ಕಾಸರಗೋಡು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾಸರಗೋಡು ನಗರದಲ್ಲಿ ಬೆಳವಣಿಗೆಗೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟವರಿಗೆ ಸಾಧ್ಯವಾಗದಿರುವುದರಿಂದ ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆಯ ಜೊತೆಗೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದರಿಂದ ವಾಹನ ಅಪಘಾತ ನಿತ್ಯ ಘಟನೆಯಾಗಿದೆ. ಇದರಿಂದಾಗಿ ವಾಹನಗಳ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ. ಕಾಸರಗೋಡು ನಗರದಲ್ಲಿ ಸಂಚಾರ ನರಕಯಾತನೆಯಾಗುತ್ತಿದೆ.
ಬುಧವಾರ ಬೆಳಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಹೊರಗೆ ಹೋಗುವ ರಾಜ್ಯ ಸಾರಿಗೆ ಬಸ್ ಖಾಸಗಿ ಬಸ್‌ಗೆ ಒರಸಿ “ಕಿಸ್’ ಕೊಟ್ಟ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಪ್ರದೇಶದಲ್ಲಿ ದಿನಾ ಬಸ್‌ಗಳು ಒಂದಕ್ಕೊಂದು ಸ್ಪರ್ಶಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ವಾಹನ ನಿರ್ವಾಹಕರ ಮಧ್ಯೆ ಚಕಮಕಿ ನಡೆಯುತ್ತಿದ್ದು, ಕೆಲವೊಮ್ಮೆ ಕೈಮಾಡುವಷ್ಟರ ಮಟ್ಟಿಗೆ ಮುಂದುವರಿಯುತ್ತದೆ. ಇಂತಹ ಸಂದರ್ಭಗಳಲ್ಲಿ ಬಸ್ ಸಹಿತ ವಾಹನಗಳಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿದ್ದಲ್ಲ. ಬಸ್ ನಿಲ್ದಾಣದಿಂದ ಹೊರಗೆ ಹೋಗುವ ಪ್ರದೇಶದಲ್ಲಿ ವಾಹನಗಳನ್ನು ಬೇಕಾಬಿಟ್ಟಿ ಚಲಾಯಿಸುವುದರಿಂದ ಇಂತಹ ಪರಿಸ್ಥಿತಿಗೆ ಕಾರಣವಾಗುತ್ತಿದೆ.
ಕಾಸರಗೋಡು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಸಿಲುಕಿ ಪ್ರಯಾಣಿಕರು ಒದ್ದಾಡುತ್ತಿದ್ದು, ನಗರದಲ್ಲಿ ಸಂಚಾರ ನರಕ ಯಾತನೆಯೇ ಸರಿ. ನಗರದ ಹೊಸ ಬಸ್ ನಿಲ್ದಾಣದಿಂದ ಎಂ.ಜಿ.ರಸ್ತೆ, ಹಳೆ ಬಸ್ ನಿಲ್ದಾಣ, ತಾಲೂಕು ಕಚೇರಿ ಪರಿಸರ, ಬ್ಯಾಂಕ್ ರೋಡ್, ಕರಂದಕ್ಕಾಡ್‌ನ ವರೆಗಿನ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆ ವಾಹನ ಚಾಲಕರ ಪಾಲಿಗೆ ಸವಾಲಿನ ಪ್ರಯಾಣವಾಗಿದೆ. ಕೆಲವು ವರ್ಷಗಳಿಂದ ಕಾಸರಗೋಡು ನಗರದಲ್ಲಿ ವಾಹನ ಸಂಚಾರ ಸಮಸ್ಯೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸದೆ ಕಣ್ಣು ಮುಚ್ಚಿಕೊಂಡಿದ್ದಾರೆ.
ನಗರದ ಅಲ್ಲಲ್ಲಿ ಇರುವ ಟ್ರಾಫಿಕ್ ಸಿಗ್ನಲ್ ಪದೇ ಪದೇ ಕೈಕೊಡುತ್ತಿರುವುದರಿಂದಾಗಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲೂ ಖಾಯಂ ಆಗಿ ಪೊಲೀಸರು ಇರುವುದಿಲ್ಲ. ಇದ್ದರೂ ಕೆಲವು ಗಂಟೆ ಸೇವೆ ಸಲ್ಲಿಸಿ ಬೇರೆ ಕರ್ತವ್ಯಕ್ಕೆ ಸಾಗುತ್ತಾರೆ. ಕೆಲವೊಮ್ಮೆ ಹೋಂ ಗಾರ್ಡ್‌ಗಳನ್ನು ನೇಮಿಸುತ್ತಿದ್ದರೂ ಅವರೂ ಖಾಯಂ ಒಂದೇ ಸ್ಥಳದಲ್ಲಿರುವುದಿಲ್ಲ.
ಪಾರ್ಕಿಂಗ್‌ಗೆ ಕಡಿವಾಣ ಇಲ್ಲ : ಮೊದಲೇ ಕಾಸರಗೋಡು ನಗರ ಇಕ್ಕಟ್ಟಿನ ಪ್ರದೇಶ. ಅಗಲ ಕಿರಿದಾದ ರಸ್ತೆ. ಹೀಗಿದ್ದರೂ ನಗರದ ಎಲ್ಲಿ ನೋಡಿದರೂ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲುಗಡೆ ಗೊಳಿಸುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ರಸ್ತೆ ಮಧ್ಯದಲ್ಲೇ ಪಾರ್ಕಿಂಗ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರನ್ನು ಇಲ್ಲಿ ಕೇಳುವವರಿಲ್ಲ. ಟ್ರಾಫಿಕ್ ಜಾಮ್ ಎದುರಿಸುತ್ತಿದ್ದರೂ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಲುಗಡೆಗೊಳಿಸುವ ವಾಹನಗಳ ಬಗ್ಗೆ ನಗರದಲ್ಲಿ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ. ಬಹುತೇಕ ಕಡೆ ಪೊಲೀಸರು ಅಳವಡಿಸಿರುವ ನೋ ಪಾರ್ಕಿಂಗ್ ಪ್ರದೇಶದಲ್ಲೇ ವಾಹನಗಳನ್ನು ನಿಲುಗಡೆಗೊಳಿಸುತ್ತಿದ್ದು, ಪೊಲೀಸರ ಆದೇಶಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂಬಂತಾಗಿದೆ. ಈ ಪ್ರದೇಶಗಳಿಂದಲೂ ಪೊಲೀಸರು ವಾಹನಗಳ ತೆರವಿಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನು ಕೆಲವು ವ್ಯಾಪಾರಿ ಸಂಸ್ಥೆಗಳು ತಮ್ಮ ಸಾಮಗ್ರಿಗಳನ್ನು ಪಾದಚಾರಿಗಳ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆಯಲ್ಲೇ ದಾಸ್ತಾನಿರಿಸುತ್ತಾರೆ. ಕೆಲವೊಮ್ಮೆ ಪೊಲೀಸರು ಇದ್ದಕ್ಕಿದ್ದಂತೆ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ವಾಹನಗಳಿಗೆ ಹಳದಿ ಬಣ್ಣದ ಸ್ಟಿಕ್ಕರ್ ಅಂಟಿಸಿ, ವಾಹನಗಳ ನಂಬ್ರಗಳನ್ನು ದಾಖಲಿಸಿ ನೊಟೀಸ್ ನೀಡುವ ಪರಿಪಾಟವಿದೆ. ಆದರೆ ಇಂತಹ ಕಾರ್ಯಾಚರಣೆ ಖಾಯಂ ಆಗಿ ನಡೆಯುವುದಿಲ್ಲ. ಇದರಿಂದಾಗಿ ಪೊಲೀಸರ ತಾತ್ಕಾಲಿಕ ಕಾರ್ಯಾಚರಣೆಗೆ ವಾಹನ ಮಾಲಕರು ಕಿಂಚಿತ್ತು ಗೌರವವನ್ನು ತೋರುವುದಿಲ್ಲ.
ಬ್ಲಾಕ್ ಸಾಮಾನ್ಯ : ಕಾಸರಗೋಡು ನಗರದ ಎಂ.ಜಿ.ರೋಡ್(ಮಹಾತ್ಮಾಗಾಂಧಿ ರಸ್ತೆ) ಮತ್ತು ಬ್ಯಾಂಕ್ ರಸ್ತೆ, ಕರಂದಕ್ಕಾಡ್ ರಾ.ಹೆದ್ದಾರಿಯಲ್ಲಿ ದಿನಾ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ರಸ್ತೆ ಬ್ಲಾಕ್ ಸಾಮಾನ್ಯವಾಗಿದೆ. ನಗರದ ಎಂ.ಜಿ.ರಸ್ತೆಯಿಂದ ಸಾಗಿ ಬ್ಯಾಂಕ್ ರಸ್ತೆಗೆ ಸಾಗುವ ವಾಹನಗಳು ಈ ರಸ್ತೆಯನ್ನು ದಾಟಬೇಕಾದರೆ ಹೆಚ್ಚಿನ ಸಂದರ್ಭಗಳಲ್ಲಿ ಗಂಟೆಗಳೇ ಬೇಕಾಗುತ್ತದೆ.
ನಗರದ ಪ್ರಮುಖ ರಸ್ತೆಗಳಲ್ಲೊಂದು ಬ್ಯಾಂಕ್ ರಸ್ತೆ. ಬ್ಯಾಂಕ್ ರಸ್ತೆಗೆ ಹಲವು ರಸ್ತೆಗಳು ಬಂದು ಸೇರುವುದರಿಂದ ವಾಹನ ದಟ್ಟಣೆ ಮಿತಿ ಮೀರುತ್ತಿದೆ. ರೈಲ್ವೇ ನಿಲ್ದಾಣ ರಸ್ತೆ, ಎಸ್.ವಿ.ಟಿ. ರಸ್ತೆ, ಪಳ್ಳ ರಸ್ತೆ, ಎಂ.ಜಿ.ರೋಡ್, ಏರ್‌ಲೈನ್ಸ್ ಜಂಕ್ಷನ್ ರಸ್ತೆ, ಪಾಂಡುರಂಗ ದೇವಸ್ಥಾನ ರಸ್ತೆ, ಬೀಚ್ ರಸ್ತೆ, ನಾಯಕ್ಸ್ ರಸ್ತೆ, ಬೀರಂತಬೈಲ್ ರಸ್ತೆ ಮೊದಲಾದ ರಸ್ತೆಗಳು ಸೇರುವುದರಿಂದ ಎಲ್ಲೆಡೆಯಿಂದ ಸಾಗಿ ಬರುವ ವಾಹನಗಳ ನಿಯಂತ್ರಿಸುವುದೇ ಸವಾಲಿನದ್ದಾಗಿದೆ. ಈ ಎಲ್ಲಾ ರಸ್ತೆಗಳಿಂದ ಬ್ಯಾಂಕ್ ರಸ್ತೆಗೆ ನುಗ್ಗುವ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ದಿನಂಪ್ರತಿ ಈ ರಸ್ತೆಯಲ್ಲಿ ಬ್ಲಾಕ್ ಉಂಟಾಗುತ್ತದೆ. ಗಂಟೆಗಟ್ಟಲೆ ವಾಹನಗಳು ರಸ್ತೆಯಲ್ಲಿ ಉಳಿದುಬಿಡುತ್ತವೆ.
ನಿತ್ಯ ಮಾತಿನ ಚಕಮಕಿ
ವಾಹನ ದಟ್ಟಣೆಯಿಂದಾಗಿ ವಾಹನಗಳು ಒಂದನ್ನೊಂದು ಸ್ಪರ್ಶಿಸಿ ಸಾಗುವುದರಿಂದ ವಾಹನ ಚಾಲಕರ ಮಧ್ಯೆ ಮಾತಿನ ಚಕಮಕಿಯ ಜತೆಗೆ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದು ಕೂಡ ಸಾರಿಗೆ ತಡೆಗೆ ಕಾರಣವಾಗುತ್ತಿವೆ. ಇದೇ ರಸ್ತೆಯ ಪಕ್ಕದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ಸಾಗಿ ಬರುವ ಬಸ್‌ಗಳೂ ಸಮಸ್ಯೆಗೆ ಕಾರಣವಾಗುತ್ತಿದೆ. ಅಲ್ಲದೆ ರಸ್ತೆ ತಡೆಗೂ ಕಾರಣವಾಗುತ್ತಿದ್ದು, ರಸ್ತೆ ಬದಿಯಲ್ಲಿ ನಡೆದು ಹೋಗುವ ಪಾದಚಾರಿಗಳು ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ನಿತ್ಯ ಘಟನೆಗಳಾಗಿವೆ.
– ಪ್ರದೀಪ್ ಬೇಕಲ್