Advertisement

Bangalore Traffic: ಸಂಚಾರ ದಟ್ಟಣೆ ನಿವಾರಣೆಯತ್ತ ಪೊಲೀಸರ ಚಿತ್ತ

12:19 PM Jul 03, 2023 | Team Udayavani |

ವಿಶ್ವದ ಎರಡನೇ ಅತಿಹೆಚ್ಚು ವಾಹನ ದಟ್ಟಣೆವುಳ್ಳ ನಗರ ಎಂಬ ಅಪಖ್ಯಾತಿ ಉದ್ಯಾನನಗರಿಗೆ ಅಂಟಿಕೊಂಡಿದ್ದು, ಈ ಹಣೆಪಟ್ಟಿ ಕಳಚಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಒಂದೆಡೆ “ಬ್ರ್ಯಾಂಡ್‌ ಬೆಂಗಳೂರು’ ಅಡಿ ಬೃಹತ್‌ ಯೋಜನೆಗಳಿಗೆ ಸರ್ಕಾರ ಕೈಹಾಕುತ್ತಿದೆ. ಮತ್ತೂಂದೆಡೆ “ನಮ್ಮ ಮೆಟ್ರೋ’ದಂತಹ ಸಮೂಹ ಸಾರಿಗೆ ಯೋಜನೆಗಳ ಪ್ರಗತಿಗೆ ಚುರುಕು ಮುಟ್ಟಿಸಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಂತೂ ಮಹಿಳೆಯರಿಗೆ ಉಚಿತ ಸೇವೆ ಕಲ್ಪಿಸಲಾಗಿದೆ. ಇದೆಲ್ಲದರ ನಡುವೆ ತತ್‌ಕ್ಷಣದ ಪರಿಹಾರವಾಗಿ ನಗರ ಸಂಚಾರ ಪೊಲೀಸರು ತಂತ್ರಜ್ಞಾನದ ಮೊರೆಹೋಗಿದ್ದಾರೆ. ಇದು ತಕ್ಕಮಟ್ಟಿಗೆ ಫ‌ಲವನ್ನೂ ನೀಡುತ್ತಿದೆ ಎಂಬ ಅನುಭವ ವಾಹನ ಸವಾರರಿಗೆ ಆಗುತ್ತಿದೆ. ಇವುಗಳ ಒಂದು ನೋಟ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

ಮೆಟ್ರೋಪಾಲಿಟನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು “ಹೆವಿ ಟ್ರಾಫಿಕ್‌ ಸಿಟಿ’ ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಈ ಬೆನ್ನಲ್ಲೇ ಸಂಚಾರ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸಂಚಾರದಟ್ಟಣೆ ನಿವಾರಣೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಸ್ತೆಬದಿ ನಿಂತು ವಾಹನಗಳನ್ನು ತಡೆದು ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ವಿರುದ್ಧ ದಂಡ ವಿಧಿಸುತ್ತಿದ್ದ ಸಂಚಾರ ಪೊಲೀಸರು, ಇದೀಗ ಎಲ್ಲ ಜಂಕ್ಷನ್‌, ಸಿಗ್ನಲ್‌ಗ‌ಳ ಬಳಿ ಸಂಚಾರ ನಿರ್ವಹಿಸುತ್ತಿದ್ದಾರೆ. ಜತೆಗೆ ಹೆಚ್ಚು ದಟ್ಟಣೆ ಇರುವ ಜಂಕ್ಷನ್‌ಗಳಲ್ಲಿ ವಾಹನಗಳ ವೇಗ ಮಿತಿ ಹೆಚ್ಚಿಸಿ, ಸಮಯ ಕಡಿಮೆ ಮಾಡಲಾಗುತ್ತಿದೆ. ಬಸ್‌ಬೇ, ಡ್ರೋನ್‌ ಕ್ಯಾಮೆರಾ ಬಳಕೆ ಹಾಗೂ ಇತರೆ ಕೃತಕ ಬುದ್ಧಿಮತ್ತೆ ಮೂಲಕ ಸಂಚಾರದಟ್ಟಣೆ ನಿರ್ವಹಣೆಗೆ ಹೊಸ ಮಾದರಿಯ ಸುಧಾರಣೆಗಳು, ಬದಲಾವಣೆ ಮತ್ತು ಕಟ್ಟುನಿಟ್ಟಿನ ಕ್ರಮಗಳಿಂದ ದಟ್ಟಣೆ ಕಿರಿಕಿರಿ ಕಡಿಮೆ ಆಗುತ್ತಿದೆ ಎಂಬುದು ಅನುಭವಕ್ಕೆ ಬರಲು ಶುರುವಾಗಿದೆ.

ವಾಹನಗಳ ವೇಗ ಹೆಚ್ಚಳ, ಕ್ರಮಿಸುವ ಸಮಯ ಕಡಿಮೆ: ನಗರದಲ್ಲಿ ಆಯ್ದ 20ಕ್ಕೂ ಅಧಿಕ ಜಂಕ್ಷನ್‌ಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗ ತುಸು ಹೆಚ್ಚಾಗಿಸಿ, ಕ್ರಮಿಸುವ ಸಮಯ 10-20 ಸೆಕೆಂಡ್‌ ಕಡಿಮೆ ಮಾಡಲಾಗಿದೆ. ಅದರಿಂದ ರಸ್ತೆಗೆ ಇಳಿಯುವ ವಾಹನ ಸವಾರರು, ಚಾಲಕರ ಮುಖದಲ್ಲಿ ಮಂದಹಾಸ ಮೂಡಿದೆ. ದಿನದ 24 ಗಂಟೆಯನ್ನು ಆರು ಭಾಗವಾಗಿ ಮಾಡಿಕೊಂಡು, “ಪೀಕ್‌ ಅವರ್‌’ ಮತ್ತು “ನಾನ್‌ ಪೀಕ್‌ ಅವರ್‌’ ಹಾಗೂ ಸಾಧಾರಣಾ ಸಮಯ ಎಂದು ಪ್ರತ್ಯೇಕಗೊಳಿಸಲಾಗಿದೆ.

ಉದಾಹರಣೆಗೆ ಪ್ರಮುಖ ಜಂಕ್ಷನ್‌ನಲ್ಲಿ ಮೂರು ಅಥವಾ ನಾಲ್ಕು ದಿಕ್ಕುಗಳಲ್ಲಿ ವಾಹನಗಳು ಚಲಿಸುತ್ತವೆ. ಪ್ರತಿ ದಿಕ್ಕಿಗೂ ಇಂತಿಷ್ಟು ಅಂದಾಜು 40ರಿಂದ 50 ಸೆಕೆಂಡ್‌ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಒಟ್ಟು ನಾಲ್ಕು ದಿಕ್ಕಿನಿಂದ 180 ಸೆಕೆಂಡ್‌ ಇದ್ದರೆ, ಅದನ್ನು ಯಾವ ದಿಕ್ಕಿನಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆಯೇ ಆ ಭಾಗದಲ್ಲಿ ಗ್ರಿನ್‌ ಸಿಗ್ನಲ್‌ ಬಿದ್ದಾಗ ಸೆಕೆಂಡ್‌ ಏರಿಕೆ ಮಾಡಲಾಗುತ್ತದೆ. ಕಡಿಮೆ ದಟ್ಟಣೆ ಇರುವ ಕಡೆ ಇಳಿಕೆ ಮಾಡಲಾಗಿದೆ. ಹೀಗೆ ಒಟ್ಟು ನಾಲ್ಕು ದಿಕ್ಕಿನಲ್ಲೂ 180 ಸೆಕೆಂಡ್‌ ಅನುಗುಣವಾಗುವಂತೆ ಮಾರ್ಪಾಡು ಮಾಡಲಾಗಿದೆ. ಇಬ್ಬಲೂರು, ಮಾರತ್‌ಹಳ್ಳಿ, ಸಿಲ್ಕ್ಬೋರ್ಡ್‌, ಹೆಬ್ಟಾಳ, ಬನಶಂಕರಿ, ಸರ್ಜಾಪುರ ರಸ್ತೆ ಸೇರಿ 20ಕ್ಕೂ ಅಧಿಕ ಜಂಕ್ಷನ್‌ಗಳಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ದಂಡದ ಬದಲು ಸಿಬ್ಬಂದಿಯಿಂದ ಸಂಚಾರ ನಿರ್ವಹಣೆ: ಈ ಮೊದಲು ರಸ್ತೆ ಮರೆಯಲ್ಲಿ ನಿಂತು ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪಟ್ಟಿ, ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುತ್ತಿದ್ದ ಸಂಚಾರ ಪೊಲೀಸರು ಇದೀಗ ದೈಹಿಕವಾಗಿ ದಂಡ ಸಂಗ್ರಹಿಸುವ ಗೋಜಿಗೆ ಬ್ರೇಕ್‌ ಹಾಕಿದ್ದಾರೆ. ಬದಲಿಗೆ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಥವಾ ಆನ್‌ ಲೈನ್‌ ಮೂಲಕ ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸಲಾಗುತ್ತದೆ. ಹೀಗಾಗಿ ಕಾನ್‌ಸ್ಟೇಬಲ್‌ನಿಂದ ಪಿಎಸ್‌ಐವರೆಗೂ ಎಲ್ಲ ಸಿಬ್ಬಂದಿ ರಸ್ತೆಯಲ್ಲಿ ನಿಂತು ಸಂಚಾರ ದಟ್ಟಣೆ ನಿರ್ವಹಿಸಬೇಕು. ಪ್ರಮುಖವಾಗಿ ಹೆಬ್ಬಾಳ ಮೇಲ್ಸೇತುವೆ, ಗೊರಗುಂಟೆಪಾಳ್ಯ, ಕೆ. ಆರ್‌. ಪುರ, ಸಿಲ್ಕ್ಬೋರ್ಡ್‌ ಸೇರಿ ಪ್ರಮುಖ ಜಂಕ್ಷನ್‌ನಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿ ಟ್ರಾಫಿಕ್‌ ಕ್ಲಿಯರ್‌ ಮಾಡುವುದು. ಅನಗತ್ಯ ಪಾರ್ಕಿಂಗ್‌, ಯು-ಟರ್ನ್, ಸಿಗ್ನಲ್‌ಗ‌ಳಲ್ಲಿ ಬದಲಾವಣೆಯಿಂದ ಶೇ. 25 ಕಡಿಮೆ ಮಾಡುವುದು. ಕರ್ತವ್ಯದ ಸಮಯದಲ್ಲಿ ಅದರಲ್ಲಿಯೂ “ಪೀಕ್‌ ಅವರ್‌’ನಲ್ಲಿ ಎಲ್ಲ ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ ಮತ್ತು ತಳ್ಳುವ ಗಾಡಿಗಳ ವ್ಯಾಪಾರ ತೆರವು ಮಾಡಲಾಗಿದೆ. ಸಾರ್ವಜನಿಕರು ಪಾದಚಾರಿ ಮಾರ್ಗದಲ್ಲಿ ಚಲಿಸುವಂತೆ ಸೂಚಿಸಲಾಗಿದೆ. ನೋ ಪಾರ್ಕಿಂಗ್‌, ಪಾದಚಾರಿ ಗಳು ರಸ್ತೆಗೆ ಇಳಿಯದಂತೆ, ತಳ್ಳುವ ಗಾಡಿಗಳ ಬರದಂತೆ ಗಮನಿಸಲು ಅಗತ್ಯ ಇರುವ ಸ್ಥಳಗಳಲ್ಲಿ ಪೊಲೀಸರ ನಿಗಾವಹಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಸುರಂಗ ಮಾರ್ಗಗಳು: ಮತ್ತೂಂದೆಡೆ ನಗರದ ಸಂಚಾರ ದಟ್ಟಣೆಗೆ ನಗರದ ನಾಲ್ಕು ಕಡೆಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ನೀಲನಕ್ಷೆ ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಸ್ತಾಪಿಸಿದ್ದರು.

ವಾಹನಗಳ ತಡೆರಹಿತ ಚಾಲನೆ : ಒಂದು ಸಿಗ್ನಲ್‌ ದಾಟಿ ಮತ್ತೂಂದು ಸಿಗ್ನಲ್‌ ಬರುವಷ್ಟರಲ್ಲಿ ಮತ್ತೆ ಕೆಂಪುದೀಪ ಬೀಳುತ್ತಿತ್ತು. ಇದೀಗ ಸಿಂಕ್ರೋನೈಜೇಶನ್‌ ಮೂಲಕ ಆಯ್ದ ಪ್ರಮುಖ ರಸ್ತೆಗಳಲ್ಲಿ ಒಂದು ಸಿಗ್ನಲ್‌ನಲ್ಲಿ ಹಸಿರು ದೀಪ ಬಂದು ವಾಹನಗಳು ಮುಂದೆ ಸಾಗಿದರೆ, ಅದೇ ಸಮಯದಲ್ಲಿ ಮುಂದಿನ 2-4 ಸಿಗ್ನಲ್‌ಗ‌ಳು ಸಹ ಹಸಿರು ದೀಪ ಆನ್‌ ಆಗಲಿದೆ. ಪರಿಣಾಮ ವಾಹನಗಳು ಒಮ್ಮೆಲೆ 3-4 ಸಿಗ್ನಲ್‌ ದಾಟಿ ಮುಂದೆ ಸಾಗುತ್ತಿವೆ. ಇದೇ ರೀತಿ, ನಗರದ ಪ್ರಮುಖ ಸಿಗ್ನಲ್‌ನಲ್ಲಿ ತಡೆರಹಿತ ಚಾಲನೆಯ ಸಂಯೋಜನೆ ಮಾಡಲಾಗಿದೆ. ಪ್ರಾಯೋಗಿಕವಾಗಿ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಆಯ್ದ 28 ಸಿಗ್ನಲ್‌ಗ‌ಳಲ್ಲಿ ಈ ರೀತಿ ತಂತ್ರಜ್ಞಾನ ಅಳವಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ. ಇದೇ ರೀತಿ ಸಂಚಾರ ಪೊಲೀಸ್‌ ವಿಭಾಗದಿಂದಲೂ 165 ಜಂಕ್ಷನ್‌ಗಳನ್ನು ಆಯ್ಕೆ ಮಾಡಿಕೊಂಡು ಮೊದಲ ಹಂತದಲ್ಲಿ ಅದೇ ಮಾದರಿಯ ತಂತ್ರಜ್ಞಾನ ಬಳಸಿಕೊಂಡು ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.

ಬಸ್‌ ಬೇ ಹೆಚ್ಚಳ : ನಗರದಲ್ಲಿ ಈಗಾಗಲೇ ಹತ್ತಾರು ಕಡೆಗಳಲ್ಲಿ ಬಸ್‌ ಬೇಗಳನ್ನು ಸ್ಥಾಪಿಸಲಾಗಿದೆ. ಅವುಗಳನ್ನು ಇನ್ನಷ್ಟು ಹೆಚ್ಚಳ ಮಾಡಲು ಸಂಬಂಧಿಸಿದ ಇಲಾಖೆ ಜತೆ ಚರ್ಚಿಸಲಾಗಿದೆ. ಸಾಮಾನ್ಯವಾಗಿ ಬಿಎಂಟಿಸಿ ಬಸ್‌ ಗಳು ಬಸ್‌ ಬೇನಲ್ಲಿ ಪೈಪೋಟಿ ಎಂಬಂತೆ ಒಂದರ ಹಿಂದೆ ಒಂದು ನಿಲ್ಲಿಸಲಾಗುತ್ತದೆ. ಅದರಿಂದ ಬಸ್‌ ಗಳ ಹಿಂದೆ ಬರುವ ವಾಹನಗಳು ನಿಲ್ಲಬೇಕಾಗುತ್ತದೆ. ಹೀಗಾಗಿ ಬಸ್‌ ಬೇಗಳ ಹೆಚ್ಚಳದಿಂದ ನಿಗದಿತ ನಿಲ್ದಾಣದಲ್ಲಿ ಒಂದು ಅಥವಾ ಎರಡು ಬಸ್‌ಗಳ ಮಾತ್ರ ನಿಲುಗಡೆ ಮಾಡಲು ಅವಕಾಶ ನೀಡಲಾಗುತ್ತದೆ. ಪ್ರಮುಖವಾಗಿ ಹೊರವರ್ತುಲ ರಸ್ತೆಗಳ ಸರ್ವಿಸ್‌ ರಸ್ತೆಯಲ್ಲಿಯೇ ಹೆಚ್ಚು ಬಸ್‌ಬೇಗಳ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಮಗಾರಿಗಳಿಗೆ ಚುರುಕು: ನಮ್ಮ ಮೆಟ್ರೋ ಕಾಮಗಾರಿ, ಟೆಂಡರ್‌ ಶ್ಯೂರ್‌, ವೈಟ್‌ ಟಾಪಿಂಗ್‌ ಸೇರಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿಗಳಿಂದ ಒಂದಿಲ್ಲೊಂದು ಕಾಮಗಾರಿಗಳು ನಡೆಯುತ್ತಿದ್ದವು. ಹೀಗಾಗಿ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಖುದ್ದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಜತೆಗೆ ಕಾಮಗಾರಿ ಪೂರ್ಣಗೊಂಡ ಬಳಿಕ ಅನಗತ್ಯವಾಗಿ ನಿಲ್ಲಿಸಿದ ಯಂತ್ರ, ತ್ಯಾಜ್ಯ ಅಥವಾ ವಾಹನಗಳನ್ನು ತೆರವು ಮಾಡಬೇಕು ಎಂದು ಸೂಚಿಸಿದ್ದಾರೆ.

ರಾಜಧಾನಿ ಸಂಚಾರದಟ್ಟಣೆ ನಿರ್ವಹಣೆಗೆ ಡ್ರೋನ್‌ ಬಳಕೆ: ರಾಜಧಾನಿ ಸಂಚಾರದಟ್ಟಣೆ ನಿರ್ವಹಣೆಗೆ ಸಂಚಾರ ಪೊಲೀಸರು ಡ್ರೋನ್‌ ಕ್ಯಾಮೆರಾ ಬಳಕೆ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಜೂ.19ರಿಂದಲೇ ಪ್ರಾರಂಭವಾಗಿದೆ. ದಿನೇ ದಿನೆ ವಾಹನಗಳ ಸಂಖ್ಯೆ ಹೆಚ್ಚಳದ ಜತೆಗೆ ದಟ್ಟಣೆ ಕೂಡ ಅಧಿಕವಾಗುತ್ತಿದೆ. ನಿತ್ಯ ಒಂದು ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿವೆಯುತ್ತಿವೆ. ಈ ಮಧ್ಯೆ ನಿತ್ಯ 2-3 ಸಾವಿರಕ್ಕೂ ಅಧಿಕ ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಪರಿಣಾಮ, ಪ್ರಮುಖ ಜಂಕ್ಷನ್‌, ವೃತ್ತ, ಮಾರುಕಟ್ಟೆಗಳು, ಜನನಿಬಿಡ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಇದ್ದರೂ, ನಿರೀಕ್ಷಿತ ಫ‌ಲಿತಾಂಶ ಸಿಗುತ್ತಿಲ್ಲ. ವಾಹನಗಳ ಸಾಂದ್ರತೆಯ ನಿಖರ ಮಾಹಿತಿ ಕೊರತೆಯಿಂದಾಗಿ ಸಮಸ್ಯೆ ಮುಂದುವರಿದಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ವಾಹನ ದಟ್ಟಣೆಯ ಜಾಗಗಳಲ್ಲಿ ಡ್ರೋನ್‌ ಮೂಲಕ ಚಿತ್ರೀಕರಣ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಭಾರೀ ಸಂಚಾರ ದಟ್ಟಣೆ ಉಂಟಾದರೆ, ಅದನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಿವರೆಗೆ ವಾಹನ ದಟ್ಟಣೆಯಿದೆ ಹಾಗೂ ಯಾವ ಕಾರಣಕ್ಕೆ ಟ್ರಾಫಿಕ್‌ ಜಾಮ್‌ ಆಗಿದೆ? ಎಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಒಳ್ಳೆಯದು ಎಂದು ತಿಳಿದುಕೊಂಡು ಸರಳ ಸಂಚಾರಕ್ಕೆ ಅನುವು ಮಾಡಿಕೊಡಲು ಡ್ರೋನ್‌, ಪೊಲೀಸರಿಗೆ ನೆರವಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿದೆ.

ಹೀಗಾಗಿ ಸೇಫ್ ಸಿಟಿ ಯೋಜನೆ ಅಡಿ ನಗರ ಪೊಲೀಸ್‌ ಇಲಾಖೆ 10 ಡ್ರೋನ್‌ ಕ್ಯಾಮೆರಾ ಖರೀದಿಸಿ, ಅವುಗಳಲ್ಲಿ ಐದು ಸಂಚಾರ ಪೊಲೀಸರಿಗೆ ನೀಡಲಾಗಿದೆ. ಕಾನ್‌ಸ್ಟೇಬಲ್‌ಗ‌ಳಿಗೆ ಡ್ರೋನ್‌ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಡ್ರೋಣ್‌ ಅನ್ನು ಈಗಾಗಲೇ ಕಾನೂನು ಸುವ್ಯವಸ್ಥೆ ಪಾಲನೆಗೆ ಬಳಸಲಾಗುತ್ತಿದೆ. ಈಗ ಸಂಚಾರ ನಿರ್ವಹಣೆಗೆ ಹಾಗೂ ವಾಹನ ದಟ್ಟಣೆ ಸರಾಗಗೊಳಿಸಲು ಬಳಸಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪತ್ತೆಗೂ ಬಳಸಬಹುದಾಗಿದೆ.

ವಾಹನಗಳ ವೇಗ, ಅಡ್ಡಾದಿಡ್ಡಿ ಚಾಲನೆ, ಅಪಘಾತದ ಕುರಿತು ಕ್ಯಾಮೆರಾಗಳ ಮೂಲಕ ಮಾಹಿತಿ ಸಂಗ್ರಹ ಸಾಧ್ಯವಿದೆ. ಹೆಬ್ಟಾಳ ಮೇಲು ಸೇತುವೆ, ಸಿಲ್ಕ್ ಬೋರ್ಡ್‌ ಜಂಕ್ಷನ್‌, ಕೆ.ಆರ್‌.ಪುರ ಮೇಲು ಸೇತುವೆ, ಮಾರತ್ತಹಳ್ಳಿ, ಸಾರಕ್ಕಿ ಜಂಕ್ಷನ್‌, ಬನಶಂಕರಿ ಜಂಕ್ಷನ್‌, ಇಬ್ಬಲೂರು ಜಂಕ್ಷನ್‌, ಟ್ರಿನಿಟಿ ಜಂಕ್ಷನ್‌ ಗಳಲ್ಲಿ ಪ್ರಾಯೋಗಿಕ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಚಾರ ದಟ್ಟಣೆ ಕಡಿಮೆ ಮಾಡಿ, ವಾಹನಗಳ ಸುಗಮ ಸಂಚಾರವೇ ಸಂಚಾರ ವಿಭಾಗದ ಮೊದಲ ಆದ್ಯತೆ. ಅದಕ್ಕೆ ಪೂರಕವಾಗಿ ಡ್ರೋನ್‌ ಕ್ಯಾಮೆರಾ, ಕೃತಕ ಬುದ್ಧಿಮತ್ತೆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. -ಎಂ.ಎನ್‌.ಅನುಚೇತ್‌, ಸಂಚಾರ ವಿಭಾಗದ ಜಂಟಿ ಆಯಕ್ತ

 -ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next