ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ತವರು ಮೈಸೂರು ನಗರಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತೆರೆದ ವಾಹನದಲ್ಲಿ ಅವರನ್ನು ಮೆರವಣಿಗೆಯಲ್ಲಿ ಕಾಂಗ್ರೆಸ್ ಕಚೇರಿ ಆವರಣಕ್ಕೆ ಅವರನ್ನು ಕರೆ ತಂದ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಪರದಾಡಬೇಕಾಯಿತು.
ತುರ್ತು ಕೆಲಸದ ನಿಮಿತ್ತ ಬಸ್, ರೈಲು ಮೂಲಕ ತೆರಳಬೇಕಿದ್ದ ಸಾರ್ವಜನಿಕರು, ಆಸ್ಪತ್ರೆಗೆ ತೆರಳಬೇಕಿದ್ದ ರೋಗಿಗಳು ಬರೋಬ್ಬರಿ ಎರಡು ಗಂಟೆಗಳ ಉಂಟಾದ ಸಂಚಾರ ದಟ್ಟಣೆಯಿಂದ ಪರಿತಪಿಸಿದರು. ಕೆ.ಆರ್.ಆಸ್ಪತ್ರೆ ಎದುರೇ ಮೆರವಣಿಗೆ ಸಾಗಿದ್ದರಿಂದ ಆ್ಯಂಬುಲೆನ್ಸ್‌ಗಳು ಸಹ ಮೆರವಣಿಗೆಯಲ್ಲಿದ್ದ ವಾಹನಗಳಿಂದ ಮುಂದೆ ಸಾಗಲು ಸಾಧ್ಯವಾಗದೇ ಕೆಲವೆಡೆ ನಿಲ್ಲುವಂತಾಯಿತು.
ಕೆಲವೆಡೆ ಪೊಲೀಸರು ಆ್ಯಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಮಿತಿ ಮೀರಿದ ವಾಹನಗಳಿಂದ ಆ್ಯಂಬುಲೆನ್ಸ್‌ಗಳು 5ರಿಂದ 10 ನಿಮಿಷಗಳ ಕಾಲ ರಸ್ತೆಯಲ್ಲೇ ನಿಲ್ಲುವಂತಾಗಿದ್ದರಿಂದ ರೋಗಿಗಳು ಪರದಾಡಿದರು. ನಗರದ ಹೃದಯ ಭಾಗವಾಗಿರುವ ಸಯ್ನಾಜಿ ರಾವ್ ರಸ್ತೆ ಮತ್ತು ಇರ್ವೀನ್ ರಸ್ತೆಯಲ್ಲಿ ಮೆರವಣಿಗೆ ಸಾಗಿದ್ದರಿಂದ ಸುಮಾರು 2 ಗಂಟೆಗಳ ಕಾಲ ಈ ಭಾಗದ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಹಳೇ ಆರ್‌ಎಂಸಿ ವೃತ್ತದಿಂದ ಅಭಿನಂದನಾ ಸಮಾರಂಭ ಏರ್ಪಡಿಸಿದ್ದ ರೈಲು ನಿಲ್ದಾಣ ಸಮೀಪದ ಕಾಂಗ್ರೆಸ್ ಕಚೇರಿ ಆವರಣಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಬೆಳಗ್ಗೆ 11.30ಕ್ಕೆ ಸ್ವಾಗತ ಕಾರ್ಯಕ್ರಮ ನಿಗದಿಯಾಗಿದ್ದರೂ ಪೊಲೀಸರು ಮುಂಚಿತವಾಗಿಯೇ ಈ ಮಾರ್ಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ಇದರಿಂದ ದಾಸಪ್ಪ ವೃತ್ತ, ರೈಲ್ವೆ ನಿಲ್ದಾಣ, ಆಯುರ್ವೇದಿಕ್ ವೃತ್ತ, ಆರ್‌ಎಂಸಿ ವೃತ್ತ ಮತ್ತು ನೆಹರು ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರ ಪರದಾಡುವಂತಾಯಿತು.
ರೈಲ್ವೆ ನಿಲ್ದಾಣದ ಬಳಿಯ ಪ್ರಿಪೆಯ್ಡ ಆಟೋ ನಿಲ್ದಾಣವನ್ನು ಕೂಡ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿತ್ತು. ಆರ್‌ಎಂಸಿ ವೃತ್ತದ ಬಳಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು, ಮೆರವಣಿಗೆ ಯುದ್ದಕ್ಕೂ ಪಟಾಕಿ ಸಿಡಿಸುವಲ್ಲಿ ನಿರತರಾಗಿದ್ದರು.
ಆರ್‌ಎಂಸಿ ವೃತ್ತದಿಂದ ಸಯ್ನಾಜಿ ರಾವ್ ರಸ್ತೆ ಮೂಲಕ ಮೆರವಣಿಗೆ ಹೊರಟಾಗ ಹೆಜ್ಜೆ ಹೆಜ್ಜೆಗೂ ಪಟಾಕಿ ಸಿಡಿಸಿದ್ದರಿಂದ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಳ ಬಳಿ ವಾಯುಮಾಲಿನ್ಯದಿಂದ ವಯೋವೃದ್ಧರು, ರೋಗಿಗಳು, ಗರ್ಭಿಣಿ, ಬಾಣಂತಿಯರು ತೊಂದರೆ ಅನುಭವಿಸಬೇಕಾಯಿತು.