Advertisement

ಟೆಸ್ಟ್‌  ಕ್ರಿಕೆಟ್‌ನ ಸ್ಥಿತಿಯೇ ಸಾಂಪ್ರದಾಯಿಕ ಚೆಸ್‌ಗೂ ಬರಬಹುದು!

12:12 AM Dec 26, 2020 | mahesh |

ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥ್‌ ಆನಂದ್‌ ಸಾಂಪ್ರದಾಯಿಕ ಚದುರಂಗದಾಟವನ್ನು ಮತ್ತೆ ಆಕರ್ಷಕಗೊಳಿಸಬೇಕಾದ ಅಗತ್ಯವಿದೆ ಎನ್ನುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಹಠಾತ್ತನೆ ಜನಪ್ರಿಯವಾಗಿರುವ ತ್ವರಿತ ವೇಗದ ರ್ಯಾಪಿಡ್‌ ಚೆಸ್‌ ಸಾಂಪ್ರದಾಯಿಕ ಚೆಸ್‌ ಅನ್ನು ಹಿನ್ನೆಲೆಗೆ ತಳ್ಳುವ ಅಪಾಯವಿದೆಯೇ? ಸಾಂಪ್ರದಾಯಿಕ ಚೆಸ್‌ನ ಭವಿಷ್ಯ ಹಾಗೂ ತಮ್ಮ ಕುರಿತು ನಿರ್ಮಾಣವಾಗುತ್ತಿರುವ ಬಯೋಪಿಕ್‌ ಬಗ್ಗೆ ಅವರ ಮನದಾಳದ ಮಾತುಗಳು ಇಲ್ಲಿವೆ. .

Advertisement

ಸಾಂಕ್ರಾಮಿಕದ ಸಮಯದಲ್ಲಿ ಚೆಸ್‌ ಈ ಪರಿ ಬೆಳೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. “ಯಾವ ತ್ತಾದರೂ ಸಮಯ ಮಾಡಿಕೊಂಡು ಚೆಸ್‌ ಆಡುತ್ತೇನೆ’ ಎನ್ನುತ್ತಿದ್ದ ಅಸಂಖ್ಯಾತ ಜನರಿಗೆ, ಸಮಯವೇ ಸಿಗುತ್ತಿರಲಿಲ್ಲ. ಆದರೆ, ಈ ವರ್ಷ ಅವರಿಗೆ ಹಠಾತ್ತನೆ ಬಹಳ ಬಿಡುವು ಸಿಕ್ಕಿಬಿಟ್ಟಿತು. ಪರಿಣಾಮವಾಗಿ ಕ್ರೀಡೋಪಕರಣ ಅಂಗಡಿಗಳಲ್ಲಿ ಚೆಸ್‌ನ ಸೆಟ್‌ಗಳು, ಕ್ಲಾಕ್‌ಗಳು ಮತ್ತು ಈ ಆಟಕ್ಕೆ ಸಂಬಂಧಿಸಿದ ಪುಸ್ತಕಗಳು ಖಾಲಿಯಾಗತೊಡ ಗಿವೆ. ಚೆಸ್‌ನಲ್ಲಿ ಮತ್ತೆ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಎಷ್ಟೊಂದು ಬೆಳೆದಿದೆಯೆಂದರೆ, ಅದರ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಏಕೆಂದರೆ, ಜನಕ್ಕೆ ಅನ್ಯ ಪರ್ಯಾಯಗಳಿದ್ದರೂ ಅವರೇಕೆ ಚೆಸ್‌ನತ್ತ ವಾಲುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಹಠಾತ್ತನೆ ಈ ವರ್ಷ ಚದುರಂಗದಾಟ ಕೂಲ್‌ ಆಗಿ ಬದಲಾಗಿದೆ.

ಟೆಸ್ಟ್‌ ಕ್ರಿಕೆಟ್‌ ಮತ್ತು ಸಾಂಪ್ರದಾಯಿಕ ಚೆಸ್‌
ಈ ವರ್ಷ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲಸನ್‌ ಅತ್ಯಂತ ತ್ವರಿತ ಮಾದರಿಯ “ರ್ಯಾಪಿಡ್‌ ಚೆಸ್‌’ ಆಯೋಜಿಸಿ, ಆ ಪಂದ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿದ್ದಾರೆ.ಇದನ್ನೆಲ್ಲ ನೋಡಿ ಪತ್ರಕರ್ತರು, “ರ್ಯಾಪಿಡ್‌ ಚೆಸ್‌ನ ಮುಂದೆ ದೀರ್ಘಾವಧಿಯ ಸಾಂಪ್ರದಾಯಿಕ ಚೆಸ್‌ಗೆ ಭವಿಷ್ಯವಿದೆಯೇ?’ ಎಂಬ ಪ್ರಶ್ನೆ ಕೇಳುತ್ತಾರೆ.

ಸತ್ಯವೇನೆಂದರೆ, ನನ್ನಂಥವರು ಮತ್ತು ನನ್ನ ತಲೆಮಾರಿನ ಜನರಿಗೆ ಇದೊಂದು ನಷ್ಟದಂತೆಯೇ ಕಾಣಿಸುತ್ತದೆ. “ಅತ್ಯಂತ ವೇಗವಾಗಿ ಮುಗಿಯುವ ಆಟವನ್ನು ಅದ್ಹೇಗೆ ಎಂಜಾಯ್‌ ಮಾಡಲು ಸಾಧ್ಯ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆದರೂ ಒಟ್ಟಾರೆ ಚದುರಂಗದಾಟದ ಜನಪ್ರಿಯತೆ ಹೆಚ್ಚುತ್ತಿದೆಯಾದ್ದರಿಂದ, ಈ ಬಗ್ಗೆ ದೂರಲು ನನಗೇಕೋ ಆಗುತ್ತಿಲ್ಲ. ಕೆಲವು ಸಂದರ್ಶನಗಳಲ್ಲಿ ಮ್ಯಾಗ್ನಸ್‌, “ಸಾಂಪ್ರದಾಯಿಕ ಚೆಸ್‌ನಲ್ಲಿ ಕೆಲವು ಮೂಲಭೂತ ಸಮಸ್ಯೆಗಳಿವೆ’ ಎನ್ನುತ್ತಾರೆ, ಅವರ ಪ್ರಕಾರ ಕಂಪ್ಯೂಟರ್‌ಗಳು ಸಾಂಪ್ರದಾಯಿಕ ಚೆಸ್‌ನ ವ್ಯಾಪ್ತಿಯನ್ನು ಸಂಕುಚಿತಗೊಳಿಸಿಬಿಟ್ಟಿದೆ.

ಹಾಗಾದರೆ, ಕೇವಲ ತ್ವರಿತ ವೇಗದ ರ್ಯಾಪಿಡ್‌ ಚೆಸ್‌ ಅಷ್ಟೇ ಉಳಿದುಬಿಟ್ಟರೆ ನಾನು ಖುಷಿಯಾಗಿರುತ್ತೇನಾ? ನನಗಂತೂ ತಿಳಿಯದು. ಆದರೆ ಇದೇ ವೇಳೆಯಲ್ಲೇ ಮ್ಯಾಗ್ನಸ್‌ ಅವರು, ಸಾಂಪ್ರದಾಯಿಕ ಚದುರಂಗದಾಟದ ಭವಿಷ್ಯ ಅನಿಶ್ಚಿತವಾಗಿದೆ ಎನ್ನುತ್ತಿದ್ದಾರೆ. ಇದು ಕಳವಳ ಹುಟ್ಟಿಸುವ ಸಂಗತಿಯೇ? ಖಂಡಿತ ಹೌದು.

Advertisement

ಹಾಗೆಂದು ಈ ವಿಷಯವನ್ನು ಈ ಹಿಂದೆ ಬೇರಾರೂ ಯೋಚಿಸಿಲ್ಲ ಎಂದೇನೂ ಅಲ್ಲ. ಒಟ್ಟಲ್ಲಿ ಇನ್ನೂ 10 ವರ್ಷಗಳಲ್ಲಿ, ಮುಂದಿನ ತಲೆಮಾರಿನ ಆಟಗಾರರು ಏನು ಮಾಡಲಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಕ್ರಿಕೆಟ್‌ನಲ್ಲೇ ನೋಡಿ, ಟೆಸ್ಟ್‌ ಕ್ರಿಕೆಟ್‌ಗೆ ಈ ಹಿಂದೆ ಇದ್ದ ಮಾನ್ಯತೆ, ಮನ್ನಣೆ ಮತ್ತೆಂದೂ ಅದಕ್ಕೆ ದಕ್ಕುವುದಿಲ್ಲ. ಚೆಸ್‌ನಲ್ಲೂ ಇದೇ ರೀತಿಯೇ ಆಗಬಹುದು ಎನಿಸುತ್ತದೆ. ಆದರೂ, ಸಾಂಪ್ರದಾಯಿಕ ಚೆಸ್‌ನಲ್ಲಿ ಕೆಲವು ಸಮಸ್ಯೆಗಳಿವೆ ಎನ್ನುವುದಂತೂ ಸತ್ಯ, ಈ ವಿಚಾರದಲ್ಲಿ ಮ್ಯಾಗ್ನಸ್‌ರ ಅಭಿಪ್ರಾಯ ಸಂಪೂರ್ಣ ತಪ್ಪೇನೂ ಅಲ್ಲ. ಈ ಕಾರಣಕ್ಕಾಗಿಯೇ, ಸಾಂಪ್ರದಾಯಿಕ ಚದುರಂಗದಾಟವನ್ನೂ ಮತ್ತೆ ಆಕರ್ಷಕಗೊಳಿಸುವ ಅಗತ್ಯವಿದೆ.

ಕೆಲವು ಆಟಗಾರರು ಈಗಾಗಲೇ ಯೂಟ್ಯೂಬ್‌ ನಲ್ಲಿ ಚೆಸ್‌ ಪಂದ್ಯಾವಳಿಗಳ ಪ್ರಸಾರ ಆರಂಭಿಸಿದ್ದಾರೆ. ನಾನೂ ಹೀಗೆ ಮಾಡಲು ಬಯಸುತ್ತಿದ್ದೇನೆಯೇ ಎಂದು ಪ್ರಶ್ನಿಸಲಾಗುತ್ತದೆ. ಒಂದು ವಿಷಯ ಹೇಳಲು ಬಯಸುತ್ತೇನೆ. ನಾನು ಹೊಸತನವನ್ನು ವಿರೋಧಿಸುವುದಿಲ್ಲ. ಮುಂದೆ ಎಂದಾದರೂ ನಾನೂ ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದೇನೋ. ಇತ್ತೀಚಿನ ದಿನಗಳಲ್ಲಿ ಸ್ಟ್ರೀಮಿಂಗ್‌ ಸೇವೆಗಳಿಂದಾಗಿ ಚೆಸ್‌ ಪಂದ್ಯಾವಳಿಗಳು ಎಲ್ಲರಿಗೂ ನಿಲುಕುವಂತಾಗಿವೆ. ಎಲ್ಲವನ್ನೂ ಕಾದು ನೋಡಬೇಕಷ್ಟೇ. ಆಗಲೇ ಹೇಳಿದಂತೆ, ಭವಿಷ್ಯದ ಬಗ್ಗೆ ಊಹಿಸುವುದನ್ನು ನಾನು ನಿಲ್ಲಿಸಿಬಿಟ್ಟಿದ್ದೇನೆ.

ಬಯೋಪಿಕ್‌, ನನಗೂ ಕುತೂಹಲವಿದೆ
ಹಿಂದೆಯೂ ನನ್ನ ಕುರಿತು ಬಯೋಪಿಕ್‌ ನಿರ್ಮಿಸಲು ಅನೇಕರು ಆಸಕ್ತಿ ತೋರಿಸಿದ್ದರು. ಆದರೆ ಈಗೇಕೆ ನಾನು ಒಪ್ಪಿಕೊಂಡೆ ಎಂಬ ಪ್ರಶ್ನೆ ಏಳುವುದು ಸಹಜವೇ. ಎಲ್ಲದಕ್ಕೂ ಕಾಲ ಕೂಡಿ ಬರುತ್ತದೆ ಎಂದು ಭಾವಿಸುವವನು ನಾನು. ಅನೇಕರು ನನ್ನ ಕುರಿತು ಬಯೋಪಿಕ್‌ ನಿರ್ಮಿಸಲು ಆಸಕ್ತಿ ತೋರಿ ಮುಂದೆ ಬಂದಿದ್ದರಾದರೂ, ಮಾತುಕತೆಗಳು ಆರಂಭಿಕ ಹಂತವನ್ನು ದಾಟಲೇ ಇಲ್ಲ. ಆದರೆ ಈ ಬಾರಿಯ ಚಿತ್ರತಂಡ ಸೀರಿಯಸ್‌ನೆಸ್‌ ತೋರಿಸಿದೆ. ನನಗನ್ನಿಸುತ್ತದೆ ಅವರು ತಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಲಿದ್ದಾರೆ ಅಂತ.

ಕಳೆದ ವರ್ಷ ನಾನು “ಮೈಂಡ್‌
ಮಾಸ್ಟರ್‌’ ಎನ್ನುವ ಜೀವನಾನುಭವದ ಪುಸ್ತಕ ಬರೆದೆ. ಈ ಕಾರಣ ಕ್ಕಾಗಿಯೇ ಈಗ ಸಿನೆಮಾ ನಿರ್ಮಾಣವಾಗುವ ಟೈಮಿಂಗ್‌ ಕೂಡ ಸರಿಯಾಗಿದೆ ಎನಿಸುತ್ತಿದೆ. ಬಯೋಪಿಕ್‌ ಕುರಿತು ನನಗೆ ಉತ್ಸಾಹವೂ ಇದೆ, ಜತೆಗೆ ಸ್ವಲ್ಪ ಆತಂಕವೂ ಇದೆ. ಏಕೆಂದರೆ, ಸ್ಕ್ರೀನ್‌ ಮೇಲೆ ಏನು ಬರಲಿದೆ ಎಂಬ ಕುತೂಹಲ ಇದ್ದೇ ಇದೆ.

ಇನ್ನು ಕಥೆ ಹೇಗಿರಬೇಕು ಎನ್ನುವ ವಿಚಾರದಲ್ಲಿ ಸಿನೆಮಾ ತಂಡವು ನನ್ನ ಬಳಿ ಮಾತನಾಡಿದೆಯಾದರೂ ಚಿತ್ರ ಹೇಗೆ ಮೂಡಿಬರಬೇಕು, ಒಟ್ಟಾರೆ ಪ್ರೇಕ್ಷಕ ವರ್ಗಕ್ಕೆ ಅರ್ಥವಾಗುವಂತೆ ಕಥೆ ಹೇಗೆ ರೂಪಿಸಬೇಕೆಂದು ಅವರಿಗೂ ಒಂದು ಐಡಿಯಾ ಇರುತ್ತದೆ. ಅದಕ್ಕೆ ತಕ್ಕಂತೆ ನನ್ನ ಜೀವನದಲ್ಲಿನ ಕೆಲವು ಇಂಟ್ರೆಸ್ಟಿಂಗ್‌ ವಿಷಯಗಳನ್ನು ಅವರು ಆಯ್ದುಕೊಳ್ಳಲು ಪ್ರಯತ್ನಿಸಬಹುದು. ಏನೇ ಆದರೂ ಈ ಕಥೆ ಅಥೆಂಟಿಕ್‌ ಆಗಿ ಮೂಡಿಬರಬೇಕು ಎನ್ನುವುದು ನನ್ನ ಆಸೆ.

ಇನ್ನು ಚದುರಂಗದಾಟದ ಪಟ್ಟುಗಳು ಮತ್ತು ಮಹತ್ವವನ್ನು, ಆಟದ ಸಮಯದಲ್ಲಿನ ತೀವ್ರತೆಯನ್ನು ಅವರಿಗೆ ಸ್ಪಷ್ಟವಾಗಿ ಮನದಟ್ಟು ಮಾಡಲು ನಾನು ಸಹಾಯ ಮಾಡುತ್ತೇನೆ. ಉದಾಹರಣೆಗೆ, ಚೆಸ್‌ನಲ್ಲಿ ನಿರಂತರವಾಗಿ ಹಲವಾರು ಗಂಟೆಗಳವರೆಗೆ ಗಮನ ಕೇಂದ್ರೀಕರಿಸುವುದು ಇದೆಯಲ್ಲ ಅದೊಂದು ದೊಡ್ಡ ಸವಾಲು. ಈ ರೀತಿಯ ವಿಷಯಗಳನ್ನು ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ನಡೆದಿದೆ. ಈ ಚಿತ್ರವನ್ನು ವೀಕ್ಷಿಸುವವರಿಗೆ, ಚೆಸ್‌ ಪಂದ್ಯ ನಡೆಯುವ ವೇಳೆ ವಾತಾವರಣ ಹೇಗಿರುತ್ತದೆ, ಆಟಗಾರ ಎದುರಿಸುವ ಸವಾಲುಗಳು ಎಂಥದ್ದು ಎನ್ನುವ ಒಂದಷ್ಟು ಐಡಿಯಾ ಸಿಗಬೇಕೆಂಬುದು ನನ್ನ ಭಾವನೆ. ಇನ್ನು ಸಿನೆಮಾದಲ್ಲಿ ನನ್ನ ವೈಯಕ್ತಿಕ ಆಯಾಮವನ್ನೂ ತೋರಿಸಲಾಗುತ್ತದೆಯಂತೆ, ಅದು ಕಷ್ಟದ ಕೆಲಸವೆಂದು ನನಗನ್ನಿಸುತ್ತದೆ. ಏಕೆಂದರೆ, ನಾನು ಸಾಮಾನ್ಯವಾಗಿ ಬಹಳ ಖಾಸಗಿ ವ್ಯಕ್ತಿ.

ವಿಶ್ವನಾಥನ್‌ ಆನಂದ್‌ , ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next