Advertisement

ಸಂಪ್ರದಾಯ-ಆಚರಣೆ ಅರಿತಾಗ ಜೀವನ ಸಾರ್ಥಕ: ವಿಶ್ವಪ್ರಸನ್ನ ಶ್ರೀ

12:37 PM Apr 29, 2019 | Suhan S |

ಹುಬ್ಬಳ್ಳಿ: ನಮ್ಮ ಸಂಪ್ರದಾಯ ಹಾಗೂ ಆಚರಣೆ ಹಿನ್ನೆಲೆ ಅರಿತಾಗ ಜೀವನದಲ್ಲಿ ಸಾರ್ಥಕತೆ ಬರುತ್ತದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.

Advertisement

ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ ಆಯೋಜಿಸಿದ ‘ಮಧ್ವ ಸಿದ್ಧಾಂತ ಒಂದು ಜಿಜ್ಞಾಸೆ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಆಚರಣೆ ಕುರಿತು ನಮ್ಮಲ್ಲಿ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ. ಸಂಪ್ರದಾಯ ಯಾಕೆ ಪಾಲನೆ ಮಾಡಬೇಕೆಂಬ ಪ್ರಶ್ನೆಗಳು ಮೂಡುತ್ತವೆ. ಆದರೆ ಮಧ್ವ ಸಿದ್ಧಾಂತದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಮಧ್ವಾಚಾರ್ಯರದು ದ್ವೈತ ಸಿದ್ಧಾಂತ. ಅಚರಣೆ ತತ್ವದ ಅನುಭಾವವೇ ಹೊರತು ಅದೇ ತತ್ವವಲ್ಲ. ತತ್ವ ಅಥವಾ ತರ್ಕಭಾಗದ ಅರಿವಿಲ್ಲದೇ ಮಾಡುವ ಆಚರಣೆ ಕಾಲ ಕ್ರಮೇಣ ಅತಾರ್ಕಿಕ ಎನಿಸಲಾರಂಭಿಸುತ್ತದೆ. ಇದೇ ರೀತಿ ಮುಂದುವರಿದರೆ ತತ್ವ ಹಾಗೂ ಆಚರಣೆ ಎರಡೂ ಲುಪ್ತವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಗಂಗಾಸ್ನಾನದ ಮಹತ್ವವನ್ನು ಅರಿಯದೇ ಗಂಗೆಯಲ್ಲಿ ಮುಳುಗು ಹಾಕಿದರೆ ಯಾವುದೇ ಫಲವಿಲ್ಲ. ಗಂಗೆಯಲ್ಲಿ ಸಹಸ್ರಾರು ಜಲಚರಗಳು ಹುಟ್ಟಿ ಅಲ್ಲಿಯೇ ಬದುಕಿ ಸಾಯುತ್ತವೆ. ಅವುಗಳಿಗೆ ಗಂಗೆಯ ಮಹತ್ವ ಏನೆಂಬುದು ಗೊತ್ತಿರುವುದಿಲ್ಲ. ಭಗವಂತ ಇಲ್ಲಿ ನೀರಾಗಿ ಹರಿದಿದ್ದಾನೆ ಎಂಬ ನಂಬಿಕೆ ನಮಗಿರಬೇಕು. ನಾವು ಆಚರಣೆಯ ಪ್ರಯೋಜನ ಅರಿಯುವುದು ಮುಖ್ಯ ಎಂದರು.

ಶಾಸ್ತ್ರಗಳನ್ನು ಪರಾಮರ್ಷಿಸಿ, ಗುರುಗಳನ್ನು ಸಂಪರ್ಕಿಸಿ ಆಚರಣೆ ಕುರಿತ ನಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ಸಂದೇಹಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳದೇ ಅವುಗಳಿಗೆ ಉತ್ತರ ಪಡೆದುಕೊಳ್ಳುವುದು ಜಾಣತನವಾಗಿದೆ. ಸಂಪ್ರದಾಯ, ಆಚರಣೆಗಳ ಬಗ್ಗೆ ಅರಿಯದೇ ಅದನ್ನು ಗೊಡ್ಡು ಎನ್ನುವುದು ಸರಿಯಲ್ಲ. ಮಕ್ಕಳಿಗೆ ಆಚರಣೆಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು ಮಹಾಪಾಪವಾಗಿದೆ ಎಂದು ಹೇಳಿದರು.

Advertisement

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಆಚರಣೆಯನ್ನು ತತ್ವಭಾಗಕ್ಕೆ ಸದಾಚಾರ ಸಮನ್ವಯ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ತತ್ವ, ಆಚರಣೆ, ಆಪದ್ಧರ್ಮ, ಸಂದೇಶ ಕುರಿತು ವಿಚಾರ ಗೋಷ್ಠಿಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

 

ಕಪ್ಪು ಗೌನ್‌ ಯಾಕೆ?:

ಸಂಪ್ರದಾಯ, ಆಚರಣೆ ಗೊಡ್ಡು ಎಂದು ಹೇಳುವ ಹಲವರು ವಿಶ್ವವಿದ್ಯಾಲಯದ ಘಟಿಕೋತ್ಸವಗಳಲ್ಲಿ ವಿದ್ಯಾರ್ಥಿಗಳಿಗೆ ಕಪ್ಪು ಗೌನ್‌ ಯಾಕೆ ಹಾಕುತ್ತಾರೆ ಎಂಬುದಕ್ಕೆ ಉತ್ತರ ನೀಡಲು ವಿಫಲರಾಗುತ್ತಾರೆ. ಕಪ್ಪು ಬಣ್ಣ ಋಣಾತ್ಮಕತೆ ಸೂಚಿಸುತ್ತದೆ. ಪದವಿ ಪಡೆದ ಸಂಭ್ರಮದಲ್ಲಿ ಸೂತಕ ಭಾವ ಬಿಂಬಿಸುವ ಕಪ್ಪು ಗೌನ್‌ ಧರಿಸುವ ಔಚಿತ್ಯವೇನು ಎಂಬುದನ್ನು ತಿಳಿಸಬೇಕು

ಅಧ್ಯಕ್ಷತೆ ವಹಿಸಿದ್ದ ಪದ್ಮಶ್ರೀ ಡಾ| ಎಂ.ಎಂ. ಜೋಶಿ ಮಾತನಾಡಿ, ವಿಚಾರ ಸಂಕಿರಣದಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಪ್ರತಿ ಗೋಷ್ಠಿಯ ನಂತರ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ವ ಸಿದ್ಧಾಂತ ಕುರಿತಾದ ತಮ್ಮ ಸಂದೇಹಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next