Advertisement

ಹಬ್ಬದ ಸೀಸನ್ ಗೆ ಆನ್ ಲೈನ್ ಆಫರ್: ವ್ಯಾಪಾರಿಗಳ ಒಕ್ಕೂಟ ಗರಂ

10:27 AM Sep 09, 2019 | Hari Prasad |

ನವದೆಹಲಿ: ಹಬ್ಬದ ಋತು ಬಂತೆಂದರೆ ಸಾಕು ಎಲ್ಲಾ ಕಡೆ ಆಫರ್ ಗಳ ಭರಾಟೆ. ಎಲೆಕ್ಟ್ರಾನಿಕ್, ಆಭರಣ, ಬಟ್ಟೆಗಳು ಸೇರಿದಂತೆ ಬಹುತೇಕ ಎಲ್ಲಾ ವ್ಯಾಪಾರದಲ್ಲೂ ಗ್ರಾಹಕರಿಗೆ ಭರ್ಜರಿ ಆಫರ್ ಗಳು ದೊರೆಯುವ ಸಮಯ ಇದು. ಆದರೆ ಇತ್ತೀಚಿನ ವರ್ಷಗಳಲ್ಲಿ ಇ-ಕಾಮರ್ಸ್ ಸೈಟುಗಳಲ್ಲಿ ಗ್ರಾಹಕರಿಗೆ ಆಫರ್ ಗಳ ಬಂಪರ್. ಅದರಲ್ಲಿ ಭರ್ಜರಿ ಡಿಸ್ಕೌಂಟ್, ಕ್ಯಾಶ ಬ್ಯಾಕ್ ಸೇರಿದಂತೆ ಹಲವಾರು ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

Advertisement

ಇದೀಗ ಇ-ಕಾಮರ್ಸ್ ಸೈಟುಗಳ ಹಬ್ಬದ ಆಫರ್ ಗಳ ವಿರುದ್ಧ ದೇಶದ ಗ್ರಾಹಕ ವಲಯ ಗರಂ ಆಗಿದೆ. ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಪ್ರತಿನಿಧಿಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಈ ಕುರಿತಾದ ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದಾರೆ.

ವಿವಿಧ ಇ-ಕಾಮರ್ಸ್ ಸೈಟುಗಳು ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತಾಗಿ CAIT ಅಧ್ಯಕ್ಷ ಬಿ ಸಿ ಭಾರ್ಟಿಯಾ ಮತ್ತು ಕಾರ್ಯದರ್ಶಿ ಪ್ರವೀಣ್ ಖಾಂಡೇಲ್ ವಾಲ್ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಯಾವುದೇ ಉತ್ಪನ್ನಗಳ ಸಂಗ್ರಾಹಕರು ಮಾತ್ರವೇ ತಮ್ಮ ಉತ್ಪನ್ನಗಳನ್ನು ಇಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಬಹುದೇ ಹೊರತು ಇ-ಕಾಮರ್ಸ್ ಸೈಟುಗಳಿಗೆ ಇಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುವ ಹಕ್ಕು ಇರುವುದಿಲ್ಲ. ಯಾಕೆಂದರೆ ಈ ಸೈಟುಗಳು ಯಾವುದೇ ಉತ್ಪನ್ನಗಳ ಮಾಲಕರಾಗಿರುವುದಿಲ್ಲ, ಬದಲಾಗಿ ಅವುಗಳು ಕೇವಲ ಮಾರಾಟ ಮಾಧ್ಯಮಗಳಷ್ಟೇ ಎಂಬುದು ಭಾರ್ಟಿಯಾ ಅವರ ವಾದವಾಗಿದೆ.

ಮಾತ್ರವಲ್ಲದೇ ಇ ಕಾಮರ್ಸ್ ಸೈಟುಗಳು ಈ ರೀತಿಯ ಆಫರ್ ಸಮರಕ್ಕಿಳಿಯುವುದು 2016ರ ಎಫ್.ಡಿ.ಐ. ನೀತಿಗೂ ವಿರುದ್ಧವಾದುದಾಗಿದೆ. ಈ ನೀತಿಯ ಅನುಸಾರ ಇ-ಕಾಮರ್ಸ್ ಸೈಟುಗಳು ಯಾವುದೇ ಉತ್ಪನ್ನದ ಮಾರಾಟ ಮತ್ತು ದರಗಳ ಮೇಲೆ ಪ್ರಭಾವ ಬೀರುವಂತಿಲ್ಲ. ಆದರೆ ಈ ರೀತಿ ಆಫರ್ ಗಳನ್ನು ನೀಡುವ ಮೂಲಕ ಇವುಗಳು ಸರಕಾರದ ನೀತಿ ನಿಯಮಗಳನ್ನು ಸಾರಾಸಗಾಟಾಗಿ ಗಾಳಿಗೆ ತೂರುತ್ತಿವೆ ಎಂದು ಭಾರ್ಟಿಯಾ ಕಿಡಿ ಕಾರಿದ್ದಾರೆ.

ಇನ್ನು ಹೆಚ್ಚಿನೆಲ್ಲಾ ಇ-ಕಾಮರ್ಸ್ ಸೈಟುಗಳು ತಮ್ಮದೇ ಆದ ಉತ್ಪನ್ನ ಸಂಗ್ರಹ ಮಳಿಗೆಗಳನ್ನು ಹೊಂದಿರುವ ಕುರಿತಾಗಿಯೂ ಭಾರ್ಟಿಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆನ್ ಲೈನ್ ಮಾರ್ಕೆಟಿಂಗ್ ತಾಣಗಳು ಕೇವಲ ಮಾರಾಟ ತಾಣಗಳು ಮಾತ್ರವೇ ಆಗಿದ್ದರೆ ಇವುಗಳು ಸಂಗ್ರಹ ಮಳಿಗೆಗಳನ್ನು ಹೊಂದಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

Advertisement

ಸರಕಾರದ ಕಾನೂನಿನ ಪ್ರಕಾರ ಇ-ಕಾಮರ್ಸ್ ಸೈಟುಗಳು ಉತ್ಪನ್ನಗಳನ್ನು ಸಂಗ್ರಹಿಸಿಡುವಂತಿಲ್ಲ. ಇನ್ನು ಇ ಕಾಮರ್ಸ್ ಸೈಟುಗಳು ನೀಡುತ್ತಿರುವ ಕ್ಯಾಶ್ ಬ್ಯಾಕ್ ಆಫರ್ ಗಳನ್ನೂ ಸಹ ನಿಲ್ಲಿಸುವಂತೆ ವ್ಯಾಪಾರಿಗಳ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ. ಇಷ್ಟು ಮಾತ್ರವಲ್ಲದೇ ಇ-ಕಾಮರ್ಸ್ ಸೈಟುಗಳ ಹಬ್ಬದ ಆಫರ್ ಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲೂ ಸಹ ವ್ಯಾಪಾರಿಗಳ ಒಕ್ಕೂಟ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.

ಸ್ಪರ್ಧಾತ್ಮಕವಲ್ಲದ ದರಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆನ್ ಲೈನ್ ಕಂಪೆನಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೀಯೂಶ್ ಗೋಯಲ್ ಇತ್ತಿಚೆಗಷ್ಟೇ ಹೇಳಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ದೇಶದ ವ್ಯಾಪಾರಿ ವರ್ಗವು ಒಂದುಕಡೆ ಆರ್ಥಿಕ ಹಿನ್ನಡೆಯ ಕಹಿ ಅನುಭವಿಸುತ್ತಿದ್ದರೆ ಇನ್ನೊಂದೆಡೆ ಇ-ಕಾಮರ್ಸ್ ಸೈಟ್ ಗಳ ಸ್ಪರ್ಧೆಯಿಂದಲೂ ಹಿನ್ನಡೆ ಅನುಭವಿಸುತ್ತಿದೆ. ಮುಂಬರುವ ದಿನಗಳಲ್ಲಿ ವ್ಯಾಪಾರಿಗಳ ಸಮಸ್ಯೆಗೆ ಸರಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next