Advertisement

ಸಾಂಪ್ರದಾಯಿಕ, ಪರಿಸರಸ್ನೇಹಿ ಗೂಡುದೀಪ ರಚಿಸಿದ ಚಿಣ್ಣರು

04:21 PM Oct 16, 2017 | |

ನಗರ: ಹಬ್ಬಗಳ ಆಚರಣೆಯಲ್ಲಿ ಅಬ್ಬರ, ವಿದೇಶಿ ಪ್ರಭಾವದ ಕಾರಣ ಕಣ್ಣು ಕೋರೈಸುವ, ಪರಿಸರಕ್ಕೆ ಹಾನಿ ಮಾಡುವ ಬೆಳಕು-ಅಲಂಕಾರಗಳೇ ಜಾಸ್ತಿಯಾಗುತ್ತಿರುವ ಈ ದಿನಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಲಯನ್ಸ್‌ ಹಾಗೂ ರೋಟರಿ ಕ್ಲಬ್‌ ಪರಿಸರ ಸ್ನೇಹಿ ಸಾಂಪ್ರದಾಯಿಕ ಗೂಡುದೀಪ ರಚನಾ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದೆ.

Advertisement

ಮೂರನೇ ವರ್ಷ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರದಲ್ಲಿ ತಾಲೂಕಿನ ವಿವೇಕಾನಂದ, ಸುದಾನ, ಭಕ್ತಕೋಡಿ ಶಾಲೆ, ಹಾರಾಡಿ, ನೆಲ್ಲಿಕಟ್ಟೆ, ಸಾಂದೀಪನಿ, ಬೆಥನಿ, ಸರ್ವೆ, ಎಸ್‌ಜಿಎಂ, ಸಂತ ಫಿಲೋಮಿನಾ, ಸಂತ ವಿಕ್ಟರ್ ಮುಂತಾದ ಶಾಲೆಗಳಿಂದ ಅ. 14ರಂದು 60 ವಿದ್ಯಾರ್ಥಿಗಳು, ಅ. 15ರಂದು 40 ವಿದ್ಯಾರ್ಥಿಗಳು ಪಾಲ್ಗೊಂಡು ಪರಿಸರಸ್ನೇಹಿ, ಸಾಂಪ್ರದಾಯಿಕ ಗೂಡುದೀಪ ರಚನೆಯ ಅನುಭವವನ್ನು ಪಡೆದುಕೊಂಡಿದ್ದಾರೆ.

ಇವರಿಗೆ ಹಂಟ್ಯಾರು ಸರಕಾರಿ ಶಾಲೆಯ ಶಿಕ್ಷಕಿ ಯಶೋದಾ ಪಿ. ನೇತೃತ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿದ್ಯಾಸಂಸ್ಥೆಗಳ ಶಿಕ್ಷಕರಾದ ಹರಿಣಾಕ್ಷಿ ವೀರಮಂಗಲ, ಶೋಭಾ ವೀರಮಂಗಲ, ಹೆಲನ್‌ ಮುಕ್ವೆ, ಜಗದೀಶ್‌ ಕುರಿಯ, ಕವಿತಾ ವೈ. ವೀರಮಂಗಲ, ವನಿತಾ ಮುಂಡೂರು, ಮೇಬಲ್‌ ಡಿಸೋಜ ಪಾಪೆಮಜಲು, ವಸಂತಿ ಅಂಕತ್ತಡ್ಕ, ವನಿತಾ, ಸಿಆರ್‌ಪಿ ದೇವಪ್ಪ, ಶ್ರೀನಿವಾಸ್‌ ಎಚ್‌. ಮಾಹಿತಿ, ತರಬೇತಿಯನ್ನು ನೀಡಿದ್ದಾರೆ. 

ಕ್ರಮ ಬದಲಾಗಿದೆ
ಹಿಂದೆ ಉದ್ದದ ಬಿದಿರಿನಲ್ಲಿ ಸಾಂಪ್ರದಾಯಿಕ ಗೂಡುದೀಪವನ್ನು ರಚಿಸಿ ಹಣತೆಯನ್ನು ಅಳವಡಿಸಿ ರಾಟೆಯ ಬಳಕೆಯೊಂದಿಗೆ ದೀಪ ಸಂಜೆ ಉರಿಸಿ ಬೆಳಗ್ಗೆ ಇಳಿಸುವ ಕ್ರಮವನ್ನು ಅನುಸರಿಸಲಾಗುತ್ತಿತ್ತು. ಇಂತಹ ಕ್ರಮ ದೀಪಾವಳಿ ದಿನದಿಂದ ಆರಂಭಗೊಂಡು ದೀಪದ ಅಮಾವಾಸ್ಯೆ ತನಕ ಅನುಸರಿಸಲಾಗುತ್ತಿತ್ತು. ಅದೀಗ ಮರೆಯಾಗುತ್ತಿದೆ. ಸಾಂಪ್ರದಾಯಿಕ ಗೂಡುದೀಪಗಳ ರಚನೆ ಮತ್ತು ಬಳಕೆಯ ಅನಿವಾರ್ಯತೆಯನ್ನು ಮಕ್ಕಳಿಗೆ
ಕಾರ್ಯಾಗಾರದ ಮೂಲಕ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ ಎನ್ನುವುದು ಮುಖ್ಯ ತರಬೇತುದಾರೆ ಯಶೋದಾ ಅವರ ಅಭಿಪ್ರಾಯ.

ನನ್ನ ಪಾಲಿಗೆ ವಿಶೇಷ
ಪೇಪರ್‌, ಬಿದಿರು, ನೂಲುಗಳನ್ನು ಬಳಸಿ ಅಂಗಡಿಗಳಲ್ಲಿ ಸಿಗುವುದಕ್ಕಿಂತಲೂ ಆಕರ್ಷಕ ಗೂಡು ದೀಪಗಳನ್ನು ತಯಾರಿಸಬಹುದು ಎಂಬುದನ್ನು ಕಾರ್ಯಾಗಾರದಲ್ಲಿ ಅರಿತುಕೊಂಡಿದ್ದೇನೆ. ಈ ಬಾರಿಯ ದೀಪಾವಳಿ ನನ್ನ ಪಾಲಿಗೆ ವಿಶೇಷವಾಗಲಿದೆ.
ಪಾರ್ವತಿ, ಶಿಬಿರಾರ್ಥಿ

Advertisement

ಈ ಬಾರಿ ಪರಿಸರಸ್ನೇಹಿ ಗೂಡುದೀಪ
ಎರಡು ದಿನಗಳ ರಜೆಯಲ್ಲಿ ಉತ್ತಮ ಶಿಬಿರದಲ್ಲಿ ಪಾಲ್ಗೊಂಡ ಖುಷಿಯಿದೆ. ಮುಖ್ಯವಾಗಿ ನಮ್ಮ ಮನೆಗಳಲ್ಲಿ ಹಿಂದೆ ಬಿದಿರಿನಿಂದ ರಚಿಸುತ್ತಿದ್ದ ಗೂಡುದೀಪಗಳ ಕುರಿತು ತಿಳಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಗೂಡುದೀಪಗಳೊಂದಿಗೆ ಈ ಬಾರಿಯ ದೀಪಾವಳಿಯನ್ನು ಆಚರಿಸಬೇಕೆಂದಿದ್ದೇನೆ ಮತ್ತು ನನ್ನ ಸ್ನೇಹಿತರಿಗೂ ತಿಳಿಸಿಕೊಡುತ್ತೇನೆ.
ಪರಮೇಶ್ವರ, ಶಿಬಿರಾರ್ಥಿ

ಪರಿಸರ ಉಳಿಸುವ ಜಾಗೃತಿ
ಆಧುನಿಕ ರಂಗಿನ ಮಧ್ಯೆ ಮಕ್ಕಳು ಕಳೆದುಹೋಗಬಾರದು. ಬೆಳಕಿನ ಹಬ್ಬದ ಆಚರಣೆಯೊಂದಿಗೆ ಪರಿಸರವನ್ನು ಉಳಿಸುವ ಜಾಗೃತಿಯನ್ನೂ ಹೊಂದಿರಬೇಕು. ಕಳೆದ 12 ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ರಚನೆಯ ಕುರಿತು ತರಬೇತಿ ನೀಡುತ್ತಿದ್ದೇನೆ. ನೂರಕ್ಕೆ ಮಿಕ್ಕಿ ಮಕ್ಕಳು ಪಾಲ್ಗೊಂಡಿದ್ದರೂ ತರಬೇತಿ ನೀಡುತ್ತಿದ್ದೆವು.
ಯಶೋದಾ
ಗೂಡುದೀಪ ತರಬೇತುದಾರ ಶಿಕ್ಷಕಿ

ಏನೆಲ್ಲ ಕಲಿತರು?
ಗೂಡುದೀಪ ರಚನೆಯಲ್ಲಿ ಆಧುನಿಕ ಹಾಗೂ ಸಾಂಪ್ರದಾಯಿಕ ಎಂಬ ವಿಭಾಗವಿದೆ. ಸಿಡಿ, ಬಲ್ಬ್, ಆಲಂಕಾರಿಕ ವಸ್ತುಗಳನ್ನು ಬಳಸಿ ರಚಿಸುವುದು ಆಧುನಿಕ ಶೈಲಿಯಾದರೆ, ಬಿದಿರು, ಬಣ್ಣದ ಕಾಗದ, ನೂಲು, ಮಣಿ, ಕಾಳು, ಬೀಜ, ಐಸ್‌ಕ್ರೀಂ, ಕಡ್ಡಿ, ಭತ್ತದ ತೆನೆ ಮುಂತಾದ ಪರಿಸರಕ್ಕೆ ಹಾನಿ ಮಾಡದ ವಸ್ತುಗಳನ್ನು ಬಳಸಿಕೊಂಡು ವಿವಿಧ ವಿನ್ಯಾಸಗಳೊಂದಿಗೆ ಗೂಡುದೀಪ ತಯಾರಿಸುವುದು ಸಾಂಪ್ರದಾಯಿಕ ಶೈಲಿ. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಶಿಬಿರಾರ್ಥಿಗಳಿಗೆ ಸಾಂಪ್ರದಾಯಿಕ ಶೈಲಿಯ ಗೂಡುದೀಪ ರಚಿಸುವ ಕುರಿತು ತಿಳಿಸಿಕೊಡಲಾಗಿದೆ.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next