ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸಾಂಪ್ರದಾಯಿಕವಾಗಿ ಉಡುಗೆಯನ್ನು ಹಾಕಿಕೊಂಡು ಸಡಗರದಿಂದ ವಿಶೇಷವಾಗಿ ಆಯುಧ ಪೂಜೆಯನ್ನು ಆಚರಿಸಿದರು.
ಜನ ಸ್ನೇಹಿ ಪೊಲೀಸ್ ಠಾಣೆಯಲ್ಲಿ ಎನಿಸಿಕೊಂಡಿದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಸರಾ ಪ್ರಯುಕ್ತ ಖಾಕಿ ಮಾಯವಾಗಿ ಗ್ರಾಮೀಣ ಭಾಗದಲ್ಲಿನ ಪಂಚೆ, ಟವೆಲ್‌ಗಳದ್ದೇ ಕಾರುಬಾರು. ಈಗ ಠಾಣೆಯ ಎಸ್.ಐ ಗಿರೀಶ್ ಮತ್ತು ತಂಡ ರಾಜ್ಯದಲ್ಲಿಯೇ ಮಾದರಿ ಎನಿಸಿದೆ. ಸಾರ್ವಜನಿಕರಿಗೆ ಕುತೂಹಲ: ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸ್ವತ್ಛಗೊಳಿಸಿ, ಗನ್, ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಹೂವುಗಳಿಂದ ಅಲಂಕಾರ ಮಾಡಿಕೊಂಡಿ. ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಬಿಳಿ ಪಂಚೆ,ಟವೆಲ್, ಹಸರು ಬಣ್ಣದ ಅಂಗಿಯುನ್ನು ತೊಟ್ಟು ಆಯುಧ ಪೂಜೆಯನ್ನು ಮಾಡಿದರು.
ಸದಾಕಾಲ ಖಾಕಿಯಿಂದಲೇ ತುಂಬಿರುತ್ತಿದ್ದ ಪೊಲೀಸ್ ಠಾಣೆಯಲ್ಲಿ ಪಂಚೆ, ಟವೆಲ್‌ಗಳಿಂದ ಇರುವ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಕುತೂಹಲದಿಂದ ಧಾವಿಸಿ ಠಾಣೆ ಸಿಬ್ಬಂದಿಗಳನ್ನು ಮಾತನಾಡಿಸಿಕೊಂಡು ಅವರು ನೀಡಿದ ಸಿಹಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿಯೂ ವಾರದಲ್ಲಿ ಒಂದು ದಿನ ಇದೇ ಮಾದರಿಯೇ ಸಮವಸ್ತ್ರವನ್ನು ತೊಟ್ಟು ಕರ್ತವ್ಯ ನಿರ್ವಸುವ ಮೂಲಕ ಠಾಣೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿಮಾಡಿ ಎಂದು ಸಾರ್ವಜನಿಕರು ಸಂತೋಷದಿಂದಲೇ ಮನವಿ ಮಾಡಿದರು.
ನಾವು ರೈತರ ಮಕ್ಕಳು: ಠಾಣೆಯ ಉಪ ನಿರೀಕ್ಷಕಗಿರೀಶ್ ಮಾತನಾಡಿ, ನಾವು ರೈತರ ಮಕ್ಕಳಾಗಿದ್ದು, ಕರ್ತವ್ಯ ನಿರ್ವಹಣೆ ಮಾಡುವುದಕ್ಕಾಗಿ ಸರ್ಕಾರ ನಿಗದಿ ಮಾಡಿರುವ ಖಾಕಿ ಸಮವಸ್ತ್ರ ಧರಿಸುತ್ತೇವೆ, ಆದರೆ, ನಮ್ಮ ಮನಸಿನಲ್ಲಿ ಎಂದಿಗೂ ಹಸಿರು ಉಸಿರಾಗಿರಿತ್ತದೆ. ಸದಾ ಕಾಲ ಹಗಲು ರಾತ್ರಿ ಎನ್ನದೇ ಕರ್ತವ್ಯ ಮಾಡುವುದು ನಮ್ಮ ಇಲಾಖೆಯಲ್ಲಿ ಸಾಮಾನ್ಯವಾಗಿದ್ದು, ಒಂದು ದಿನವಾದರೂ ನಾವು ರೈತರ ಮಕ್ಕಳಂತೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸೋಣ ಮತ್ತು ಹಬ್ಬವನ್ನು ಆಚರಿಸೋಣ ಎಂದು ನಮ್ಮ ಸಿಬ್ಬಂದಿ ತೀರ್ಮಾನ ಮಾಡಿದ್ದರು. ಅದರಂತೆ ನಾವು ಆಯುಧ ಪೂಜೆಯ ಒಂದು ದಿನ ಪೂಜೆಗೆ ಅನುಗುಣವಾಗಿ ವಸ್ತ್ರವನ್ನು ಧರಿಸಿಕೊಂಡಿದ್ದೇವೆ ಎಂದರು.
ಠಾಣೆಯಲ್ಲಿ ಪುರುಷ ಸಿಬ್ಬಂದಿ ಪಂಚೆ, ಟವೆಲ್ ಗಳನ್ನು ಧರಿಸಿದ್ದರೆ ಮಹಿಳಾ ಸಿಬ್ಬಂದಿ ಸೀರೆಯನ್ನು ಧರಿಸಿಕೊಂಡು ಬಂದಿದ್ದರು. ಆಯುಧ ಪೂಜೆಗಾಗಿ ಶೃಂಗರಿಸಿದ್ದರಿಂದ ಠಾಣೆಯು ಮದುವೆ ಮನೆಯಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.