ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆಯ (ಸಿರ್ಸಿ ಮೇಲ್ಸೇತುವೆ) ಮೈಸೂರು ರಸ್ತೆಯಿಂದ ಪುರಭವನ ಕಡೆಯ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಸೋಮವಾರ ಪ್ರಾರಂಭವಾದ ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗಿ ಜನ ಪರದಾಡುವಂತಾಯಿತು.
ಸಿರ್ಸಿ ಮೇಲ್ಸೇತುವೆಯ ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಸಾಗುವ ಮಾರ್ಗದಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಯಿಂದ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ಸಾರ್ವಜನಿಕರಿಗೆ ಮಾರ್ಗ ಬದಲಾವಣೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಸಂಚಾರ ದಟ್ಣಣೆ ಅಧಿಕವಾಗಿತ್ತು. ಪುರಭವನ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಒಂದು ಮಾರ್ಗವನ್ನು ಕಳೆದ ಮಾರ್ಚ್‌ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಈಗ ಮತ್ತೂಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ನಗರ ಪೊಲೀಸ್ ಇಲಾಖೆ ಅನುಮತಿ ನೀಡಿದ್ದು, ಸೋಮವಾರದಿಂದ ಬಿಬಿಎಂಪಿ ಕಾಮಗಾರಿ ಪ್ರಾರಂಭಿಸಿದೆ. 2.65 ಕಿ.ಮೀ ಉದ್ದದ ಮೇಲ್ಸೇತುವೆಯನ್ನು ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಸುವುದಕ್ಕೆ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ದುರಸ್ತಿಯ ಮೊದಲ ಹಂತ ಕಾಮಗಾರಿಯನ್ನು ಮೈಸೂರು ರಸ್ತೆ ಕಡೆಯಿಂದ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಒಟ್ಟು 1.6 ಕಿ.ಮೀ ಉದ್ದ ಮೇಲ್ಸೇತುವೆ ಕಾಮಗಾರಿ ನಡೆಸುವುದಕ್ಕೆ ಉದ್ದೇಶಿಸಲಾಗಿದೆ. ಈ ಕಾಮಗಾರಿ ಮುಗಿದ ನಂತರ ಎರಡನೇ ಹಂತದಲ್ಲಿ ಟಿ.ಸಿ.ಎನ್. ರಾಯನ್ ವೃತ್ತದಿಂದ ಪುರಭವನದ ಬಳಿ ಮೇಲ್ಸೇತುವೆ ಮುಕ್ತಾಯವಾಗುವವರೆಗೆ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ಉಳಿದ ದಿನಗಳಿಗಿಂತ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾಮಗಾರಿ ನಡೆಸುವ ಪಥವನ್ನು ಸ್ಥಗಿತಗೊಳಿಸಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಮೇಲ್ಪದರ ತೆರವು ಕಾರ್ಯ ಆರಂಭಿಸಲಾಗಿದ್ದು, ಡಾಂಬರ್ ಫ್ರೆಮರ್ ಸಿಂಪಡಣೆ ಬುಧವಾರದ ವೇಳೆಗೆ ಪೂರ್ಣಗೊಳ್ಳಲಿದೆ. ನಂತರ ಟಿಕ್ಕಿ ಟಾಕ್ ಶೀಟ್ ಹರಡಿ ಡಾಂಬರೀಕರಣ ಮಾಡಲಾಗುವುದು ಎಂದು ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥಾಪಕ ಸಿದ್ದರಾಮು ತಿಳಿಸಿದ್ದಾರೆ.
ಮೈಸೂರು ರಸ್ತೆ ಕಡೆಯಿಂದ ಮೇಲ್ಸೇತುವೆ ಆರಂಭದಿಂದ (ನಳಂದ ಚಿತ್ರಮಂದಿರ) ರಾಯನ್ ವೃತ್ತದವರೆಗೆ ಕಾಮಗಾರಿ ನಡೆಸುವುದಕ್ಕೆ ಪೊಲೀಸ್ ಇಲಾಖೆ 15 ದಿನ ಕಾಲಾವಕಾಶ ನೀಡಿದೆ.
ಮೇಲ್ಸೇತುವೆಯಲ್ಲಿ ಡಾಂಬರೀಕರಣ ಮಾಡಬೇಕಾದ ತುರ್ತು ಅಗತ್ಯವಿದೆ. ಹೀಗಾಗಿ, ಈ ಭಾಗದ ವಾಹನದಾರರು, ಸವಾರರಿಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಮಸ್ಯೆ ಆಗದಂತೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
–ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ