Advertisement

ನೋಡಬನ್ನಿ ಗದುಗಿನ ಸರಕಾರಿ ಕಾಮರತಿ!

03:05 PM Mar 09, 2020 | Suhan S |

ಗದಗ: ಹೋಳಿ ಹಬ್ಬ ಎಂದರೆ ಕಾಮ ದಹನ ಮಾಡಿ, ಪರಸ್ಪರ ಬಣ್ಣದೋಕುಳಿ ಆಡುವುದು ಸಾಮಾನ್ಯ. ಆದರೆ, ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಸರಕಾರಿ ಕಾಮ-ರತಿಯರು ಭಕ್ತರ ಪಾಲಿಗೆ ಕಲ್ಪವೃಕ್ಷ. ರಂಗ ಪಂಚಮಿಯಂದು ಕಾಮ-ರತಿಯರಿಗೆ ಭಕ್ತರು ಕೆಜಿ ಗಟ್ಟಲೆ ಚಿನ್ನಾಭರಣ ಹಾಕಿ, ಅದ್ದೂರಿಯಾಗಿ ಮೆರವಣಿಗೆ ನಡೆಸುವುದು ಇಲ್ಲಿನ ವಿಶೇಷ.

Advertisement

ನಗರದ ಹೃದಯ ಭಾಗದಲ್ಲಿರುವ ಕಿಲ್ಲಾ ಚಂದ್ರಸಾಲಿ ಬಡಾವಣೆಯಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಪ್ರತಿಷ್ಠಾಪಿಸುವ ಕಾಮ-ರತಿಯರು ಭಕ್ತರ ಆರಾಧ್ಯ ದೈವ. ಅವಿವಾಹಿತರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ, ನಿರುದ್ಯೋಗಿಗಳಿಗೆ ಉದ್ಯೋಗ, ದರಿದ್ರರಿಗೆ ಸಿರಿತನ ಕರುಣಿಸುವ ಕಲ್ಪವೃಕ್ಷ ಎಂಬುದು ಭಕ್ತರ ನಂಬಿಕೆ.

ಮೆರವಣಿಗೆಯಲ್ಲಿ ಕೆಜಿಗಟ್ಟಲೆ ಬಂಗಾರ: ಹೋಳಿ ಹುಣ್ಣಿಮೆಯಂದು ಪ್ರತಿಷ್ಠಾಪಿಸುವ ಕಾಮಣ್ಣ-ರತಿಗೆ 5 ದಿನಗಳ ಕಾಲ ಪ್ರತಿನಿತ್ಯ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತದೆ. ಮೊದಲ ಮೂರು ದಿನಗಳ ಕಾಲ ಕಾಯಿ, ಕರ್ಪೂರ, ಹಣ್ಣು, ಹೋಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಅವಿವಾಹಿತ ಯುವಕರು ರತಿಗೆ ಹಾಗೂ ಯುವತಿಯರು ಮನ್ಮಥನ ಕೈಗೆ ಕಂಕಣ ಕಟ್ಟಿ, ಕಂಕಣ ಭಾಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅದಂತೆ ಸಂತಾನ ಭಾಗ್ಯ ಬಯಸುವವರು ಕಾಮಣ್ಣ ಕೈಗೆ ಬೆಳ್ಳಿಯ ತೊಟ್ಟಿಲು ಕಟ್ಟಿ ನಮಿಸುವುದು ಇಲ್ಲಿನ ಸಂಪ್ರದಾಯವಾಗಿ ಮುಂದುವರಿದಿದೆ. ಸಿರಿತನ ಬೇಡುವವರು 4ನೇ ದಿನ ತಮ್ಮಲ್ಲಿರುವ ಚಿನ್ನದ ತಾಳಿಸರ, ಬಾಜುಬಂದ, ಚಪ್ಪಹಾರ, ಕಿವಿಯೋಲೆ, ಕಡಗ, ಡಾಬು, ನೆಕ್ಲೇಸ್‌ ಮತ್ತಿತರೆ ಬಗೆಯ ಚಿನ್ನದ ಆಭರಣಗಳನ್ನು ದೇವರಿಗೆ ತೊಡಿಸುತ್ತಾರೆ.

5ನೇ ದಿನವಾದ ಪಂಚಮಿಯಂದು ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಆಭರಣಗಳನ್ನು ಪುನಃ ಮಾಲೀಕರಿಗೆ ಒಪ್ಪಿಸಲಾಗುತ್ತದೆ. ದೇವರಿಗೆ ಆಭರಣ ತೊಡಿಸುವುದರಲ್ಲಿ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಎಂಬುದು ಈ ಭಾಗದ ಭಕ್ತರ ಬಲವಾದ ನಂಬಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಚಿನ್ನಾಭರಣ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಕಾಮ-ರತಿಯ ಮೂರ್ತಿಗಳು ಕಟ್ಟಿಗೆ ಮತ್ತು ಮಣ್ಣಿನಿಂದ ಕೂಡಿದ್ದು, ಅವುಗಳ ಸುರಕ್ಷತೆ ದೃಷ್ಟಿಯಿಂದ ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ 20-25 ಕೆ.ಜಿ. ಬಂಗಾರಕ್ಕೆ ಮಿತಿಗೊಳಿಸಲಾಗಿದೆ ಎನ್ನುತ್ತಾರೆ ಸರಕಾರಿ ಕಾಮರತಿ ಸಮಿತಿ ಪ್ರಮುಖ ಪ್ರವೀಣ ಕೆ.ಜಿತೂರಿ.

ಹೀಗೆ ರಂಗ ಪಂಚಮಿಯಂದು ಕೆ.ಜಿ. ಗಟ್ಟಲೆ ನಾನಾ ಬಗೆಯ ಚಿನ್ನಾಭರಣ ಧರಿಸಿ, ಪ್ರಮುಖ ಮಾರ್ಗಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಝಗಮಗಿಸುವ ಬೆಳಕಿನ ಮಧ್ಯೆ ಮಿನುಗುವ ಆಭರಣಗಗಳಲ್ಲಿ ಕಾಮ-ರತಿಯರ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹೀಗಾಗಿ ಮೆರವಣಿಗೆ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನ ಹರಿದುಬರುತ್ತಾರೆ. ಕಾಮ-ರತಿಯರ ಕೃಪೆಯಿಂದ ಸಂತಾನ ಪಡೆದ ದಂಪತಿಗಳು ತಮ್ಮ ಪುಟ್ಟ ಕಂದಮ್ಮಗಳನ್ನು ತಂದು ಮೆರವಣಿಗೆ ಮಧ್ಯೆ ದೇವರ ಮಡಿಲಿಗೆ ಹಾಕಿ, ಭಕ್ತಿಯಿಂದ ನಮಿಸು ದೃಶ್ಯ ನೆರೆದವರನ್ನು ಭಾವ ಪರವಶರನ್ನಾಗಿಸುತ್ತದೆ.

Advertisement

ಕಾಮ-ರತಿಯರಿಗೆ ಚಿನ್ನಾಭರಣ ತೊಡಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ಜನರ ನಂಬಿಕೆ. ಹೀಗಾಗಿ ಶತಮಾನಗಳಿಂದ ಸಂಪ್ರದಾಯವನ್ನು ಆಚರಣೆಯಲ್ಲಿದೆ. ಸರ್ಕಾರಿ ಕಾಮ-ರತಿಯರ ಕೊರಳಲ್ಲಿ ಕೆಜಿಗಟ್ಟಲೆ ಚಿನ್ನಾಭರಣವನ್ನು ಮೆರವಣಿಗೆ ಬಳಿಕ ವಾರಸುದಾರರಿಗೆ ಮರಳಿಸಲಾಗುತ್ತದೆ. ಸರಕಾರಿ ಕಾಮರತಿಗೆ ಸಾಕಷ್ಟು ಬಂಗಾರ ಹಾಕಿ ಮೆರವಣಿಗೆ ಮಾಡುವುದರಿಂದ ಸುಸಜ್ಜಿತ ಪೊಲೀಸರು ಭದ್ರತೆ ಒದಗಿಸುತ್ತಾರೆ.  ಬಾಬಾಸಾ ಡೊಂಗರಸಾ ಖೋಡೆ, ಸರಕಾರಿ ಕಾಮ-ರತಿ ಸಮಿತಿ ಅಧ್ಯಕ್ಷ

154 ವರ್ಷಗಳ ಇತಿಹಾಸ : 1865ರಲ್ಲಿ ಪಕ್ಕದ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಹೊರಸಿನಲ್ಲಿ(ಬಾಣಂತಿಯರನ್ನು ಆರೈಸುವ ಮಂಚ) ಹೊತ್ತು ತಂದಿದ್ದ ರತಿ-ಕಾಮಣ್ಣ ಮೂರ್ತಿಗಳಿಗೆ ಬರೊಬ್ಬರಿ 155 ವರ್ಷ ಸಂದಿವೆ. ಬ್ರಿಟಿಷ್‌ ಸರಕಾರದಲ್ಲಿ ಇಲ್ಲಿನ ಕಾಮ- ರತಿಯರ ಪ್ರತಿಷ್ಠಾಪನೆ, ಮೆರವಣಿಗೆಗಾಗಿ 5 ರೂ. ನೀಡಲಾಗುತ್ತಿತ್ತು. ಹೀಗಾಗಿ ಇದಕ್ಕೆ ಇದಕ್ಕೆ ಸರಕಾರ ಕಾಮಣ್ಣ ಎಂಬ ಖ್ಯಾತಿ ಪಡೆದಿದೆ. ನಗರದಲ್ಲಿ ಕಾಮ-ರತಿಯರ ಮೆರವಣಿಗೆ ಬಳಿಕ ಈ ಭಾಗದಲ್ಲಿ ಕಾಮ ದಹನವಾಗುತ್ತದೆ. ಆ ನಂತರ ಸಾರ್ವಜನಿಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next