನು ತರಲು ಜನರು ಕಷ್ಟಪಡಬೇಕಿದೆ. ಕೃಷಿ ಸಲಕರಣೆಗಳು, ರಸಗೊಬ್ಬರ ತರುವುದು ಹಲವರಿಗೆ ದುಸ್ತರವಾಗಿದೆ. ಇದರಿಂದ ಕೃಷಿ ಕಾರ್ಯಗಳು ಸ್ಥಗಿತಗೊಳ್ಳುವಂತಾಗಿದೆ.

Advertisement

ಹಳ್ಳಗಳು ಹರಿದ ಮಾರ್ಗದಲ್ಲಿ ಹಲವೆಡೆ ಬ್ರಿಡ್ಜ್ಗಳು ಕುಸಿದಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿದೆ. ಜನರಿಗೆ ಹೊಲ, ಮನೆಗೆ ಹೋಗಲು ಅಗತ್ಯ ರಸ್ತೆಗಳನ್ನು ನಿರ್ಮಿಸಬೇಕಿದೆ. ಬ್ರಿಡ್ಜ್ಗಳ ಪಕ್ಕದಲ್ಲಿ ತಾತ್ಕಾಲಿಕವಾಗಿ ರಸ್ತೆಗಳನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದ್ದು, ಈಗ ಜನರು ಪುನರ್ವಸತಿ ಕೇಂದ್ರಗಳಿಂದ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಬಸ್‌ಗಳು ಸಂಚರಿಸುವಂತಾದರೆ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತದೆ.•ಬಸಣ್ಣ ಬೆಳವಣಕಿ, ಅಳಗವಾಡಿ ಗ್ರಾಮದ ಮುಖಂಡ

 

•ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next