Advertisement

ವಿದ್ಯಾರ್ಥಿಗಳಿಂದ ಸಂಚಾರ ಜಾಗೃತಿ

11:29 AM Dec 06, 2017 | Team Udayavani |

ಕಲಬುರಗಿ: ಮಹಾನಗರದಲ್ಲಿನ ಸುಗಮ ಸಂಚಾರ ಸುಧಾರಣೆಗೆ ಟೊಂಕಕಟ್ಟಿ ನಿಂತಿರುವ ಪೊಲೀಸ್‌ ಇಲಾಖೆ ಸಾರ್ವಜನಿಕರಲ್ಲಿ ಸಂಚಾರದ ಬಗ್ಗೆ ಮಾಹಿತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಿದ್ದು, ಮಂಗಳವಾರ ಸಂಜೆ ನಗರದಲ್ಲಿ ವಿದ್ಯಾರ್ಥಿಗಳಿಂದ ವಾಹನ ಚಾಲಕರಿಗೆ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮ
ಹಮ್ಮಿಕೊಂಡಿದ್ದರು.

Advertisement

ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಸಾರ್ವಜನಿಕರಿಗೆ ಹೆಲ್ಮೆಟ್‌ ಧರಿಸಲು, ಸಂಚಾರ ನಿಯಮ ಪಾಲಿಸುವ ಕುರಿತು ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಪೊಲೀಸರಿಗೆ ಪುಟಾಣಿ ಮಕ್ಕಳು ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಸಂಚಾರ ಪೊಲೀಸ್‌ರು ಹಮ್ಮಿಕೊಂಡ ಜಾಗೃತಿ ಅಭಿಯಾನದಲ್ಲಿ ಸಾಥ್‌ ನೀಡಿ ಗಮನ ಸೆಳೆದರು.

ಹೆಲ್ಮೆಟ್‌ ಹಾಕಿಕೊಳ್ಳಿ ಅಮೂಲ್ಯ ಜೀವನ ಕಾಪಾಡಿಕೊಳ್ಳಿ, ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಸಾರ್ವಜನಿಕರಿಗೆ ಎದುರಾಗುವ ತೊಂದರೆಗಳನ್ನು ತಪ್ಪಿಸಿ ಎಂದು ಹೇಳುವ ಮೂಲಕ ಹೆಲ್ಮೆಟ್‌ ಧರಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು. 

ಜಾಗೃತಿ ಅಭಿಯಾನದಲ್ಲಿ ಪೊಲೀಸರೊಂದಿಗೆ ಮಕ್ಕಳು ರಸ್ತೆಗಿಳಿದು ಹೆಲ್ಮೆಟ್‌ ಧರಿಸುವಂತೆ ಕೋರಿ ಬೈಕ್‌ ಸವಾರರಿಗೆ ಹೂವು ನೀಡಿದರು. ಧರಿಸಿಕೊಂಡರಿಗೆ ಅಭಿನಂದಿಸಿ ಹೂವು ನೀಡಿದರು. ಒಟ್ಟಾರೆ ಪುಟಾಣಿಗಳು ಹರಳು ಹುರಿದಂತೆ
ಮಾತನಾಡಿ ಪೊಲೀಸರು ಉತ್ತಮ ಕೆಲಸಕ್ಕಾಗಿ ಪೊಲೀಸರಿಗೆ ಸಾಥ್‌ ನೀಡಿದರು. 

ವಿವೇಕಾನಂದ ವಿದ್ಯಾನಿಕೇತನ ಮಕ್ಕಳು ಸುಮಾರು ಒಂದು ಗಂಟೆಯ ಕಾಲ ಸಂಚಾರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಐಜಿಪಿ ಅಲೋಕಕುಮಾರ, ಎಸ್ಪಿ ಶಶಿಕುಮಾರ ಹಾಗೂ ಎಎಸ್ಪಿ ಜಯಪ್ರಕಾಶ ಸಮ್ಮುಖದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಆರ್‍ನಾ, ಶ್ವೇತಾ ಮೊದಲಾದ ಮಕ್ಕಳು ಮಾತನಾಡಿದರು.

Advertisement

ತದನಂತರ ಎಸ್‌ವಿಪಿ ವೃತ್ತದಲ್ಲಿ ಐಜಿಪಿ ನೇತೃತ್ವದಲ್ಲಿ ಸುಮಾರು ಹೊತ್ತು ಕಾರ್ಯಾಚರಣೆ ನಡೆಸುವ ಮೂಲಕ ಹೆಲ್ಮೆಟ್‌ ಧರಿಸದೆ ಇರುವವರಿಗೆ ದಂಡ ವಿಧಿಸಿದರು. ಕಾರ್‌ ಚಾಲಕರಿಗೆ ಸೀಟ್‌ ಬೆಲ್ಟ್ ಧರಿಸುವಂತೆ ಸೂಚಿಸಿ ಸಾಂಕೇತಿಕ ದಂಡ ವಿಧಿಸಿದರು. ಇನ್ಸ್‌ಪೆಕ್ಟರ್‌ಗಳಾದ ಗಂಗಾಧರ ಬಸವರಾಜ ಮಠಪತಿ, ಎಚ್‌.ಎಂ.ಪಟೇಲ್‌ ಸೇರಿದಂತೆ ಎರಡು ಸಂಚಾರ ಠಾಣೆಗಳ ಸಿಬ್ಬಂದಿ ಹಾಜರಿದ್ದರು.

34 ಸಾವಿರ ಪ್ರಕರಣ: 26 ಲಕ್ಷ ರೂ. ದಂಡ ಸಂಗ್ರಹ ಸುಗಮ ಮತ್ತು ಸುರಕ್ಷಿತ ಸಂಚಾರ ಸಪ್ತಾಹ ಅಂಗವಾಗಿ ಕಳೆದ ನವೆಂಬರ್‌ 24ರಿಂದ ಡಿಸೆಂಬರ್‌ 1ರ ವರೆಗಿನ ಅವಧಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಲಬುರಗಿ ಜಿಲ್ಲೆಯಲ್ಲಿ 21,554 ಪ್ರಕರಣ, ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 12,529 ಪ್ರಕರಣ
ದಾಖಲಿಸಿ ಒಟ್ಟು ರೂ. 25,91,700 ದಂಡ, ಬೀದರ ಜಿಲ್ಲೆಯಲ್ಲಿ 10,742 ಪ್ರಕರಣ, ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 7,774 ಪ್ರಕರಣ ದಾಖಲಿಸಿ 11,75,600 ರೂ. ದಂಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 5,287 ಪ್ರಕರಣ, ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 2,754 ಪ್ರಕರಣ ದಾಖಲಿಸಿ 6,17,000 ರೂ.ಗಳ ದಂಡ ವಿಧಿಸಲಾಗಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಆಲೋಕಕುಮಾರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next