Advertisement

ಕಾರವಾರ ಕಡಲ ತೀರದಲ್ಲಿ ಸಾಂಪ್ರದಾಯಿಕ ದಡದ ಮೀನುಗಾರಿಕೆ ಶುರು

05:51 PM Jun 06, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧ ಆಗುತ್ತಿದ್ದಂತೆ, ಸಮುದ್ರ ದಡದಲ್ಲಿ ಬಲೆ ಹಾಕಿ ಮೀನು ಹಿಡಿಯುವ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲಾ ಕಡಲ ತೀರದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕಾಣಿಸುತ್ತಿದ್ದು, ಇನ್ನೂ ಪೂರ್ಣ ಕಣ್ಮರೆಯಾಗಿಲ್ಲ. ಇದು ಹೆಚ್ಚು ಲಾಭದಾಯಕ ಉದ್ಯಮವಲ್ಲ. ಒಂದು ಕುಟುಂಬ ಒಂದು ದಿನದ ಹೊಟ್ಟೆ ತುಂಬಲು ತೊಂದರೆ ಇಲ್ಲ ಎನ್ನಬಹುದಾಗಿದೆ.

Advertisement

ಅಬ್ಬರದ ಅಲೆ ಕಡಿಮೆಯಾದಾಗ, ಸಮುದ್ರದಲ್ಲಿ 8 ರಿಂದ 10 ಜನರ ಗುಂಪು ಎಂಡಿ ಬಲೆಯನ್ನು ಸಮುದ್ರದಲ್ಲಿ 35 ರಿಂದ 40 ಮೀಟರ್‌ ಉದ್ದಗಲಕ್ಕೆ ಎಳೆದು, ಸಮುದ್ರದ ಆಳಕ್ಕೆ ಬಲೆ ಮುಳುಗಿಸಿ, ಗಂಟೆಕಾಲ ಬಿಟ್ಟು, ಮತ್ತೆ ಬಲೆ ಎಳೆಯುವರು.

ಸಮುದ್ರದ ಈಜು ಬಲ್ಲ ನುರಿತ ಕಾರ್ಮಿಕರು ಸಾಂಪ್ರದಾಯಿಕ ಮೀನುಗಾರಿಕೆಗೆ ಬೇಕು. ಹಾಗೆ ನುರಿತ ಮೀನುಗಾರರು ಸಮುದ್ರದ ಸ್ವಭಾವ ಅರಿತು, ಪಾತಿ ದೋಣಿಗಳ ಮೂಲಕ ಬಲೆ ಹಿಡಿದು ಸಮುದ್ರದ ಕಣ್ಣಳತೆಯ ಅನತಿ ದೂರಕ್ಕೆ (400 ರಿಂದ 900 ಮೀ.) ಸಾಗಿ ಎಂಡಿ ಬಲೆ ಬಿಡುತ್ತಾರೆ. ಬಲೆಗೆ ಸಿಕ್ಕಷ್ಟು ಮೀನು ಬಾಚುತ್ತಾರೆ. ಮೀನುಗಳಿಗೆ ಸಂತಾನೋತ್ಪತ್ತಿ ಕಾಲವಾಗಿದ್ದರೂ, ಗಾಳಿ ಮಳೆಗೆ ದಿಕ್ಕು ತಪ್ಪಿ ದಡಕ್ಕೆ ಬಂದ ಚಿಕ್ಕಪುಟ್ಟ ಜಾತಿ ಮೀನುಗಳು ಬಲೆಗೆ ಬೀಳುತ್ತವೆ.ಕೆಲವೊಮ್ಮೆ ಬರಪೂರ ಮೀನು ಸಿಕ್ಕರೆ, ಕೆಲವೊಮ್ಮೆ ಕುಟುಂಬಕ್ಕೆ ಬೇಕಾಗುವಷ್ಟು ಮೀನು ಸಿಕ್ಕೇ ಸಿಗುತ್ತದೆ.

ಪಂಚರಾಶಿ ಮೀನು ಹೆಚ್ಚು: ಬಂಗಡೆ, ಚಟ್ಲಿ, ತರಲೆ, ಪೇಡೆ,ದೋಡಿ, ನೊಗ್ಲೆ ಜಾತಿಯ ಮೀನು ಸಿಗುವುದು ಹೆಚ್ಚು. ನುಚ್ಚಿ ಸೇರಿದಂತೆ, ಸಮುದ್ರ ಏಡಿ, ಸಣ್ಣ ಸಣ್ಣ ಗುಂಪುಗಳ ಮೀನು ಸಿಗುವುದು ಸಾಮಾನ್ಯ. ಹಲವು ಜಾತಿಯ ಮೀನು ಸಿಗುವ ಕಾರಣಕ್ಕಾಗಿ ಈ ಮೀನಿನ ರಾಶಿಯನ್ನು ಪಂಚರಾಶಿ ಎಂದು ಕರೆಯುವುದು ವಾಡಿಕೆ.

ಮನೆಯ ಆಹಾರಕ್ಕೆ ಬೇಕಾಗುವಷ್ಟು ಉಳಿಸಿಕೊಂಡು, ದಡದಲ್ಲೇ ಬಂದ ಗ್ರಾಹಕರಿಗೆ ಮೀನು ಮಾರುವ ಪದ್ಧತಿ ಸಹ ಇದೆ. ಅತ್ಯಂತ ಸೇಫ್ಟಿ ಮೀನುಗಾರಿಕೆ ಇದಾಗಿದ್ದು, ಒಮ್ಮೊಮ್ಮೆ ಅಪಾಯ ಘಟಿಸಿದ ಉದಾಹರಣೆಗಳಿವೆ. ಸಾಂಪ್ರದಾಯಿಕ ಮೀನುಗಾರಿಕೆ ಸಹ ಒಂದು ಕಲೆಯಾಗಿದ್ದು, ಮಳೆಗಾಲದಲ್ಲಿ ಆಹಾರದ ಕೊರತೆ ನೀಗಲು ದುಡಿವ ಮೀನುಗಾರರು ಇದರ ಮೊರೆ ಹೋಗುತ್ತಾರೆ.

Advertisement

ಚಿನ್ನದ ಬಲೆಯಲ್ಲಿ ಚಿಮ್ಮುವ ಮೀನು: ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಬಳಸುವ ಎಂಡಿ ಬಲೆಗೆ ಸಿಕ್ಕು ಚಿಮ್ಮುವ ಮೀನನ್ನು ದಡಕ್ಕೆ ಬಂದ ಪ್ರವಾಸಿಗರು ನೋಡಲು ನೆರೆಯುವುದುಂಟು. ಅಲ್ಲದೇ ಕೆಲ ಸ್ಥಳೀಯರು ತಾಜಾ ಮೀನನ್ನು ಖರೀದಿಸಲು ಸಾಂಪ್ರದಾಯಿಕ ಮೀನುಗಾರಿಕೆ ನೋಡಲು ಬರುವವರು ಸಹ ಇದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ ಮೊದಲಿನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸಂಪ್ರದಾಯಿಕ ಮೀನುಗಾರಿಕೆ ಮಾಡುವವರು ಈಗಲೂ ಬೆರಳೆಣಿಕೆಯಷ್ಟು ಉಳಿದಿದ್ದಾರೆ ಎಂಬುದು ಸಮಾಧಾನಕರ.

ಸಾಂಪ್ರದಾಯಿಕ ಮೀನುಗಾರಿಕೆ ನೋಡುವುದೇ ಚೆಂದ. ನಮಗೆ ಇದೆಲ್ಲಾ ಹೊಸದು. ಸಮುದ್ರ ನೋಡಲು ಬಂದವರಿಗೆ ಮೀನು ಹಿಡಿಯುವುದು ಸಹ ಕಂಡಿತು.
*ಶರಣಪ್ಪ ದಿಂಡೂರ, ಕುಷ್ಟಗಿ ಪ್ರವಾಸಿಗ

ಸಾಂಪ್ರದಾಯಿಕ ಮೀನುಗಾರಿಕೆ ಲಾಭಕ್ಕಾಗಿ ಮಾಡುವುದಿಲ್ಲ. ಮಳೆಗಾಲದಲ್ಲಿ ಅಂದಂದಿನ ಆಹಾರಕ್ಕಾಗಿ ಮಾಡುವುದು. ಹೆಚ್ಚಿಗೆ ಮೀನು ಸಿಕ್ಕರೆ ಮಾತ್ರ ಮಾರಾಟ ಮಾಡುವೆವು.
*ಗಣಪತಿ ಹರಿಕಂತ್ರ,ಕಾರವಾರ ಕಡಲತೀರ ನಿವಾಸಿ

*ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next