ಮಡಿಕೇರಿ: ಕೈಗಾರಿಕಾ ಬಡಾವಣೆಯಲ್ಲಿ ಆರಂಭಿಸಿರುವ ಏಕಮುಖ ಸಂಚಾರ ವ್ಯವಸ್ಥೆಯಿಂದ ಸಮಸ್ಯೆಗಳು ಎದುರಾಗಿದೆ ಎಂದು ಈ ಭಾಗದ ವರ್ತಕರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಭೇಟಿಯಾಗಿ ತಿಳಿಸಿದ್ದಾರೆ.
ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ನೇತೃತ್ವದಲ್ಲಿ ಡಿಸಿ ಹಾಗೂ ಎಸ್‌ಪಿಯನ್ನು ಭೇಟಿಯಾದ ವರ್ತಕರು ಏಕಮುಖ ಸಂಚಾರ ವ್ಯವಸ್ಥೆಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದರು.
ಖಾಸಗಿ ಬಸ್Õಗಳು ಮೊದಲಿನಂತೆ ಕಾವೇರಿಹಾಲ್ ಮೂಲಕ ಕಾಲೇಜು ರಸ್ತೆಗೆ ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಕೊಹಿನೂರು ರಸ್ತೆಗೆ ಬಂದು ಮುಂದಕ್ಕೆ ಪ್ರಯಾಣಿಸಿದಾಗ ಸಾರ್ವಜನಿಕರಿಗೆ, ಕೈಗಾರಿಕಾ ಬಡಾವಣೆಯವರಿಗೆ, ಪ್ರವಾಸಿಗರಿಗೆ, ವ್ಯಾಪಾರಸ್ಥರಿಗೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವವರೆಲ್ಲರಿಗೂ ಅನುಕೂಲವಾಗುತ್ತದೆ. ನೂತನ ಖಾಸಗಿ ಬಸ್ ನಿಲಾಣದಿಂದ ಕಾಲೇಜು ರಸ್ತೆಗೆ ತೆರಳುವಾಗ ಕಾವೇರಿ ಹಾಲ್‌ನ ಎದುರು ಯಾವುದೇ ವಾಹನಗಳಿಗೂ ನಿಲುಗಡೆಗೆ ಅವಕಾಶ ನೀಡಬಾರದು, ಒಂದು ವೇಳೆ ನಿಲುಗಡೆಗೆ ಅವಕಾಶ ನೀಡಿದರೆ ಬಸ್ ಚಾಲಕರಿಗೆ ಕಷ್ಟವಾಗುತ್ತದೆ.
ಕಾಲೇಜು ರಸ್ತೆಯಲ್ಲಿ ಮೋರ್ ಎದುರಿನ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಬದಲಾಯಿಸಿ ಆ ಜಾಗದಲ್ಲಿ ಆಟೋರಿಕ್ಷಾಗಳನ್ನು ಪಾರ್ಕ್ ಮಾಡುವಂತಾಗಬೇಕು. ಆಗ ಕಾಲೇಜು ರಸ್ತೆ ಮೂಲಕ ಬಂದ ಬಸ್‌ಗಳಿಗೆ ಸ್ಟೆಂಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ತಿರುವು ಪಡೆಯಲು ಅನುಕೂಲವಾಗುತ್ತದೆ. ಈ ಪರಿವರ್ತನೆಯಿಂದ್ಲ ಸಮಸ್ಯೆಗಳು ಬಗೆ ಹರಿಯುತ್ತದೆ ಎಂದರು. ಈ ಭಾಗದ ಇತರ ವರ್ತಕರು ಸಿಬಂದಿ ಮನವಿ ಸಲ್ಲಿಸುವ ಸಂದರ್ಭ ಉಪಸ್ಥಿತರಿದ್ದರು.
ಅನನುಕೂಲವೆ ಹೆಚ್ಚು
ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ಮೊದಲಿನಿಂದಲೂ ಕೊಹಿನೂರು ರಸ್ತೆಯಿಂದ ಪ್ರಸ್‌ಕ್ಲಬ್ ಕಡೆಗೆ ವಾಹನಗಳು ಸಂಚರಿಸುತ್ತಿದ್ದವು. ಕೈಗಾರಿಕಾ ಬಡಾವಣೆಯಲ್ಲಿರುವ ವ್ಯಾಪಾರಸ್ಥರಿಗೆ, ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಹಾಗೂ ನಾಗರೀಕರಿಗೆ ಅನುಕೂಲಕರ ವಾತಾವರಣವಿತ್ತು.
ಆದರೆ ಇತ್ತೀಚಿಗೆ ಈ ಏಕಮುಖ ಸಂಚಾರವನ್ನು ಬದಲಾಯಿಸಿ ಪತ್ರಿಕಾ ಭವನದಿಂದ ಕೊಹಿನೂರು ರಸ್ತೆ ಕಡೆಗೆ ವಾಹನ ಸಂಚಾರ ಸಂಚರಿಸುವಂತೆ ಮಾಡಲಾ ಗಿದ್ದು, ಇದರಿಂದ ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚಾಗಿದೆ. ಖಾಸಗಿ ಬಸ್ಸಿನಲ್ಲಿ ಆಸನ ಹಿಡಿಯ ಬೇಕಾದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಯಿಂದ ಹೋಗಲು ಆಟೋ ರಿಕ್ಷಾಗಳಿಗೆ ಹೆಚ್ಚು ಹಣ ನೀಡಬೇಕು.