Advertisement

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

01:35 AM Jun 24, 2024 | Team Udayavani |

ಮಲ್ಪೆ: ಮಳೆಗಾಲದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧವಿದ್ದು, ಪ್ರಸ್ತುತ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಆದ್ದರಿಂದ ಕರಾವಳಿಯ ಬೇಡಿಕೆ ಈಡೇರಿಸಲು ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶದ ಮೀನುಗಳು ಬರುತ್ತಿದ್ದು, ಅದಕ್ಕೆ ಭಾರೀ ಬೇಡಿಕೆಯೂ ಇದೆ. ಪ್ರತಿನಿತ್ಯ ಸುಮಾರು 15 ವಾಹನಗಳ ಮೂಲಕ ಟನ್‌ಗಟ್ಟಲೆ ಮೀನು ಮಲ್ಪೆ ಮಾರುಕಟ್ಟೆಗೆ ಆವಕವಾಗುತ್ತಿದೆ.

Advertisement

ಗುಜರಾತ್‌, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯಲ್ಲಿ ಮೀನುಗಾರಿಕೆ ನಿಷೇಧವಿದೆ. ಆದರೆ ಈ ಸಮಯದಲ್ಲಿ ಒಡಿಶಾ, ಆಂಧ್ರ, ತಮಿಳುನಾಡು ವ್ಯಾಪ್ತಿಯಲ್ಲಿ ನಿಷೇಧವಿರುವುದಿಲ್ಲ. ಕರ್ನಾಟಕ ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭದ ಸಮಯದಲ್ಲಿ ಅಲ್ಲಿ ನಿಷೇಧವಿರುತ್ತದೆ.

ಒಡಿಶಾದಿಂದ ಬೊಳಂಜೀರ್‌, ಬೂತಾಯಿ ಮತ್ತು ಸಣ್ಣ ಗಾತ್ರದ ಬಂಗುಡೆ, ಆಂಧ್ರಪ್ರದೇಶದಿಂದ ಬೂತಾಯಿ ಮತ್ತು ಸಣ್ಣ ಬಂಗುಡೆ, ತಮಿಳುನಾಡಿನಿಂದ ಅಲ್ಪ ಪ್ರಮಾಣ ದಲ್ಲಿ ಬೂತಾಯಿ ಮೀನನ್ನು ತರಿಸಲಾ ಗುತ್ತದೆ. ಪ್ರಸ್ತುತ ತೂಫಾನ್‌ ಅಗದೇ ಮೀನು ಸಿಗುವುದು ಕಡಿಮೆ. ಅಲ್ಪ ಪ್ರಮಾಣದಲ್ಲಿ ಸಿಗಡಿ ದೊರೆಯುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸುತ್ತಾರೆ. ಮಳೆಗಾಲದಲ್ಲೂ ನಿತ್ಯ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ.

ದರ ಹೆಚ್ಚಳ
ಪ್ರತಿಯೊಂದು ತಳಿಯ ಮೀನಿಗೂ ಕಳೆದ ಎರಡು ತಿಂಗಳನ್ನು ಹೋಲಿಸಿ ದರೆ ದರ ವಿಪರೀತ ಹೆಚ್ಚಳವಾಗಿದೆ. ಸಣ್ಣ ಗಾತ್ರದ ಬಂಗುಡೆ 25 ಕೆಜಿಯ (1ಕೆ.ಜಿ. ತೂಕದಲ್ಲಿ 16 -18 ಮೀನು) ಒಂದು ಬಾಕ್ಸ್‌ಗೆ 4,000 ರೂಪಾಯಿಗೆ ಮಾರಾಟವಾಗುತ್ತದೆ. ಬೂತಾಯಿ 5,500-6,000 ರೂ ಇದ್ದು, 1 ಕೆ.ಜಿ.ಯಲ್ಲಿಲ್ಲಿ 20 -22 ಮೀನುಗಳು ಇರುತ್ತವೆ. ತಾಜಾ ಬೊಳಂಜೀರ್‌ ಇದ್ದರೆ ಕೆ.ಜಿ.ಗೆ 150-160 ರೂ.ಗೆ ಮಾರಾಟವಾಗುತ್ತಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಹೊರರಾಜ್ಯದ ಮೀನನ್ನು ತಂದು ಮಾರಾಟ ಮಾಡಲಾಗುತ್ತದೆ. ಈಗ ಆಂಧ್ರಪ್ರದೇಶ ,ಒಡಿಶಾ, ತಮಿಳುನಾಡಿನಿಂದ ಮೀನುಗಳು ಬರುತ್ತಿದೆ. ಈ ಬಾರಿ ಮೀನು ಕಡಿಮೆಯಾಗಿ ದರ ಹೆಚ್ಚಿದೆ. ಇಲ್ಲಿನ ನಾಡದೋಣಿಗೆ ಮೀನುಗಳು ದೊರೆತಾಗ ಹೊರರಾಜ್ಯದ ಮೀನುಗಳಿಗೆ ಬೇಡಿಕೆ ಇಳಿಮುಖವಾಗುತ್ತದೆ.
-ದಿನೇಶ್‌ ಜಿ. ಸುವರ್ಣ, ಮೀನು ವ್ಯಾಪಾರಸ್ಥರು, ಮಲ್ಪೆ

Advertisement

ಮಲ್ಪೆ ಫಿಶ್‌ಟ್ರೇಡ್‌ ಸೆಂಟರಿನಲ್ಲಿ ವಹಿವಾಟು
ಈ ಹಿಂದಿನ ವರ್ಷದವರೆಗೆ ಮಳೆಗಾಲದಲ್ಲಿ ಬಂದರಿನ ಒಳಗೆಯೇ ಹೊರರಾಜ್ಯದ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಈ ಬಾರಿ ಬಂದರಿನ ಹೊರಗೆ ಮೀನುಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಮಲ್ಪೆ ಫಿಶ್‌ಟ್ರೇಡ್‌ ಸೆಂಟರ್‌ ತೆರೆಯಲಾಗಿದ್ದು, ಹೊರರಾಜ್ಯದ ಮೀನುಗಳನ್ನು ಇಲ್ಲೇ ರಖಂ ಆಗಿ ವಿಲೇವಾರಿ ಮಾಡಲಾಗುತ್ತದೆ.
-ವಿನಯ ಕರ್ಕೇರ, ಕಾರ್ಯದರ್ಶಿ, ಮೀನು ವ್ಯಾಪಾರಸ್ಥರ ಸಂಘ, ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next