ಕಾರವಾರ: ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾರವಾರದಿಂದ ಬಿಣಗಾ ಕಡೆಗೆ ನಿರ್ಮಿಸಿದ ಸುರಂಗ ಮಾರ್ಗ 1 ಮತ್ತು 2 ನೇದರಲ್ಲಿ ಸಂಚಾರಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನಿಷೇಧ ಹೇರಿದ್ದಾರೆ. ಪ್ರಯಾಣಿಕರ ಮತ್ತು ವಾಹನ ಸವಾರರ ಹಿತ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸುರಂಗ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯದೇ ಇರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮಳೆಗಾಲದಲ್ಲಿ ಒಂದೆರಡು ಕಡೆ ಮಳೆ ನೀರು ಸುರಂಗದಲ್ಲಿ ಜಿನುಗುತ್ತಿದೆ. ಅಲ್ಲದೇ ಸುರಂಗದ ಒಂದು ತುದಿಯಲ್ಲಿ ಮಣ್ಣು ಕುಸಿದ ಘಟನೆ ಐದು ದಿನದ ಹಿಂದೆ ನಡೆದಿತ್ತು. ಮತ್ತೊಂದು ಸುರಂಗದ ಪ್ರವೇಶ ಭಾಗದಲ್ಲಿ ಮಳೆ ರಭಸದಿ ಬರುವಾಗ ಜಲಪಾತದ ದೃಶ್ಯ ಸೃಷ್ಟಿಯಾಗಿತ್ತು. ಇದು ಸುರಂಗದ ಸುರಕ್ಷತೆ ಕುರಿತು ಅನುಮಾನ ಹುಟ್ಟಿಸಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಸುರಂಗ ಸುರಕ್ಷತೆ ಬಗ್ಗೆ, ಹೆದ್ದಾರಿ ಬಗ್ಗೆ ಪರಿಶೀಲನೆ ಮಾಡುವಾಗ ಐಆರ್ ಬಿ ಕಂಪನಿ ಅನೇಕ ಸುಳ್ಳುಗಳನ್ನು ಹೇಳುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದನ್ನು ಗ್ರಹಿಸಿದ ಸಚಿವರು ಸುರಂಗ ಮಾರ್ಗ ಸುರಕ್ಷಿತೆ ಬಗ್ಗೆ ತಜ್ಞರಿಂದ ವರದಿ ಪಡೆದು, ಸಂಚಾರ ಸುರಕ್ಷತೆ ಖಾತ್ರಿ ಪಡಿಸಿದ ಮೇಲೆ ,ಪುನಃ ಸಂಚಾರ ಪ್ರಾರಂಭಿಸಿ. ಅದಕ್ಕೂ ಮುನ್ನ ಸಂಚಾರ ಬೇಡ ಎಂದಿದ್ದರು. ಈ ಸೂಚನೆ ಗ್ರಹಿಸಿದ ಜಿಲ್ಲಾಧಿಕಾರಿ ರವಿವಾರದಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ತಜ್ಞರ ವರದಿ ಬರುವ ತನಕ ವಾಹನ ಸಂಚಾರ ಸುರಂಗದಲ್ಲಿ ಇರುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಇದನ್ನೂ ಓದಿ:Salman Khan: ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ವೇಳೆಯೇ ಸಿಗರೇಟ್ ಸೇದಿದ್ರಾ ಸಲ್ಮಾನ್?
ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಯಾವುದೇ ಅವಘಡಗಳು ಸಂಭವಿಸದಂತೆ ಪೂರ್ವ ಮುಂಜಾಗ್ರತೆಗಾಗಿ ಕಾರವಾರ ನಗರದಿಂದ ಬಿಣಗಾಕ್ಕೆ ಸಂಪರ್ಕಿಸುವ ಹಾಗೂ ಬಿಣಗಾದಿಂದ ಕಾರವಾರಕ್ಕೆ ಸಂಪರ್ಕಿಸುವ ಸುರಂಗ 1 ಮತ್ತು 2 ನೇದರಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ತಕ್ಷಣದಿಂದಲೇ ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಅಂಕೋಲಾದಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಅಂಕೋಲಾಕ್ಕೆ ವಾಹನಗಳು ಸಂಚರಿಸಲು, ಈ ಹಿಂದಿನಂತೆ ಬಿಣಗಾ ಬೈತಕೋಲ್ ಅಲಿಗದ್ದಾ ಮಾರ್ಗದ ಮೂಲಕ ಸಂಚರಿಸಲು ಅನುವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.